Asianet Suvarna News Asianet Suvarna News

ಬೆಳಗಾವಿ: ಹೆಚ್ಚಾದ ನಕಲಿ ಪತ್ರಕರ್ತರ ಹಾವಳಿ, ಹಣಕ್ಕಾಗಿ ಧಮ್ಕಿ..!

ನಕಲಿ‌ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲು ಮುಂದಾದ ಬೆಳಗಾವಿ ಪೊಲೀಸರು 

Belagavi SP Dr Sanjeev Patil Talks Fake Journalists grg
Author
Bengaluru, First Published Aug 3, 2022, 10:55 PM IST

ಬೆಳಗಾವಿ(ಆ.03):  ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗುತ್ತಿದೆ. ಪತ್ರಕರ್ತರ ಸೋಗಿನಲ್ಲಿ ಮನೆಗಳಿಗೆ ನುಗ್ಗಿ ತಪಾಸಣೆ ಮಾಡುವವರೆಗೂ ನಕಲಿ ಪತ್ರಕರ್ತರ ಮುಂದಾಗಿದ್ದಾರೆ. ಹೀಗೆ ಮಹಿಳೆಯರು ಇದ್ದ ಮನೆಗೆ ತೆರಳಿ ಮನೆ ತಪಾಸಣೆ ಮಾಡಿರುವ ನಕಲಿ‌ ಪತ್ರಕರ್ತರ ವಿರುದ್ಧ ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಹೀಗೆ ಗ್ಯಾಂಗ್ ಕಟ್ಟಿಕೊಂಡು ಮನೆಗೆ ನುಗ್ಗಿ ಮೂಟೆಗಳನ್ನ ತಪಾಸಣೆ ಮಾಡುತ್ತಿರುವದು ಯಾರೋ ಸಿಬಿಐ, ಸಿಐಡಿ ಅಧಿಕಾರಿಗಳಲ್ಲ. ಇವರೆಲ್ಲ ನಕಲಿ ಪತ್ರಕರ್ತರು. ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದೀರಿ ಎಂದು ಆರೋಪಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರಲಿ ಗ್ರಾಮದ ಸುನಿತಾ ಪಾಟೀಲ್ ಎಂಬ ಮಹಿಳೆ‌‌ ಮನೆಗೆ ನುಗ್ಗಿ  ವೀಡಿಯೋ ಚಿತ್ರೀಕರಣ ಮಾಡಿದ್ದಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಮೂವರು ನಕಲಿ‌ ಪತ್ರಕರ್ತರ ವಿಡಿಯೋ‌ ಚಿತ್ರೀಕರಿಸಿ ಮಹಿಳೆ ಪೊಲೀಸರಿಗೆ ನೀಡಿ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ನಕಲಿ ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಾಯರ್ ಮನೆಗೆ ದೋಚಲು ಕಳ್ಳನಿಗೆ ನೆರವಾದ ಪ್ರೇಯಸಿ, 24 ಗಂಟೆಯೊಳಗೆ ಆರೋಪಿಗಳು ಅಂದರ್

ಮಹಿಳೆ ನೀಡಿದ ದೂರಿನಡಿ ನಕಲಿ ಯೂ ಟ್ಯೂಬ್ ಪತ್ರಕರ್ತರಾದ ಗೋಕಾಕ‌ ಪಟ್ಟಣದ ಅಮರ್ ಕೊಡತೆ, ಘಟಪ್ರಭಾ ಗ್ರಾಮದ ವಿವೇಕಾನಂದ ಕುದರಿಮಠ ಹಾಗೂ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಗಂಗಾಧರ ಶಿರಗಾವೆ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ಇಟ್ಟಿದ್ದ ದವಸ ದಾನ್ಯಗಳ ವೀಡಿಯೋ ಇಟ್ಟುಕೊಂಡು ಹಣ ನೀಡಿ, ಇಲ್ಲವಾದರೆ ನೀವು ಅಕ್ರಮ ಅಕ್ಕಿ ದಾಸ್ತಾನು ಮಾಡಿರುವುದಾಗಿ ಸುದ್ದಿ ಬಿತ್ತರಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ. ಅಲ್ಲದೇ ನನ್ನ ಮೇಲೆ ದೈಹಿಕ‌ ಹಲ್ಲೆ ನಡೆಸಲು ಇವರು ಮುಂದಾಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ ಅಂತ ಬೆಳಗಾವಿ ಎಸ್‌ಪಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ.  

ಒಟ್ಟಿ‌ನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಕಲಿ ಪತ್ರಕರ್ತರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.‌ ಕೈಯಲ್ಲಿ ಒಂದು ಲೋಗೋ‌ ಹಿಡಿದು ನಾನು ಪತ್ರಕರ್ತ ಎಂದು ಜನರಿಗೆ, ಅಧಿಕಾರಿಗಳಿಗೆ ಹೆದರಿಕೆ ಹಾಕಿ ಹಣ ವಸೂಲಿಗೆ ಇಳಿದಿರುವ ಇಂಥ ನಕಲಿ‌ ಪತ್ರಕರ್ತರನ್ನ ಮಟ್ಟ ಹಾಕಲು ಪೊಲೀಸ್ ಇಲಾಖೆ ಜೊತೆಗೆ ಸರಕಾರ ಮುಂದಾಗಬೇಕಿದೆ.
 

Follow Us:
Download App:
  • android
  • ios