ಪತಿಯ ಕಳ್ಳತನ ಕೃತ್ಯಕ್ಕೆ ಬೆಂಬಲ ಕೊಟ್ಟ ಪತ್ನಿ, ಮೈದುನ ಜೈಲಿಗೆ
* ಕಾರಿನ ಗಾಜು ಒಡೆದು ಚಿನ್ನ, ವಜ್ರ ದೋಚಿದ್ದ ದಂಪತಿ
* ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನ
* ಬ್ಯಾಂಕ್‌ಗಳ ಬಳಿ ಕಾದು ಕಳ್ಳತನ
ಬೆಂಗಳೂರು(ಮೇ.22): ಇತ್ತೀಚಿಗೆ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಉದ್ಯಮಿಯೊಬ್ಬರ ಕಾರಿನ ಗಾಜು ಒಡೆದು ಕೋಟ್ಯಂತರ ರುಪಾಯಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣ ದೋಚಿದ್ದ ಕುಖ್ಯಾತ ‘ಓಜಿಕುಪ್ಪಂ’ ತಂಡದ ದಂಪತಿ ಸೇರಿ ಮೂವರನ್ನು ತಲಘಟ್ಟಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ತಮಿಳುನಾಡಿನ ಚೆನ್ನೈ ನಿವಾಸಿಗಳಾದ ರತ್ನಕುಮಾರ್ ಅಲಿಯಾಸ್ ರೆಡ್ಡಿ, ಆತನ ಪತ್ನಿ ತಾಸಿನ್ ಫಾತಿಮಾ ಹಾಗೂ ಬಾಮೈದ ಮೊಹಮ್ಮದ್ ಆರ್ಷದ್ ನದೀಮ್ ಬಂಧಿತರಾಗಿದ್ದು, ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗೆ ತನಿಖೆ ನಡೆದಿದೆ. ಬಂಧಿತರಿಂದ .47 ಲಕ್ಷ ಮೌಲ್ಯದ 978 ಗ್ರಾಂ ಚಿನ್ನಾಭರಣ ಹಾಗೂ .75 ಲಕ್ಷ ಬೆಲೆಬಾಳುವ 176 ಗ್ರಾಂ ವಜ್ರದ ಒಡವೆ ಸೇರಿ .1.22 ಕೋಟಿ ಮೌಲ್ಯದ ವಸ್ತು ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಕನಕಪುರ ರಸ್ತೆಯ ರಘುವನಹಳ್ಳಿಯಲ್ಲಿ ಉದ್ಯಮಿ ಸುಬ್ರಹ್ಮಣ್ಯ ಭಂಡಾರಿ ಅವರ ಕಾರಿನ ಗಾಜು ಒಡೆದು 1.170 ಗ್ರಾಂ ಚಿನ್ನ ಹಾಗೂ 186 ಗ್ರಾಂ ವಜ್ರದ ಒಡವೆಗಳಿದ್ದ ಬ್ಯಾಗ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಇನ್‌ಸ್ಪೆಕ್ಟರ್ ಸಿದ್ದರಾಜು ಹಾಗೂ ಪಿಎಸ್‌ಎ ಪುಟ್ಟೇಗೌಡ ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳವಿಗೂ ಮೊದಲು ಬ್ಯಾಂಕ್‌ನಲ್ಲಿ ಪೂಜೆ ಮಾಡಿದ ಕಳ್ಳರು
ಬಾಮೈದುನ ಸಾಥ್
ಆಂಧ್ರಪ್ರದೇಶ ರಾಜ್ಯದ ಓಜಿಕುಪ್ಪಂ ಮೂಲದ ರತ್ನ ಕುಮಾರ್ ಅಲಿಯಾಸ್ ರೆಡ್ಡಿ ವೃತ್ತಿಪರ ಕ್ರಿಮಿನಲ್ ಆಗಿದ್ದು, ಆತನ ಮೇಲೆ ಬೆಂಗಳೂರು ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ 26 ಪ್ರಕರಣಗಳು ದಾಖಲಾಗಿವೆ. ಬಾಲ್ಯದಲ್ಲೇ ಹಾದಿ ತಪ್ಪಿದ ರತ್ನಕುಮಾರ್ ಚೆನ್ನೈನಲ್ಲಿ ಕೂಲಿ ಕಾರ್ಮಿಕನಾಗಿದ್ದ. ಆ ವೇಳೆ ಆತನಿಗೆ ಫಾತಿಮಾ ಪರಿಚಯವಾಗಿ ಬಳಿಕ ಪ್ರೇಮವಾಗಿ ಇಬ್ಬರು ವಿವಾಹವಾದರು. ಮದುವೆ ನಂತರ ಕೂಲಿ ಕೆಲಸ ಬಿಟ್ಟು ಗಮನ ಬೇರೆಡೆ ಸೆಳೆದು ಅಥವಾ ಬ್ಯಾಂಕ್‌ಗಳ ಬಳಿ ಹಣ ಮತ್ತು ಆಭರಣ ಇಟ್ಟಿದ್ದ ಕಾರುಗಳ ಗಾಜು ಒಡೆದು ಕಳ್ಳತನ ಮಾಡುವುದು ಆತನ ವೃತ್ತಿಯಾಯಿತು. ಈ ಕೃತ್ಯಕ್ಕೆ ರತ್ನನಿಗೆ ಪತ್ನಿ ಹಾಗೂ ಬಾಮೈದ ಸಹಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ಯಾಂಕ್‌ಗಳ ಬಳಿ ಕಾದು ಕಳ್ಳತನ
ಏ.28ರಂದು ತನ್ನ ಇಬ್ಬರು ಸಹಚರರ ಜತೆ ಬೈಕ್‌ನಲ್ಲಿ ನಗರಕ್ಕೆ ಬಂದಿದ್ದ ರತ್ನಕುಮಾರ್, ರಘುವನಹಳ್ಳಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬಳಿ ಕಳ್ಳತನಕ್ಕೆ ಹೊಂಚು ಹಾಕಿದ್ದ. ಉದ್ಯಮಿ ಸುಬ್ರಹ್ಮಣ್ಯ ಭಂಡಾರಿ ಅವರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನ ಹಾಗೂ ವಜ್ರದ ಒಡವೆಗಳನ್ನು ತೆಗೆದುಕೊಂಡು ಬಂದು ಕಾರಿನಲ್ಲಿ ಇಟ್ಟು ಡೋರ್ ಲಾಕ್ ಮಾಡಿ ಪಕ್ಕದಲ್ಲಿಯೇ ಇದ್ದ ನರ್ಸರಿಗೆ ಹೂವಿನ ಗಿಡ ಖರೀದಿಗೆ ತೆರಳಿದ್ದರು. ಈ ವೇಳೆ ಉದ್ಯಮಿ ಕಾರಿನ ಗಾಜು ಒಡೆದು ಒಡವೆ ದೋಚಿದ್ದರು. ನಂತರ ಬ್ಯಾಂಕ್‌ನ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.