ಬೆಂಗಳೂರು(ನ.18):ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಪೊಲೀಸ್‌ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ವೊಬ್ಬರನ್ನು (ಪಿಎಸ್‌ಐ) ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಿಎಸ್‌ಐ ವಿಶ್ವನಾಥ್‌ ಬಿರಾದಾರ್‌ ಅಮಾನತುಗೊಂಡವರು. ಇದೇ ವೇಳೆ ಯುವತಿ ವಿರುದ್ಧ ಬಿರಾದಾರ್‌ ಪ್ರತಿ ದೂರು ಸಲ್ಲಿಸಿದ್ದಾರೆ.

ಸಂತ್ರಸ್ತ ಯುವತಿ, ವಿಶ್ವನಾಥ್‌ ವಿರುದ್ಧ ಆತ್ಯಾಚಾರ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕರ್ತವ್ಯನಿರತ ಅಧಿಕಾರಿ ವಿರುದ್ಧ ಪ್ರಕರಣ ದಾಖಲಾಗಿರುವ ಕುರಿತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವರದಿ ಕಳುಹಿಸಿದ್ದರು. ಇದನ್ನು ಆಧರಿಸಿ ಎಸ್‌ಐ ವಿಶ್ವನಾಥ್‌ ಬಿರಾದರ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೇ ವೇಳೆ ಪೊಲೀಸ್‌ ಅಧಿಕಾರಿ ಕೂಡ ಠಾಣೆಯಲ್ಲಿ ಯುವತಿ ವಿರುದ್ಧ ದೂರು ದಾಖಲಿಸಿದ್ದಾರೆ.

ಯುವತಿ ಆರೋಪವೇನು?

ಮೂರು ತಿಂಗಳ ಹಿಂದೆ ಲ್ಯಾಪ್‌ಟಾಪ್‌ ಕಳೆದುಹೋಗಿತ್ತು. ಈ ಕುರಿತು ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ಕೊಡಲಾಗಿತ್ತು. ಪ್ರಕರಣದ ಕುರಿತು ವಿಚಾರಿಸಲು ಠಾಣೆಗೆ ಹೋದಾಗ ಎಸ್‌ಐ ವಿಶ್ವನಾಥ್‌ ಪರಿಚಯವಾಗಿತ್ತು. ಪ್ರತಿದಿನ ಕರೆ ಮಾಡುವುದು ಹಾಗೂ ಸಂದೇಶ ಕಳುಹಿಸುತ್ತಿದ್ದ. ಹಣದ ಸಹಾಯ ಮಾಡುವಂತೆ ಕೇಳಿದ್ದ. 12 ಲಕ್ಷ ರು.ಗೆ ಒತ್ತಾಯಿಸಿದ್ದ. ನಿನ್ನನ್ನು ಪ್ರೀತಿಸುತ್ತಿದ್ದೇನೆ. ಗುಪ್ತವಾಗಿ ಮಾತನಾಡಬೇಕಿದೆ, ಭೇಟಿಯಾಗುವಂತೆ ಹೇಳಿದ್ದ. ನ.8ರಂದು ತಂದೆ-ತಾಯಿಯನ್ನು ಭೇಟಿ ಮಾಡಿಸಿ, ಮದುವೆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿ ಮನೆಗೆ ಕರೆದೊಯ್ದಿದ್ದ. ಈ ವೇಳೆ ಮನೆಯಲ್ಲಿ ಆತನ ತಂದೆ-ತಾಯಿ ಇರಲಿಲ್ಲ. ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕ್ಷೇಪಿಸಿದಾಗ ಸುಮ್ಮನಾಗಿದ್ದ. ಮದುವೆಯಾಗುವುದಾಗಿ ನ.9ರಂದು ಧರ್ಮಸ್ಥಳಕ್ಕೆ ಕರೆತಂದಿದ್ದು, ವಸತಿ ಗೃಹದಲ್ಲಿ ಉಳಿದುಕೊಂಡಿದ್ದಾಗ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಯುವತಿ ಧರ್ಮಸ್ಥಳ ಠಾಣೆ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.

ಮ್ಯಾಟ್ರಿಮೋನಿ ಪರಿಚಯ-ದೈಹಿಕ ಸಂಪರ್ಕ : ಹೈಕೋರ್ಟ್‌ನಲ್ಲೊಂದು ಮಹತ್ವದ ತೀರ್ಪು

ಪಿಎಸ್‌ಐ ದೂರಿನಲ್ಲೇನಿದೆ?

ಯುವತಿ ಆಗಸ್ಟ್‌ನಲ್ಲಿ ಲ್ಯಾಪ್‌ಟಾಪ್‌ ಕಳವು ಆಗಿರುವ ಬಗ್ಗೆ ಚಾಮರಾಜಪೇಟೆಯಲ್ಲಿ ದೂರು ದಾಖಲಿಸಿದ್ದರು. ದೂರು ಕೊಡಲು ಬಂದಾಗ ಮೊಬೈಲ್‌ ಸಂಖ್ಯೆ ಪಡೆದು ತನಿಖೆ ಪ್ರಗತಿ ಬಗ್ಗೆ ವಿಚಾರಿಸುತ್ತಿದ್ದರು. ನ.8ರಂದು ಸಂಜೆ 5 ಗಂಟೆಯಲ್ಲಿ ಕರೆ ಮಾಡಿದ್ದ ಆಕೆ, ಲ್ಯಾಪ್‌ಟಾಪ್‌ ಬಗ್ಗೆ ಮಾಹಿತಿ ಸಿಕ್ಕಿದೆ. ಕೂಡಲೇ, ಬಸವನಗುಡಿಯ ಮ್ಯಾಕ್‌ ಡೊನಾಲ್ಡ್‌ಗೆ ಬರುವಂತೆ ಕರೆದಿದ್ದಳು. ಅಲ್ಲದೆ, ಸ್ವಲ್ಪ ತೊಂದರೆಯಲ್ಲಿದ್ದೇನೆ ಎಂದು ಹೇಳಿದ್ದಕ್ಕೆ ಹೋಗಿದ್ದೆ. ಸ್ಥಳಕ್ಕೆ ಹೋಗಿದ್ದಾಗ ಯುವತಿ ವಿವಾಹವಾಗುವಂತೆ ಒತ್ತಾಯಿಸಿದ್ದಳು. ಈಗಾಗಲೇ ನನಗೆ ನಿಶ್ಚಿತಾರ್ಥವಾಗಿದೆ ಎಂದು ತಿಳಿಸಿ, ಅಲ್ಲಿಂದ ವಾಪಸ್‌ ಆಗಿದ್ದೆ.

ಇದಾದ 10 ನಿಮಿಷಗಳ ಬಳಿಕ ಮತ್ತೇ ಕರೆ ಮಾಡಿ, ‘ನೀವು ಬಾರದೆ ಇದ್ದರೆ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ’ ಬೆದರಿಸಿದ್ದಳು. ಆಕೆಯ ಸೂಚನೆಯಂತೆ ರೈಲ್ವೆ ನಿಲ್ದಾಣಕ್ಕೆ ಹೋಗಿ ವಿಚಾರಿಸಿದಾಗ, ‘ನಾನು ಹೇಳಿದಂತೆ ಕೇಳಬೇಕು. ಇಲ್ಲವಾದರೆ ಪೊಲೀಸ್‌ ಕಮಿಷನರ್‌ಗೆ ದೂರು ಕೊಡುತ್ತೇನೆ. ನನ್ನ ಸಾವಿಗೆ ನೀನೆ ಕಾರಣ ಎಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಮತ್ತೇ ಬೆದರಿಸಿದ್ದಳು. ನಂತರ ಬೆದರಿಸಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದಳು 10 ಲಕ್ಷ ಕೊಡಬೇಕು. ಇಲ್ಲವಾದರೆ, ಅತ್ಯಾಚಾರ ಕೇಸ್‌ ದಾಖಲಿಸಿ, ಕೆಲಸದಿಂದ ತೆಗೆದು ಹಾಕಿಸುತ್ತೇನೆ. ಇದೇ ರೀತಿ, ಹನುಮೇಶ್‌, ಮಂಜುನಾಥ್‌ ಎಂಬುವರು ಸೇರಿದಂತೆ ಐವರನ್ನು ಜೈಲಿಗೆ ಕಳುಹಿಸಿದ್ದೇನೆ. ನಿನ್ನನ್ನು ಸಹ ಜೈಲಿನಲ್ಲಿ ಕೊಳೆಯುವಂತೆ ಬೆದರಿಸುತ್ತಿದ್ದಾಳೆ ಎಂದು ಆರೋಪಿಸಿ ಎಸ್‌ಐ ವಿಶ್ವನಾಥ್‌ ಬಿರಾದರ್‌ ದೂರಿನಲ್ಲಿ ವಿವರಿಸಿದ್ದಾರೆ.