ಗದಗ(ನ.18): ನಗರದ ಕೆ.ಸಿ.ರಾಣಿ ರಸ್ತೆಯ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ 65 ವರ್ಷದ ವೃದ್ಧೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನ.11 ರಂದು ಗದಗ ನಗರದ ಕೆ.ಸಿ.ರಾಣಿ ರಸ್ತೆಯ ಸೀತಾ ನಿವಾಸದಲ್ಲಿ ವಾಸವಾಗಿದ್ದ ಒಂಟಿ ವೃದ್ಧೆ ಪುಪ್ಪಾ ಹೆಬಸೂರ ಎನ್ನುವವರನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಪುಷ್ಪಾಳ ತಂಗಿಯ ಮಗ ಧನುಷ್‌ ಹಾಗೂ ಆತನ ಸ್ನೇಹಿತ ವಿನಯ ಎನ್ನುವಾತರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ: ಪಿಎಸ್‌ಐ ಸಸ್ಪೆಂಡ್‌

ಜನ ನಿಬಿಡವಾದ ಪ್ರದೇಶವಾದರೂ ಆರೋಪಿಗಳು ಸಣ್ಣದೊಂದು ಸುಳಿವು ಸಿಗದ ಹಾಗೇ ಹತ್ಯೆ ಮಾಡಿದ್ದರು. ಎಸ್ಪಿ ಯತೀಶ ಎನ್‌ ಹಾಗೂ ಬೆಟಗೇರಿ ಬಡವಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದರು. ಶ್ವಾನದಳ ಹಾಗೂ ಬೆರಳು ತಜ್ಞರ ಸಹ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದರು. ಆದರೆ ಯಾವುದೇ ವೈಷಮ್ಯ ಇಲ್ಲದೆ ಒಂಟಿಯಾಗಿ ಪುಷ್ಪಾ ಬದುಕು ಸಾಗಿಸುತ್ತಿದ್ದಳು. ತನ್ನ ಮೂವರು ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟಿದ್ದಾಳೆ. ಅವರು ಸಹ ಕೊಲೆಯ ಕುರಿತು ಯಾವುದೇ ಸಂಶಯ ವ್ಯಕ್ತಪಡಿಸಿರಲ್ಲಿಲ್ಲ. ಹೀಗಾಗಿ ಪೊಲೀಸರಿಗೆ ಪ್ರಕರಣ ಸಾಕಷ್ಟುಸವಾಲಾಗಿತ್ತು.

ಕೊಲೆಯಾದ ಪುಷ್ಪಾ ಹೆಬಸೂರ ಅವರ ತಂಗಿ ಶಿವಮೊಗ್ಗದಲ್ಲಿ ವಾಸವಾಗಿದ್ದು, ತಂಗಿಯ ಮಗ ಸರಿಯಾಗಿ ಕೆಲಸ ಮಾಡದೆ ಓಡಾಡಿಕೊಂಡಿದ್ದ, ಹಾಗಾಗಿ ಪುಷ್ಪಾ ಅವರು ತಂಗಿಗೆ ಕರೆ ಮಾಡಿ ಮಾಡಿ ನಿನ್ನ ಮಗನಿಗೆ ಬುದ್ದಿವಾದ ಹೇಳು ಎಂದಿದ್ದರು.ಆಗ ತಂಗಿಯ ಮನೆಯಲ್ಲಿ ಸ್ವಲ್ಪ ಜಗಳವಾಗಿದ್ದು, ಪರಿಣಾಮ ಇಷ್ಟೇಲ್ಲಾ ರಾದ್ಧಾಂತಕ್ಕೆ ದೊಡಮ್ಮ ಪುಷ್ಪಾ ಕಾರಣ ಎಂದು ತನ್ನ ಸೇಹಿತ ವಿನಯ ಜೊತೆಗೆ ಧನುಷ್‌ ನೇರವಾಗಿ ಶಿವಮೊಗ್ಗದಿಂದ ಗದಗ ನಗರಕ್ಕೆ ಬಂದು ಕೊಲೆ ಮಾಡಿ, ಪರಾರಿಯಾಗಿದ್ದನು ಎನ್ನಲಾಗಿದೆ. ಈ ಕುರಿತು ತನಿಖೆ ಪ್ರಾರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯ ಹಾಗೂ ಸಿಮ್‌ ನೆಟವರ್ಕ್ ಮೂಲಕ ಆರೋಪಿಗಳನ್ನು ಪತ್ತೆ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.