ಬೆಂಗಳೂರು, (ಜೂನ್.07): ಬೆಂಗಳೂರಿನಲ್ಲಿ ಶನಿವಾರ ತಡರಾತ್ರಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ.

ನಗರದ ಎಚ್‍ಎಎಲ್ ಸಮೀಪ  ಅರವಿಂದ್ (27)  ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇನ್ನೊಂದೆಡೆ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಸಮೀಪದಲ್ಲೇ ಇರುವ ಮುತ್ತೂಟ್ ಫೈನಾನ್ಸ್ ಸೆಕ್ಯೂರಿಟಿ ಗಾರ್ಡ್ ಶಿವಣ್ಣ (65) ಎಂಬಾತನನ್ನು ಸಹ ಅಪರಿಚಿತ ದುಷ್ಕರ್ಮಿಗಳು ಭೀಕರ ಹತ್ಯೆ ಮಾಡಿದ್ದಾರೆ.

ಮಾಗಡಿ: ಆಸ್ತಿ ಆಸೆಗಾಗಿ ಪತ್ನಿಯನ್ನೇ ಕೊಂದ ಪತಿ..?

ವಾಚ್‍ಮೆನ್ ಹತ್ಯೆ
ಮುತ್ತೂಟ್ ಫೈನಾನ್ಸ್ ವಾಚ್‍ಮೆನ್ ಆಗಿದ್ದ  ಶಿವಣ್ಣ ಎನ್ನುವರ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಶನಿವಾರ ರಾತ್ರಿ ಈತ ಇದೇ ಬಿಲ್ಡಿಂಗ್‍ನ ಎರಡನೇ ಮಹಡಿಗೆ ಊಟಕ್ಕೆ ಹೋಗಿದ್ದಾರೆ. 

ಆ ಸಂದರ್ಭದಲ್ಲಿ ಅವರ ಪರಿಚಯಸ್ಥರು ಅಲ್ಲಿಗೆ ಬಂದಿದ್ದು, ಅವರ ನಡುವೆ ಜಗಳ ನಡೆದಿದೆ. ನಂತರ ಶಿವಣ್ಣ ಅವರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಈ ಬಗ್ಗೆ ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಜೈಲಿನಿಂದ ಹೊರ ಬಂದವನನ್ನು ಕೊಚ್ಚಿದರು
ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ ಅರವಿಂದ್ ಎಂಬಾತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶನಿವರ ರಾತ್ರಿ ಎಚ್‍ಎಎಲ್ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್‍ಬಿಎಸ್ ನಗರದಲ್ಲಿ ನಡೆದಿದೆ. ಮೃತನನ್ನು ಅರವಿಂದ ಅಲಿಯಾಸ್ ಪಾಗಲ್ ಸೀನ (27) ಎಂದು ಗುರುತಿಸಲಾಗಿದೆ. ಎಲ್‍ಬಿಎಸ್ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಅರವಿಂದ ಹಾಗೂ ಆತನ ಸ್ನೇಹಿತರು ತಂಗಿದ್ದರು. 

 ಅರವಿಂದ್ ಜೈಲಿನಿಂದ ಬಿಡುಗಡೆಯಾಗಿದ್ದನೆನ್ನಲಾಗಿದ್ದು ಹಳೆ ದ್ವೇಷದ ಕಾರಣ ಈ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ. ಎಚ್‍ಎಎಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.