ತಾವು ಗುಜರಾತಿನ ಗೋಮತಿ ನದಿ ತೀರದಿಂದ ತುಂಬಾ ಬೆಲೆ ಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದಿದ್ದೇವೆ ಎಂದು ಹೇಳಿ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಇನ್ಸ್‌ಪೆಕ್ಟರ್‌ ಆರ್‌.ದುರ್ಗಾ ತಂಡದಿಂದ ದಾಳಿ. 

ಬೆಂಗಳೂರು(ಮಾ.18): ವಿಷ್ಣು ರೂಪದ ಅದೃಷ್ಟತರುವ ಸಾಲಿ ಗ್ರಾಮ ಕಲ್ಲುಗಳು ಎಂದು ಜನರಿಗೆ ನಂಬಿಸಿ ಕಪ್ಪು ಕಲ್ಲುಗಳನ್ನು ಎರಡು ಕೋಟಿ ರು.ಗೆ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದ ಮನೋಜ್‌ ಹಾಗೂ ಆದಿತ್ಯ ಸಾಗರ್‌ ಬಂಧಿತರಾಗಿದ್ದು, ಆರೋಪಿಗಳಿಂದ ಎರಡು ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿಗೆ ರಾಜಾಜಿನಗರದ ಹೋಟೆಲ್‌ಗೆ ಗ್ರಾಹಕರನ್ನು ಕರೆಸಿಕೊಂಡು ಆರೋಪಿಗಳು, ತಾವು ಗುಜರಾತಿನ ಗೋಮತಿ ನದಿ ತೀರದಿಂದ ತುಂಬಾ ಬೆಲೆ ಬಾಳುವ ಸಾಲಿಗ್ರಾಮದ ಎರಡು ಕಲ್ಲುಗಳನ್ನು ತಂದಿದ್ದೇವೆ ಎಂದು ಹೇಳಿ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಇನ್ಸ್‌ಪೆಕ್ಟರ್‌ ಆರ್‌.ದುರ್ಗಾ ತಂಡ ದಾಳಿ ನಡೆಸಿದೆ.

ಬೆಂಗಳೂರು: ಪೊಲೀಸರ ಐಡಿ ತೋರಿಸಿ 1.48 ಲಕ್ಷ ಎಗರಿಸಿದ ಸೈಬರ್‌ ಚೋರರು..!

ಬ್ಯುಸಿನೆಸ್‌ನಲ್ಲಿ ನಷ್ಟದ ಬಳಿಕ ವಂಚನೆ

ಸೊಲ್ಲಾಪುರದಲ್ಲಿ ಮನೋಜ್‌ ಬಟ್ಟೆವ್ಯಾಪಾರ ಹಾಗೂ ಆದಿತ್ಯ ಗ್ರಾನೈಟ್‌ ಮಾರಾಟದಲ್ಲಿ ತೊಡಗಿದ್ದರು. ಲಾಕ್‌ಡೌನ್‌ ಬಳಿಕ ಇಬ್ಬರು ವ್ಯಾಪಾರದಲ್ಲಿ ನಷ್ಟವಾಯಿತು. ನಂತರ ಜಂಟಿ ಪಾಲುದಾರಿಕೆಯಲ್ಲಿ ಅವರು ರಿಯಲ್‌ ಎಸ್ಟೇಟ್‌ ಶುರು ಮಾಡಿದ್ದರು. ಅದರಲ್ಲೂ ಕೂಡಾ ಕೈ ಸುಟ್ಟುಕೊಂಡು ಆರ್ಥಿಕ ಸಂಕಷ್ಟಕ್ಕೆ ತುತ್ತಾದರು. ಈ ಸಮಸ್ಯೆಯಿಂದ ಹೊರ ಬರಲು ಸಾಲಿಗ್ರಾಮ ಮಾರಾಟದ ನೆಪದಲ್ಲಿ ಜನರಿಗೆ ಟೋಪಿ ಹಾಕಿ ಹಣ ಸಂಪಾದಿಸಲು ಆರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕೈದು ತಿಂಗಳಿಂದ ಕೆಲ ಸಾರ್ವಜನಿಕರನ್ನು ಸಂಪರ್ಕಿಸಿ ವಿಷ್ಣುರೂಪದ ಅದೃಷ್ಟತರುವ ಸಾಲಿಗ್ರಾಮದ ಕಲ್ಲುಗಳಿವೆ ಎಂದು ಹೇಳಿ ವಂಚಿಸಲು ಆರೋಪಿಗಳು ಪ್ರಯತ್ನಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಇನ್ಸ್‌ಪೆಕ್ಟರ್‌ ದುರ್ಗಾ ಅವರು, ಸಾಲಿಗ್ರಾಮ ಖರೀದಿಸುವ ನೆಪದಲ್ಲಿ ನಗರಕ್ಕೆ ಕರೆಸಿಕೊಂಡು ಖೆಡ್ಡಾಕ್ಕೆ ಕೆಡವಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.