Asianet Suvarna News Asianet Suvarna News

ಓಡಿಶಾ: ಮತಾಂತರಗೊಂಡಿದ್ದ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಬುಡಕಟ್ಟು ಗ್ರಾಮಸ್ಥರ ವಿರೋಧ

ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬರ ಮೃತ ದೇಹವನ್ನು ಗ್ರಾಮದ ಸ್ಮಶಾನ ಭೂಮಿಯಲ್ಲಿ ಹೂಳಲು ಗ್ರಾಮಸ್ಥರು ವಿರೋಧಿಸಿರುವ ಘಟನೆ ಓಡಿಶಾದ ಭುವನೇಶ್ವರದಲ್ಲಿ ನಡೆದಿದೆ

tribals spend sleepless night to stop Christian family from burying a body in village cremation ground mnj
Author
First Published Nov 1, 2022, 1:45 PM IST

ಭುವನೇಶ್ವರ (ನ. 01): ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿದ್ದ ವ್ಯಕ್ತಿಯೊಬ್ಬರ ಮೃತ ದೇಹವನ್ನು ಗ್ರಾಮದ ಸ್ಮಶಾನ ಭೂಮಿಯಲ್ಲಿ ಹೂಳಲು ಗ್ರಾಮಸ್ಥರು ವಿರೋಧಿಸಿರುವ ಘಟನೆ ಭುವನೇಶ್ವರದ ಜರಿಗಾಂವ್ ಬ್ಲಾಕ್‌ನ ನಬರಂಗಪುರ ಜಿಲ್ಲೆಯ ಭಟ್ರ ಬುಡಕಟ್ಟು ಜನಾಂಗದವರು ವಾಸಿಸುವ ಗುಡಿಬದನಾ ಗ್ರಾಮದಲ್ಲಿ ನಡೆದಿದೆ.  ಮೃತದೇಹ ಹೂಳದಂತೆ ಖಚಿತಪಡಿಸಿಕೊಳ್ಳಲು ಗ್ರಾಮದ 300ಕ್ಕೂ ಹೆಚ್ಚು ಬುಡಕಟ್ಟು ಜನರು ರಾತ್ರಿಯಿಡೀ ಗ್ರಾಮದ ಗಡಿಗಳನ್ನು ಕಾಯ್ದಿದ್ದಾರೆ. ಮೃತರನ್ನು ಜಿತ್ರು ಭಟ್ರಾ (65) ಎಂದು ಗುರುತಿಸಲಾಗಿದ್ದು  ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದರು ಎನ್ನಲಾಗಿದೆ.  ಜಿತ್ರು ಭಟ್ರಾ ಶುಕ್ರವಾರ ಸಂಜೆ ನಿಧನರಾಗಿದ್ದು ಅವರ ಮ್ರತದೇಹದ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧಿಸಿದ್ದಾರೆ. 

ಮೃತ ಜಿತ್ರು ಭಟ್ರಾ  ಇಬ್ಬರು ಪುತ್ರರು ಗ್ರಾಮದ ಸ್ಮಶಾನದ ಮೈದಾನದಲ್ಲಿ ಅಂತ್ಯಕ್ರಿಯೆಯನ್ನು ಮಾಡಲು ಮುಂದಾಗಿದ್ದರು. ಆದರೆ ಗ್ರಾಮಸ್ಥರು ಅಂತಿಮ ವಿಧಿಗಳನ್ನು ಮಾಡಲು ಅವಕಾಶ ನೀಡದಿರಲು ನಿರ್ಧರಿಸಿದರು ಎಂದು ವರದಿಗಳು ತಿಳಿಸಿವೆ. ಮೃತರ ಕುಟುಂಬಕ್ಕೆ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸಾಧ್ಯವಾಗದಂತೆ ಗ್ರಾಮದ ಎಲ್ಲಾ ಪುರುಷ ಸದಸ್ಯರು ಗ್ರಾಮದಲ್ಲಿ ರಾತ್ರಿಯೀಡಿ ಗಸ್ತು ತಿರುಗಿದ್ದಾರೆ. ಹೀಗಾಗಿ 24 ಗಂಟೆಗಳ ಕಾಲ ಶವವನ್ನು ಮನೆಯಿಂದ ಹೊರಗೆ ತರಲು ಕುಟುಂಬದವರಿಗೆ ಸಾಧ್ಯವಾಗಿಲ್ಲ. 

ಈ ಬಳಿಕ ಜಿಲ್ಲಾಡಳಿತವು ಮಧ್ಯಪ್ರವೇಶಿಸಿದ್ದು ಗ್ರಾಮದಿಂದ ಐದು ಕಿ.ಮೀ ದೂರದಲ್ಲಿರುವ ಸ್ಮಶಾನವೊಂದರಲ್ಲಿ ಶವ ಸಂಸ್ಕಾರ ಮಾಡುವಂತೆ ಕುಟುಂಬದವರಿಗೆ ಮನವಿ ಮಾಡಿತ್ತು. ಆದರೆ, ಸ್ಥಳೀಯರು ಇದಕ್ಕೂ ವಿರೋಧ ವ್ಯಕ್ತಪಡಿಸಿದರು. ಅಂತಿಮವಾಗಿ, ಮೃತದೇಹವನ್ನು ಜಿಲ್ಲಾ ಕೇಂದ್ರ ಸಮೀಪವಿರುವ ಚರ್ಚ್‌ಗೆ ಕೊಂಡೊಯ್ಯಲಾಯಿತು ಎಂದು ವರದಿಗಳು ತಿಳಿಸಿವೆ. 

ಉತ್ತರಪ್ರದೇಶದಲ್ಲಿ 400ಕ್ಕೂ ಹೆಚ್ಚು ಜನರ ಮತಾಂತರ : 9 ಜನರ ಮೇಲೆ ಕೇಸು

ಹೊರಗಿನವರಿಗೆ ಅವಕಾಶವಿಲ್ಲ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಿಂದ ಭಾತ್ರಾ ಬುಡಕಟ್ಟು ಜನಾಂಗದವರು ಒಡಿಶಾಗೆ ವಲಸೆ ಬಂದಿದ್ದಾರೆ ಎಂದು ನಂಬಲಾಗಿದೆ. ಆದಿವಾಸಿಗಳು ಅಂತ್ಯ ಸಂಸ್ಕಾರಕ್ಕಾಗಿ ಸಮಾಧಿ ಮತ್ತು ದಹನ ಎರಡನ್ನೂ ಅನುಸರಿಸುತ್ತಾರೆ. "ನಮ್ಮ ಸಂಪ್ರದಾಯದ ಪ್ರಕಾರ, ಹೊರಗಿನವರು ಅಥವಾ ಇತರ ಧರ್ಮದ ವ್ಯಕ್ತಿಗಳನ್ನು ನಮ್ಮ ಗ್ರಾಮದ ಸ್ಮಶಾನ ಭೂಮಿಯಲ್ಲಿ ಶವಸಂಸ್ಕಾರ ಮಾಡಲು ಅಥವಾ ಹೂಳಲು ಅನುಮತಿಸಲಾಗುವುದಿಲ್ಲ. ಕುಟುಂಬವು ಕ್ರಿಶ್ಚಿಯನ್ ಧರ್ಮವನ್ನು ತ್ಯಜಿಸಲು ನಿರಾಕರಿಸಿದ್ದರಿಂದ, ನಾವು ಶವವನ್ನು ಹೂಳಲು ಬಿಡಲಿಲ್ಲ"  ಎಂದು ಗ್ರಾಮದ ನಿವಾಸಿಯೊಬ್ಬರನ್ನು ಉಲ್ಲೇಖಿಸಿ ದಿ ಹಿಂದೂ ವರದಿ ಮಾಡಿದೆ. 

"ಗ್ರಾಮದ ಮನೆಯೊಂದರಲ್ಲಿ ಸಾವಾಗಿದ್ದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 1000ಕ್ಕೂ ಹೆಚ್ಚು ಗ್ರಾಮಸ್ಥರು 24 ಗಂಟೆಗಳ ಕಾಲ ಆಹಾರವಿಲ್ಲದೆ ಪರದಾಡಿದರು. ಬುಡಕಟ್ಟು ಸಂಪ್ರದಾಯದ ಪ್ರಕಾರ, ಶವವನ್ನು ಶವಸಂಸ್ಕಾರಕ್ಕೆ ಹೊರತೆಗೆಯುವವರೆಗೆ ಗ್ರಾಮದ ಯಾವುದೇ ಕುಟುಂಬವು ಆಹಾರ ಸೇವಿಸುವಂತಿಲ್ಲ" ಎಂದು ಗ್ರಾಮದ ಸರಪಂಚ್‌ ಹೇಳಿದ್ದಾರೆ. 

Latest Videos
Follow Us:
Download App:
  • android
  • ios