Asianet Suvarna News Asianet Suvarna News

Bengaluru Drug Mafia: ಪೇದೆಗಳಿಂದ ಡ್ರಗ್ಸ್‌ ದಂಧೆ: ಮಹಿಳೆ ಸೇರಿ ಮೂವರ ಸೆರೆ

*   ಶಿಕ್ಷಕಿ ಸೋಗಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಒಡಿಶಾ ಮಹಿಳೆ
*   ನಕಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ಕೋಟ್ಯಂತರ ರು. ವಂಚನೆ ಆರೋಪ
*   ಶೇಷಾದ್ರಿಪುರ ಠಾಣೆಯಲ್ಲಿ ಕೇಸ್‌ ಸಂಬಂಧ 18 ಎಫ್‌ಐಆರ್‌ ದಾಖಲು
 

Three Arrested Including Woman For Drugs Case in Bengaluru grg
Author
Bengaluru, First Published Jan 28, 2022, 5:55 AM IST

ಬೆಂಗಳೂರು(ಜ.28):  ಮಾದಕ ವಸ್ತು ಮಾರಾಟ ದಂಧೆಯಲ್ಲಿ ಮುಖ್ಯಮಂತ್ರಿ ನಿವಾಸದ ಭದ್ರತೆ ನಿಯೋಜಿತರಾಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ(Constables) ಬಂಧನ ಪ್ರಕರಣ ಸಂಬಂಧ ಸಿಸಿಬಿ ತನಿಖೆ(CCB Investigation)ಚುರುಕುಗೊಳಿಸಿದ್ದು, ಈ ಜಾಲದ ಸಂಪರ್ಕದಲ್ಲಿದ್ದ ಓರ್ವ ಮಹಿಳೆ ಸೇರಿದಂತೆ ಮೂವರು ಪೆಡ್ಲರ್‌ಗಳನ್ನು ಬಂಧಿಸಿದೆ.

ಬಿಟಿಎಂ ಲೇಔಟ್‌ನ ಪೂಜಾ, ಸದ್ದುಗುಂಟೆಪಾಳ್ಯದ ಶಿವಪಾಟೀಲ್‌ ಹಾಗೂ ಆರ್‌.ಟಿ.ನಗರದ ಸೋಮಸುಂದರ್‌ ಬಂಧಿತರು(Arrest). ಆರೋಪಿಗಳಿಂದ 5.6 ಕೆ.ಜಿ ಗಾಂಜಾ(Marijuana) ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಆರ್‌.ಟಿ.ನಗರದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಕೋರಮಂಗಲ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್‌, ಸಂತೋಷ್‌ ಹಾಗೂ ಪೆಡ್ಲರ್‌ ಅಖಿಲ್‌ ರಾಜ್‌ ಸೇರಿ ಐವರು ಬಂಧಿತರಾಗಿದ್ದರು. ವಿಚಾರಣೆಗೆ ಪೆಡ್ಲರ್‌(Peddler0 ಅಖಿಲ್‌ ನೀಡಿದ ಮಾಹಿತಿ ಮೇರೆಗೆ ಮತ್ತೆ ಮೂವರು ಪೆಡ್ಲರ್‌ಗಳ ಬಂಧನವಾಗಿದೆ ಎಂದು ತಿಳಿದು ಬಂದಿದೆ.

Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

ಒಡಿಶಾ ಮೂಲದ ಪೂಜಾ, ನಗರದಲ್ಲಿ ಶಿಕ್ಷಕಿ ಸೋಗಿನಲ್ಲಿ ಮನೆ ಬಾಡಿಗೆ ಪಡೆದು ನೆಲೆಸಿದ್ದಳು. ಇನ್ನು ಶಿವಪಾಟೀಲ್‌, ಖಾಸಗಿ ಕಾಲೇಜಿನಲ್ಲಿ ಸ್ನಾತಕೋತ್ತರ ಓದುತ್ತಿದ್ದ. ಮತ್ತೊಬ್ಬ ಆರೋಪಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್‌ ದಂಧೆಯಲ್ಲಿ ಆರೋಪಿಗಳು ತೊಡಗಿದ್ದರು ಎಂದು ಪೊಲೀಸರು(Police) ಹೇಳಿದ್ದಾರೆ.

ಒಡಿಶಾದಿಂದ ಅಕ್ರಮವಾಗಿ ಗಾಂಜಾ ತಂದು ನಗರದ ಪೆಡ್ಲರ್‌ಗಳಿಗೆ ಪೂಜಾ ಪೂರೈಸುತ್ತಿದ್ದಳು. ಆಕೆಯ ಸಂಪರ್ಕದಲ್ಲಿ ಪೆಡ್ಲರ್‌ ಅಖಿಲ್‌ ಇದ್ದ. ಇತ್ತೀಚಿಗೆ ಆರ್‌.ಟಿ.ನಗರ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದಾಗ ಕಾನ್‌ಸ್ಟೇಬಲ್‌ ಜತೆ ಅಖಿಲ್‌ ಸಹ ಬಂಧಿತನಾಗಿದ್ದ. ಆಗ ಆತನ ಮೊಬೈಲ್‌ ವಶಕ್ಕೆ ಪಡೆದು ಪರಿಶೀಲಿಸಿದಾಗ ಪೂಜಾ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇನ್ನುಳಿದ ಇಬ್ಬರು ಸಿಕ್ಕಿಬಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬಿಡಿಎ ಸೈಟ್‌ ಕಬಳಿಕೆ ಕೇಸ್‌: ಸಿಬ್ಬಂದಿ ಸೇರಿ 6 ಮಂದಿ ಸೆರೆ

ಬೆಂಗಳೂರು: ನಕಲಿ ದಾಖಲೆ(Fake Document) ಸೃಷ್ಟಿಸಿ ದುಬಾರಿ ಮೌಲ್ಯದ ಬಿಡಿಎ ನಿವೇಶನಗಳ(BDA Site) ಕಬಳಿಕೆ ಪ್ರಕರಣಗಳ ಸಂಬಂಧ ಶೇಷಾದ್ರಿಪುರ ಠಾಣೆ ಪೊಲೀಸರು ಬಿಡಿಎ ನೌಕರರು ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಿಡಿಎ ನೌಕರ ಲೋಹಿತ್‌ಗೌಡ, ಗುತ್ತಿಗೆ ನೌಕರ ಸುನಿಲ್‌ ಕುಮಾರ್‌, ಮಧ್ಯವರ್ತಿಗಳಾದ ಪವನ್‌ ಕುಮಾರ್‌, ವಿವೇಕ್‌ ಜೈನ್‌, ಮಂಜುನಾಯಕ ಹಾಗೂ ರಾಮಚಂದ್ರೇ ಗೌಡ ಬಂಧಿತರು. ಆರೋಪಿಗಳನ್ನು ನ್ಯಾಯಾಯಲಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಪೊಲೀಸರು, ವಿಚಾರಣೆಗೆ ಒಳಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಯ ಅಗತ್ಯಬಿದ್ದರೆ ಆರೋಪಿಗಳನ್ನು ಮತ್ತೊಮ್ಮೆ ವಶಕ್ಕೆ ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡಿಎ ವಿಚಕ್ಷಣ ದಳ ಹಾಗೂ ವಿಶೇಷ ಕಾರ್ಯಪಡೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಈವರೆಗೆ 18 ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಇದೀಗ ಆರು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

Drugs Bust in Bengaluru: ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

ಬಿಡಿಎಗೆ ಸೇರಿದ ಕೆಲ ನಿವೇಶನಗಳಿಗೆ ಗುತ್ತಿಗೆ ಹಾಗೂ ಮಾರಾಟ ಒಪ್ಪಂದಕ್ಕೆ ನೋಂದಣಿ ಮಾಡದಿದ್ದರೂ ಸಹ ಆರೋಪಿಗಳು ನಕಲಿ ಫಲಾನುಭವಿಗಳ ಹೆಸರಿಗೆ ಗುತ್ತಿಗೆ ಹಾಗೂ ಮಾರಾಟ ಒಪ್ಪಂದ ಪತ್ರ ಕೊಟ್ಟಂತೆ ನಕಲಿ ದಾಖಲೆ ಸೃಷ್ಟಿಸಿ ಬಿಡಿಎಗೆ ಸಲ್ಲಿಸಿದ್ದರು. ನಂತರ ನಕಲಿ ದಾಖಲಾತಿಗಳ ಆಧಾರದ ಮೇಲೆ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಶುದ್ಧ ಕ್ರಯಪತ್ರ ನೋಂದಣಿ ಮಾಡಿಕೊಟ್ಟು ಬಿಡಿಎಗೆ ಕೋಟ್ಯಂತರ ರು. ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳು ಬಿಡಿಎ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ನೆರವು ಪಡೆದು ಎಚ್‌ಬಿಆರ್‌ ಲೇಔಟ್‌, ಕೆಂಗೇರಿ ಸೇರಿ ನಗರದ ವಿವಿಧೆಡೆಯಿರುವ ಬಿಡಿಎ ಜಾಗಗಳಿಗೆ ಬೋಗಸ್‌ ದಾಖಲೆ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೂರು ಆಧರಿಸಿ ಪೊಲೀಸರು ಆರೋಪಿಗಳ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣಗಳಲ್ಲಿ ಬಿಡಿಎ ಅಧಿಕಾರಿಗಳ ಕೈವಾಡವಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಶೀಘ್ರದಲ್ಲೇ ಆ ಅಧಿಕಾರಿಗಳನ್ನು ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
 

Follow Us:
Download App:
  • android
  • ios