ಬೆಂಗಳೂರು: ಪಬ್, ಬಾರ್ ಖರ್ಚಿಗಾಗಿ 30 ಬೈಕ್ ಎಗರಿಸಿದ್ದ ಖದೀಮರ ಬಂಧನ
ಖತರ್ನಾಕ್ ಕಳ್ಳರಿಂದ 18 ಲಕ್ಷ ಮೌಲ್ಯದ 30 ಬೈಕ್‌ಗಳ ಜಪ್ತಿ, ಕದ್ದ ಬೈಕ್ ಕೇವಲ 10-20 ಸಾವಿರಕ್ಕೆ ಮಾರಿ ಮೋಜು ಮಸ್ತಿ
ಬೆಂಗಳೂರು(ಅ.25): ಅಂಗಡಿ ಮುಂಗಟ್ಟುಗಳು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮಪುರದ ಕೃತಿಕ್ (18) ಮತ್ತು ಮಾಗಡಿ ಮುಖ್ಯರಸ್ತೆಯ ವಿಜಯ್ ಅಲಿಯಾಸ್ ಕರಿಯಾ (21) ಬಂಧಿತರು. ಆರೋಪಿಗಳಿಂದ 18 ಲಕ್ಷ ಮೌಲ್ಯದ ವಿವಿಧ ಕಂಪನಿಗಳ 30 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಬಂಧನಕ್ಕೆ ಇನ್‌ಸ್ಪೆಕ್ಟರ್ ಶಂಕರ್‌ನಾಯಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಕಾರ್ಯಾಚರಣೆ ನಡೆಸಿ ಈ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಮೋಜು-ಮಸ್ತಿಗೆ ಸುಲಭವಾಗಿ ಹಣ ಹೊಂದಿಸುವ ಉದ್ದೇಶದಿಂದ ನಗರದಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು. ರಾತ್ರಿ ವೇಳೆ ರಸ್ತೆಬದಿಯ ಪೆಟ್ಟಿಅಂಗಡಿಗಳಿಗೆ ನುಗ್ಗಿ ನಗದು ದೋಚುತ್ತಿದ್ದರು.
Tumakuru: ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ
ಬಳಿಕ ಸುತ್ತಮುತ್ತಲ ಅಂಗಡಿ-ಮುಂಗಟುಗಳು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಬಳಿಕ ಆ ದ್ವಿಚಕ್ರ ವಾಹನಗಳನ್ನು ಪರಿಚಿತರಿಗೆ .10-20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಬಳಿಕ ಬಾರ್, ಪಬ್‌ಗೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದರು. ಹಣ ಖಾಲಿಯಾದ ಬಳಿಕ ಮತ್ತೆ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಬಂಧನದಿಂದ ಬ್ಯಾಟರಾಯನಪುರ 4, ಕೆ.ಜಿ.ನಗರ ಮತ್ತು ಚಂದ್ರಾಲೇಔಟ್ ತಲಾ 2, ವಿವೇಕನಗರ, ಕಾಟನ್‌ಪೇಟೆ, ಕೆಂಗೇರಿ, ಯಲಹಂಕ ನ್ಯೂಟೌನ್, ಕಾಮಾಕ್ಷಿಪಾಳ್ಯ, ಚಾಮರಾಜಪೇಟೆ, ಮಾಗಡಿ ರಸ್ತೆ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ತಲಾ ಒಂದು ಪ್ರಕರಣ ಸೇರಿದಂತೆ ಒಟ್ಟು 17 ದ್ವಿಚಕ್ರ ವಾಹನ ಕಳವು ಪ್ರಕರಣ ಪತ್ತೆಯಾಗಿವೆ. ಆರೋಪಿ ವಿಜಯ್ ವಿರುದ್ಧ ಈ ಹಿಂದೆ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ದಾಖಲಾಗಿದ್ದು, ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದ ಬಳಿಕ ಕೃತಿಕ್ ಜತೆ ಸೇರಿಕೊಂಡು ದ್ವಿಚಕ್ರ ವಾಹನ ಕಳವು ಕೃತ್ಯ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.