* ಪಾತಕ ಲೋಕ ಬಿಟ್ಟಿದ್ದಾಗಿ ಹೇಳಿಕೊಂಡಿದ್ದ ವೃತ್ತಿಪರ ಪಾತಕಿ* ಆರೋಪಿಗಳಿಂದ 23 ಗ್ರಾಂ ಎಂಡಿಎಂಎ ಜಪ್ತಿ* ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ವೇಳೆ ಇಬ್ಬರ ಬಂಧನ
ಬೆಂಗಳೂರು(ಮಾ.31): ನಗರದಲ್ಲಿ ಡ್ರಗ್ಸ್(Drugs) ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ನಿವಾಸಿ ಹಸನ್ ಸಾದಿಕ್ ಅಲಿಯಾಸ್ ಬ್ಲೇಡ್ ಸಾದಿಕ್ ಹಾಗೂ ಬೆನ್ಸನ್ ಟೌನ್‌ನ ತಲ್ಲಾಖಾನ್ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 23 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಹೆಬ್ಬಾಳದ ನಾಗೇನಹಳ್ಳಿ ಮುಖ್ಯರಸ್ತೆ ಸಮೀಪ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದಾಗ ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಹಸನ್ ಸಾದಿಕ್ ವೃತ್ತಿಪರ ಕ್ರಿಮಿನಲ್ ಆಗಿದ್ದು, ದಶಕಗಳಿಂದ ಆತ ಪಾತಕಲೋಕದಲ್ಲಿ ಸಕ್ರಿಯವಾಗಿದ್ದಾನೆ. ಸಾದಿಕ್ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ, ಉಪ್ಪಿನಂಗಡಿ, ಪುತ್ತೂರು ಹಾಗೂ ಕಾವೂರು ಇತರೆ ಠಾಣೆಗಳಲ್ಲಿ 17 ಪ್ರಕರಣಗಳು ದಾಖಲಾಗಿವೆ. ಕರಾವಳಿ ಭಾಗದಲ್ಲಿ ಪೊಲೀಸರು ಬೆನ್ನಹತ್ತಿದ್ದರಿಂದ ಬೆದರಿದ ಸಾದಿಕ್, ತನ್ನ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೆ(Bengaluru) ಬದಲಾಯಿಸಿಕೊಂಡಿದ್ದಾನೆ. ಮೊದಲು ಪಾತಕಲೋಕದಿಂದ ದೂರ ಸರಿದಿರುವುದಾಗಿ ಹೇಳಿಕೊಂಡು ಆತ ಚಾಲಕ ವೃತ್ತಿ ಆರಂಭಿಸಿದ್ದ. ಆಗ ಸೆಕೆಂಡ್ ಹ್ಯಾಂಡ್ ಕಾರು ಮಾರಾಟಗಾರ ತಲ್ಲಾಖಾನ್ ಪರಿಚಯವಾಗಿದೆ. ಹೀಗಿರುವಾಗ ತನ್ನ ಹಳೇ ಪ್ರಕರಣಗಳ ನಿರ್ವಹಣೆಗೆ ನ್ಯಾಯಾಲಯದ ಖರ್ಚಿಗೆ ಆತ ಹಣದ ಅಗತ್ಯ ಬಿದ್ದಿದೆ. ಆಗ ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ದಂಧೆಗೆ ಸಾದಿಕ್ ಇಳಿದಿದ್ದು, ಆತನಿಗೆ ತಲ್ಲಾಖಾನ್ ಸಾಥ್ ಕೊಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ.
Bengaluru Crime: ಸ್ಟೀಲ್ ಡಬ್ಬಿಗಳಲ್ಲಿ ತುಂಬಿದ್ದ 9.23 ಕೋಟಿ ಡ್ರಗ್ಸ್ ವಶ
ಐವರು ಪೆಡ್ಲರ್‌ಗಳ ಸೆರೆ: 102 ಕೆ.ಜಿ. ಗಾಂಜಾ ವಶ
ಬೆಂಗಳೂರು: ಅಕ್ರಮವಾಗಿ ಗಾಂಜಾ(Marijuana) ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಡ್ರಗ್ಸ್ ಪೆಡ್ಲರ್‌ಗಳನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ ಘಟನೆ ಮಾ. 26 ರಂದು ನಡೆದಿತ್ತು.
ಹನೂರು ಮೂಲದ ಶಿವರಾಮ ಅಲಿಯಾಸ್ ಬುಲೆಟ್ ಶಿವರಾಮ(50), ರಮೇಶ್(24), ಬಿಟಿಎಂ 1ನೇ ಹಂತದ ಮಂಜುನಾಥ ಅಲಿಯಾಸ್ ಪೆಟ್ರೋಲ್(23), ಯಲಹಂಕದ ಅಭಿಲಾಷ್ (23) ಹಾಗೂ ಆಡುಗೋಡಿ ಮೂರ್ತಿ(24) ಬಂಧಿತರು. ಆರೋಪಿಗಳಿಂದ 40 ಲಕ್ಷ ರು. ಮೌಲ್ಯದ 102 ಕೆ.ಜಿ. ತೂಕದ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮಾ.16ರಂದು ಕೋರಮಂಗಲ 1ನೇ ಬ್ಲಾಕ್, ಬಳ್ಳಾರಿ ಕಾಲೋನಿಯ ಬಳಿ ಖಾಲಿ ನಿವೇಶನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳ ಚಾಮರಾಜನಗರದ ಹನೂರು ತಾಲೂಕಿನ ಪುಪ್ಪಪುರ ಗ್ರಾಮದ ನಿವಾಸಿಗಳಿಂದ ಕಡಿಮೆ ದರಕ್ಕೆ ಗಾಂಜಾ ಖರೀದಿಸಿ ನಂತರ ಬೆಂಗಳೂರಿಗೆ ತಂದು ಕೋರಮಂಗಲ, ಎಚ್‌ಎಸ್‌ಆರ್ ಲೇಔಟ್, ಕೆ.ಆರ್.ಪುರ, ಬೇಗೂರು, ಕೋಣನಕುಂಟೆ ಹಾಗೂ ಇತರೆ ಪ್ರದೇಶಗಳಲ್ಲಿ ದುಬಾರಿ ದರಕ್ಕೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಲ್ಲ ಆರೋಪಿಗಳು ಅಪರಾಧ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಜೆ.ಪಿ.ನಗರ, ಮಡಿವಾಳ, ಆಡುಗೋಡಿ, ಕೋರಮಂಗಲ, ಕೊಳ್ಳೇಗಾಲ ಸೇರಿದಂತೆ ವಿವಿಧ ಪೊಲೀಸ್(police) ಠಾಣೆಗಳಲ್ಲಿ ಮಾದಕವಸ್ತು ಮಾರಾಟ, ಕೊಲೆ, ಸರ ಅಪಹರಣ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು ಜಾಮೀನಿನ ಮೇಲೆ ಹೊರಬಂದ ಬಳಿಕವೂ ದುಷ್ಕೃತ್ಯಗಳಲ್ಲಿ ತೊಡಗಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಗೆ ಡ್ರಗ್ಸ್ ಮಾರುತ್ತಿದ್ದ ಪೆಡ್ಲರ್ ಸೆರೆ
ಕಾಲೇಜು ವಿದ್ಯಾರ್ಥಿಗಳಿಗೆ(Students) ಮಾದಕವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ಸ್ ಪೆಡ್ಲರ್‌ನೊಬ್ಬನನ್ನು ಕೇಂದ್ರ ಅಪರಾಧ ವಿಭಾಗ(ccB)ದ ಪೊಲೀಸರು ಬಂಧಿಸಿದ್ದಾರೆ.
Drugs Racket in Karnataka: 'ಡ್ರಗ್ಸ್ ಪೆಡ್ಲರ್‌ಗಳ ಎನ್‌ಕೌಂಟರ್ ಮಾಡಿ'
ವಂಸತನಗರದ ಅಜಯ್ ಕುಮಾರ್ (28) ಬಂಧಿತ ಪೆಡ್ಲರ್. ಆರೋಪಿಯಿಂದ .1.5 ಲಕ್ಷ ಮೌಲ್ಯದ 11 ಗ್ರಾಂ ತೂಕದ 22 ಎಂಡಿಎಂಎ ಎಕ್ಸ್‌ಟೆಸಿ ಪಿಲ್ಸ್‌ಗಳು ಹಾಗೂ ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಆರೋಪಿಯು ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮೇರೆಗೆ ದಾಳಿ ನಡೆಸಿ ಮಾಲು ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಅಕ್ರಮವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಪರಿಚಿತ ವ್ಯಕ್ತಿಯೊಬ್ಬನಿಂದ ಕಡಿಮೆ ದರಕ್ಕೆ ಮಾದಕವಸ್ತು ಖರೀದಿಸಿ ಬಳಿಕ ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಚಿತ ಗಿರಾಕಿಗಳಿಯಿಂದ ದುಬಾರಿ ಹಣ ಪಡೆದು ಮಾರಾಟ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈತನಿಗೆ ಮಾದಕವಸ್ತು ಪೂರೈಸುತ್ತಿದ್ದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
