ಸೆಕ್ಯೂರಿಟಿ ಬೈದು ಕಳುಹಿಸಿದ್ರು ಮತ್ತೆ ಬಂದು ಪ್ರಾಣ ಕಳೆದುಕೊಂಡ ಮೂವರು ಬಾಲಕರು
* ಹೊಸ ಮನೆ ಕಟ್ಟಬೇಕಿದ್ದ ಜಾಗದಲ್ಲೇ ಪ್ರಾಣಬಿಟ್ಟ ಮೂವರು ಬಾಲಕರು
* ದೀಪಾವಳಿ ಸಂಭ್ರಮ ಇರಬೇಕಿದ್ದ ಮನಗಳಲ್ಲಿ ಸೂತಕದ ಛಾಯೆ
* ಕಲಬುರಗಿಯ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಘೋರ ದುರಂತ
ಕಲಬುರಗಿ, (ನ.03): ಮನೆ ನಿರ್ಮಾಣಕ್ಕೆಂದು (House Construction) ತೋಡಲಾಗಿದ್ದ ಪಿಲ್ಲರ್ ಗುಂಡಿಗೆ ಬಿದ್ದು ಮೂರು ಮಕ್ಕಳು (Children) ಸಾವನ್ನಪ್ಪಿರುವ ಘಟನೆ ಕಲಬುರಗಿ(Kalaburagi) ನಗರದ ನಗರದ ಮಹಾಲಕ್ಷ್ಮೀ ಲೇಔಟ್ ನಡೆದಿದೆ.
ನಿವೇಶನ ನಿರ್ಮಾಣಕ್ಕೆ ಪಿಲ್ಲರ್ ಹಾಕಲು ಮಂಗಳವಾರ ಗುಂಡಿ ತೋಡಿಸಿದ್ದರು. ಮರುದಿನ ಅಂದ್ರೆ ಇಂದು (ಬುಧವಾರ) ಅದೇ ಗುಂಡಿ ಮೂವರು ಬಾಲಕರ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ. ಲಾಲ್ಗೇರಿ ಪ್ರದೇಶದ ನಿವಾಸಿಗಳಾದ ಸಹೋದರ ಸಂಬಂಧಿ ಪ್ರಶಾಂತ ಅಂಬಣ್ಣ(12), ವಿಘ್ನೇಶ ರಾಜು(12), ದರ್ಶನ ನಾಗರಾಜ(10) ಮೃತರು.
ಪುನೀತ್ ಸಾವಿನ ಸುದ್ದಿ ಕೇಳಿ, ಮನೆ ಬಿಟ್ಟು ಹೋದ ವ್ಯಕ್ತಿ ನಾಪತ್ತೆ
ಶಿವಶರಣ ಎಂಬುವರು ತನ್ನ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದ. ಆಯ ಪೂಜೆ ಬಳಿಕ ಪಿಲ್ಲರ್ ನಿರ್ಮಾಣಕ್ಕೆಂದು ಮಂಗಳವಾರ ಗುಂಡಿ ತೋಡಿಸಿದ್ದರು. ರಾತ್ರಿ ಭಾರಿ ಮಳೆಯಾಗಿದ್ದರಿಂದ ಸುತ್ತಲಿನ ಪ್ರದೇಶದ ನೀರು ಹರಿದು ಇದರಲ್ಲಿ ಸಂಗ್ರಹಗೊಂಡಿತ್ತು. ಬುಧವಾರ ಮಧ್ಯಾಹ್ನ ನೀರು ನಿಂತಿದ್ದನ್ನು ನೋಡಿದ ಬಾಲಕರು ಈಜಾಡಲು ಬಂದಿದ್ದರು. ಅಲ್ಲಿದ್ದ ಸೆಕ್ಯೂರಿಟಿ ಆ ಮಕ್ಕಳನ್ನು ಬೈದು ಕಳುಹಿಸಿದ್ದ.
ಬಳಿಕ ಸೆಕ್ಯೂರಿಟಿ ಚಹಾ ಕುಡಿಯಲು ಹೋಗಿದ್ದ ಸಂದರ್ಭದಲ್ಲಿ ಬಾಲಕರು ಮತ್ತೆ ಅಲ್ಲಿಗೆ ಬಂದು ನೀರಿಗಿಳಿದಿದ್ದಾರೆ. ಸರಿಯಾಗಿ ಈಜು ಬಾರದ ಕಾರಣ ಮುಳುಗಿದ್ದಾರೆ.
ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದ ಕೆಲವರು ರಕ್ಷಣೆ ಮಾಡಲು ಪ್ರಯತ್ನಿಸಿದ್ದಲ್ಲದೆ ಪೊಲೀಸರಿಗೂ ವಿಷಯ ತಿಳಿಸಿದ್ದಾರೆ. ನೀರಿನಿಂದ ಮೇಲೆ ತೆಗೆದು ಆಸ್ಪತ್ರೆಗೆ ಸಾಗಿಸಿದರೂ ಫಲಿಸಲಿಲ್ಲ.
ಕರುಳ ಕುಡಿಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ದೀಪಾವಳಿ ಆಚರಣೆ ಸಿದ್ಧತೆಯಲ್ಲಿದ್ದ ಕುಟುಂಬಗಳಿಗೆ ಮಕ್ಕಳ ಸಾವು ಬರಸಿಡಿಲಿನಂತೆ ಬಂದೆರಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ಅಂಶುಕುಮಾರ್, ಇನ್ಸ್ಪೆಕ್ಟರ್ ಅರುಣಕುಮಾರ ಮುರುಗೊಂಡಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಸಿದುಬಿದ್ದು ವಿದ್ಯಾರ್ಥಿ ಸಾವು
ಚಿತ್ರದುರ್ಗದಲ್ಲಿ ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ದಿಢೀರ್ ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆ. ನಗರದ ವೆಂಕಟೇಶ್ವರ ಪಿಯು ಕಾಲೇಜಿನಲ್ಲಿ ಈ ದುರ್ಘಟನೆ ನಡೆದಿದೆ. ಶಿವಗಂಗಾ ಗ್ರಾಮದ ಓಂ ಪ್ರಕಾಶ್(17) ಮೃತ ವಿದ್ಯಾರ್ಥಿ. ಎದೆ ನೋವಿನಿಂದ ಕುಸಿದು ಬಿದ್ದ ಓಂ ಪ್ರಕಾಶ್ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಸಾವಿಗೀಡಾಗಿದ್ದಾರೆ. ಹೃದಯಾಘಾತದಿಂದ ಓಂ ಪ್ರಕಾಶ್ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಎದೆ ನೋವಿನಿಂದ ಕುಸಿದು ಬಿದ್ದ ಓಂ ಪ್ರಕಾಶ್ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಅವರು ಸಾವಿಗೀಡಾಗಿದ್ದಾರೆ. ಹೃದಯಾಘಾತದಿಂದ ಓಂ ಪ್ರಕಾಶ್ ಸಾವು ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮದುವೆಯಾದ ನಾಲ್ಕೇ ದಿನಕ್ಕೆ ಗಂಡ-ಹೆಂಡತಿಯ ದುರಂತ ಅಂತ್ಯ
ಹೊಸದಾಗಿ ಮದುವೆಯಾಗಿದ್ದ ಗಂಡ-ಹೆಂಡತಿ ಕಾರಿನಲ್ಲಿ ಹೋಗುವಾಗ ಭೀಕರ ಅಪಘಾತ ಸಂಭವಿಸಿದ್ದು, ದಂಪತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಕೇವಲ 4 ದಿನಗಳ ಹಿಂದೆ ಮದುವೆಯಾಗಿದ್ದ ದಂಪತಿ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯಲ್ಲಿ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೇರಳ ಮೂಲದ ಮನೋಜ್ ಕುಮಾರ್ (31) ಮತ್ತು ಪೆರುಗಲಥೂರ್ ಮೂಲದ ಕಾರ್ತಿಕಾ (30) ಮೃತ ದಂಪತಿಯಾಗಿದ್ದಾರೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಕಾಂಕ್ರೀಟ್ ಮಿಕ್ಸರ್ ಲಾರಿ ಕಾರಿನ ಮೇಲೆ ಬಿದ್ದ ಪರಿಣಾಮ ಆ ಗಂಡ-ಹೆಂಡತಿ ಸಂಚರಿಸುತ್ತಿದ್ದ ಕಾರು ಅಪ್ಪಚ್ಚಿಯಾಗಿದೆ.
ಮನೋಜ್ ಕುಮಾರ್ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಹೆಂಡತಿ ಕಾರ್ತಿಕಾ ಖಾಸಗಿ ಕ್ಲಿನಿಕ್‌ನಲ್ಲಿ ವೈದ್ಯೆಯಾಗಿದ್ದರು. ನಾಲ್ಕು ದಿನಗಳ ಹಿಂದೆ ಅಕ್ಟೋಬರ್ 28ರಂದು ಇವರಿಬ್ಬರೂ ಮದುವೆಯಾಗಿದ್ದರು.