ಉದ್ಯೋಗ ಆಮಿಷವೊಡ್ಡಿ ನೆರೆ ರಾಜ್ಯದ ಯುವತಿಯರ ಕರೆತಂದು ದಂಧೆ

ಬೆಂಗಳೂರು(ನ.24):  ಉದ್ಯೋಗದ ಆಮಿಷವೊಡ್ಡಿ ನೆರೆ ರಾಜ್ಯದ ಮಹಿಳೆಯರು ಹಾಗೂ ಯುವತಿಯರನ್ನು ನರ್ಸಿಂಗ್‌ ಸೆಂಟರ್‌ಗೆ ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮಹಿಳೆ ಸೇರಿ ಮೂವರನ್ನು ಕಾಟನ್‌ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಜಯನಗರದ ನಾಗಶೆಟ್ಟಿಹಳ್ಳಿ ನಿವಾಸಿ ಅರ್ಚನಾ(37), ದಾವಣಗೆರೆ ಜಿಲ್ಲೆಯ ರಾಘವೇಂದ್ರ (30), ತುಮಕೂರಿನ ಮಂಜುನಾಥ್‌ (33) ಬಂಧಿತರು. ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ. ಇತ್ತೀಚೆಗೆ ಬಳೇಪೇಟೆಯ ಕೆವಿ ಟೆಂಪಲ್‌ ಸ್ಟ್ರೀಟ್‌ನಲ್ಲಿರುವ ಗಂಧರ್ವ ಡಿಲಕ್ಸ್‌ ಲಾಡ್ಜ್‌ನಲ್ಲಿ ಅಕ್ರಮವಾಗಿ ಮಹಿಳೆಯರನ್ನು ಕರೆಸಿಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದು ನಿಜಕ್ಕೂ ದುರಂತ: ಬೆಂಗಳೂರಿನಲ್ಲಿ ಬಾಂಬೆ ಮಾದರಿಯ ವೇಶ್ಯಾವಾಟಿಕೆ

ಆರೋಪಿ ಅರ್ಚನಾ ಸಂಜಯ ನಗರದಲ್ಲಿ ಸಿಬಿಕಾ ಆ್ಯಂಡ್‌ ಆಯು ಸೆಂಟರ್‌(ಬ್ಯೂರೋ ಆಫ್‌ ಕ್ವಾಲಿಫೈಡ್‌ ನರ್ಸ್‌ ಆ್ಯಂಡ್‌ ಆಯು) ಎಂಬ ಹೆಸರಿನಲ್ಲಿ ನರ್ಸಿಂಗ್‌ ಸೆಂಟರ್‌ ನಡೆಸುತ್ತಿದ್ದಾಳೆ. ನರ್ಸಿಂಗ್‌ ತರಬೇತಿಗಾಗಿ ಬರುವ ಯುವತಿಯರು ಹಾಗೂ ಮಹಿಳೆಯರಿಗೆ ಉದ್ಯೋಗ ಹಾಗೂ ಸುಲಭವಾಗಿ ಹಣ ಗಳಿಸುವ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ದೂಡಿ ಅಕ್ರಮವಾಗಿ ಹಣ ಗಳಿಸುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಈ ಸಂಬಂಧ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.