*  ನೌಕರ ಸೇರಿ ಮೂವರ ಬಂಧನ*  8 ಬೆಳ್ಳಿ ಗಟ್ಟಿ, 3.38 ಲಕ್ಷ ನಗದು ಜಪ್ತಿ*  ಮಾರನೇ ದಿನ ಕೆಲಸಕ್ಕೆ ಗೈರು 

ಬೆಂಗಳೂರು(ಮೇ.24): ಅನ್ನ ನೀಡುತ್ತಿದ್ದ ಮಾಲೀಕನ ಅಂಗಡಿಗೆ ಕನ್ನ ಹಾಕಿ ಎಂಟು ಕೆಜಿ ಬೆಳ್ಳಿ ಗಟ್ಟಿಕಳವು ಮಾಡಿದ್ದ ನೌಕರ ಸೇರಿದಂತೆ ಮೂವರನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.

ನಾಗ​ರ​ಬಾವಿ ನಿವಾಸಿಯಾಗಿರುವ ಅಂಗಡಿಯ ನೌಕರ ರಾಹುಲ್‌ ಜೈನ್‌, ಎಸ್‌.​ಜಿ.​ಪಾಳ್ಯ ನಿವಾ​ಸಿ​ಗ​ಳಾದ ರಾಜೇಶ್‌ ಹಾಗೂ ಮಧು ಬಂಧಿ​ತರು. ಇವರಿಂದ 3.38 ಲಕ್ಷ ರು. ನಗದು, ಎಂಟು ಕೆ.ಜಿ. ಬೆಳ್ಳಿಯ ಗಟ್ಟಿ​, ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಪ್ರಿಯಕರನ ಜತೆ ಸೇರಿ ಹೆತ್ತ ತಾಯಿಯ ಒಡವೆ ಕದ್ದಳು..!

ದುಷ್ಕರ್ಮಿಗಳು ಮೇ 21ರಂದು ರಾತ್ರಿ ಬೃಂದಾವನಗರದ ಯಮುನಾ ನದಿ ರಸ್ತೆಯ ‘ಪ್ಲಾನೆಟ್ಸ್‌ 9 ಹೋಲ್ಡಿಂಗ್‌್ಸ’ ಹೆಸರಿನ ಸಗಟು ಬೆಳ್ಳಿ ಮಾರಾಟ ಅಂಗಡಿಯ ರೋಲಿಂಗ್‌ ಶೆಟರ್‌ ಬೀಗ ಮುರಿದು, ಲಾಕರ್‌ನಲ್ಲಿ ಇರಿಸಿದ್ದ ಬೆಳ್ಳಿ ಗಟ್ಟಿಗಳು, ಆಭರಣಗಳು ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಉತ್ತಮ್‌ ಚಂದ್‌ ಜೈನ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಾರನೇ ದಿನ ಕೆಲಸಕ್ಕೆ ಗೈರು

ಬೆಳ್ಳಿ ಅಂಗಡಿ ಮಾಲೀಕ ಉತ್ತಮ್‌ ಚಂದ್‌ ಜೈನ್‌ ನಂಬಿಕೆ ಗಳಿಸಿದ್ದ ಆರೋಪಿ ರಾಹುಲ್‌ ಜೈನ್‌ ದರೋಡೆ ಮಾಡಿದ ಮರುದಿನ ದಿನ ಕೆಲಸಕ್ಕೆ ಬಂದಿರಲಿಲ್ಲ. ಈ ಬಗ್ಗೆ ಅನುಮಾನಗೊಂಡ ಪೊಲೀಸರು, ಮೊದಲಿಗೆ ರಾಹುಲ್‌ ಜೈನ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದರೋಡೆ ಕೃತ್ಯ ಬೆಳಕಿಗೆ ಬಂದಿದೆ.