Dharwad TVS finance loan harassment: ಧಾರವಾಡ ತಾಲೂಕಿನ ಯುವ ರೈತ ಮಲ್ಲಿಕಾರ್ಜುನ ಶಿರಗುಪ್ಪಿ ಆತ್ಮ೧ಹತ್ಯೆ ಕೇಸ್‌ಗೆ ಹೊಸ ತಿರುವು ಸಿಕ್ಕಿದೆ. ಸ್ಕೂಟಿ ಸಾಲದ ಕಂತು ಕಟ್ಟದ್ದಕ್ಕೆ ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಸಿಬ್ಬಂದಿ ನೀಡಿದ ಕಿರುಕುಳ ಹಾಗೂ ಪ್ರಚೋದನೆಯೇ ಸಾವಿಗೆ ಕಾರಣ ಎಂದು ತನಿಖೆಯಿಂದ ಬಯಲು.
ಧಾರವಾಡ (ಅ.26): ಇತ್ತೀಚೆಗೆ ಆತ್ಮ೧ಹತ್ಯೆ ಮಾಡಿಕೊಂಡಿದ್ದ ಯುವ ರೈತ ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿಯ ಕಿರುಕುಳ ಹಾಗೂ ಪ್ರಚೋದನೆಯಿಂದ ಆತ್ಮ೧ಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕಂತಿನ ಮೇಲೆ ಖರೀಸಿದ್ದ ಸ್ಕೂಟಿ ಸಾಲ ಕಟ್ಟಲು ಆಗದಿದ್ದರೆ ಮ್ಯಾನೇಜರ್ ಹೆಸರು ಬರೆದಿಟ್ಟು ಸಾಯಿ ಎಂದು ಫೈನಾನ್ಸ್ ಕಂಪನಿ ನೌಕರರು ಹೇಳಿದ್ದ ಸಂಗತಿ ಮೃತನ ಮೊಬೈಲ್‌ನಲ್ಲಿ ಪತ್ತೆ ಆಗಿದೆ.
ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ರೈತ ಸಾವು:
ಮಲ್ಲಿಕಾರ್ಜುನ ಶಿರಗುಪ್ಪಿ (33) ಸೆ.30ರಂದು ತಾಲೂಕಿನ ಹೆಬ್ಬಳ್ಳಿಯ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಪ್ರಾಥಮಿಕ ತನಿಖೆಯಲ್ಲಿ ಬ್ಯಾಂಕ್ ಸಾಲ, ಕೈಗಡ ಸಾಲದಿಂದ ಬೇಸತ್ತು ರೈತ ಆತ್ಮ೧ಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ, ನೈಜ ಕಾರಣ ಫೈನಾನ್ಸ್ ಕಂಪನಿಯೊಂದರ ಸಿಬ್ಬಂದಿ ಕಿರುಕುಳ ಎಂಬುದು ತನಿಖೆಯ ನಂತರ ಬಯಲಾಗಿದ್ದು, ಟಿವಿಎಸ್ ಕ್ರೆಡಿಟ್ ಫೈನಾನ್ಸ್‌ನ ಗುರು ಉರುಫ್ ವೀರು ಹಿರೇಮಠ ಹಾಗೂ ಬಸವರಾಜ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಪ್ರಕರಣ:
ಮಲ್ಲಿಕಾರ್ಜುನ, ಟಿವಿಎಸ್ ಕ್ರೆಡಿಟ್ ಫೈನಾನ್ಸ್‌ನಿಂದ ಸ್ಕೂಟಿ ಖರೀದಿಸಿದ್ದ. ಇದರ ಕಂತು ಕಟ್ಟುವಂತೆ ಫೈನಾನ್ಸ್ ಸಿಬ್ಬಂದಿ ಒತ್ತಡ ಹೇರುತ್ತಿದ್ದರು. ಅನಾರೋಗ್ಯದಿಂದ ಕಂತು ಕಟ್ಟಿರಲಿಲ್ಲ. ನೇಣು ಹಾಕಿಕೊಳ್ಳುವುದಾದರೆ ನಮ್ಮ ಮ್ಯಾನೇಜರ್ ಹೆಸರು ಬರೆದಿಟ್ಟು ಸಾಯಿರಿ ಎಂದು ಪ್ರಚೋದನೆ ನೀಡಿದ್ದರು ಎಂಬ ಸಂಗತಿ ಮಲ್ಲಿಕಾರ್ಜುನ ಮೊಬೈಲ್ ಮೂಲಕ ಕುಟುಂಬಸ್ಥರಿಗೆ ಗೊತ್ತಾಗಿದೆ.
ಕುಟುಂಬದ ಸದಸ್ಯರು ಶುಕ್ರವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಹಾಗೂ ₹25 ಲಕ್ಷ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.


