Asianet Suvarna News Asianet Suvarna News

ಬೆಂಗಳೂರು: ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಭಾರೀ ದೋಖಾ, ಮೂವರ ಬಂಧನ

1 ಕೆಜಿ 500 ಗ್ರಾಂ ನಕಲಿ ಚಿನ್ನಾಭರಣ ಜಪ್ತಿ, ನಕಲಿ ಚಿನ್ನಾಭರಣಗಳ ಮೇಲೆ ಪರಿಶುದ್ಧತೆಯ ಹಾಲ್‌ಮಾರ್ಕ್, ತಾಮ್ರದ ಆಭರಣಗಳಿಗೆ ಶೇ.30ರಷ್ಟು ಅಸಲಿ ಚಿನ್ನ ಲೇಪನ

Three Arrested For Fake Gold Scam in Bengaluru grg
Author
First Published Nov 24, 2022, 4:30 AM IST

ಬೆಂಗಳೂರು(ನ.24): ನಕಲಿ ಚಿನ್ನಾಭರಣಗಳನ್ನು ಬ್ಯಾಂಕ್‌ ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಅಡಮಾನವಿರಿಸಿ ಕೋಟ್ಯಂತರ ರು. ಸಾಲ ಪಡೆದು ವಂಚಿಸಿದ ಆರೋಪದಡಿ ಗದಗ ನಗರಸಭೆ ಉಪಾಧ್ಯಕ್ಷೆಯ ಪುತ್ರ ಸೇರಿದಂತೆ ಮೂವರು ವಂಚಕರು ವಿಜಯನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗದಗ ನಗರ ಸಭೆಯ ಹಾಲಿ ಉಪಾಧ್ಯಕ್ಷೆ ಸುನಂದಾ ಬಾಕಳೆ ಅವರ ಪುತ್ರ ದತ್ತಾತ್ರೇಯ ಬಾಕಳೆ ಅಲಿಯಾಸ್‌ ಯಶ್‌(28), ಶಿವಮೊಗ್ಗದ ಅರುಣ್‌ ರಾಜು ಕಾನಡೆ (30) ಹಾಗೂ ಉಡುಪಿಯ ಸತ್ಯಾನಂದ(28) ಬಂಧಿತರು. ಆರೋಪಿಗಳಿಂದ ಸುಮಾರು 1 ಕೆಜಿ 500 ಗ್ರಾಂ ನಕಲಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಆರೋಪಿಗಳು ವಿಜಯನಗರದ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ಜಯಲಕ್ಷ್ಮೇ ಎಂಬ ಮಹಿಳೆಯ ಮುಖಾಂತರ 235 ಗ್ರಾಂ ನಕಲಿ ಚಿನ್ನಾಭರಣ ಅಡಮಾನವಿರಿಸಿ 7.15 ಲಕ್ಷ ರು. ಸಾಲ ಪಡೆದಿದ್ದರು. ಬ್ಯಾಂಕ್‌ನಲ್ಲಿ ಚಿನ್ನಾಭರಣಗಳ ಪರೀಕ್ಷೆ ವೇಳೆ ಅನುಮಾನಗೊಂಡು ಆರೋಪಿಗಳು ನೀಡಿದ್ದ ಚಿನ್ನಾಭರಣ ಕತ್ತರಿಸಿ ಪರೀಕ್ಷಿಸಿದಾಗ ನಕಲಿ ಚಿನ್ನಾಭರಣ ಎಂಬುದು ಬೆಳಕಿಗೆ ಬಂದಿದೆ. ಈ ಸಂಬಂಧ ಬ್ಯಾಂಕಿನ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ವಿಜಯನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಡಿ.ಸಂತೋಷ್‌ ಕುಮಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Chikkamagaluru: ಅಸಲಿ ಚಿನ್ನದ ನಾಣ್ಯಗಳನ್ನು ತೋರಿಸಿ ಹಣ ಪಡೆದು ವಂಚನೆ, 3 ಮಂದಿ ಬಂಧನ

ಆರೋಪಿ ದತ್ತಾತ್ರೇಯ ಬಾಕಳೆ ಗದಗದಲ್ಲಿ ಜಿಮ್‌ ಹೊಂದಿದ್ದು, ಅರುಣ್‌ ರಾಜು ಕಾನಡೆ ದತ್ತಾತ್ರೇಯ ಜಿಮ್‌ನಲ್ಲಿ ಇನ್‌ಸ್ಟ್ರಕ್ಚರ್‌ ಆಗಿ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಸತ್ಯಾನಂದ, ದತ್ತಾತ್ರೇಯ ಬಾಕಳೆಯ ಸಹಚರನಾಗಿದ್ದಾನೆ. ಆರೋಪಿ ದತ್ತಾತ್ರೇಯ ಬಾಕಳೆಗೆ ಉತ್ತರ ಭಾರತದಲ್ಲಿ ನಕಲಿ ಚಿನ್ನಾಭರಣ ತಯಾರಿಸುವವರ ಸಂಪರ್ಕವಿತ್ತು. ಈತ ಕೋರಿಯರ್‌ನಲ್ಲಿ ನಕಲಿ ಚಿನ್ನಾಭರಣ ತರಿಸಿಕೊಂಡು ಸತ್ಯಾನಂದನ ಮುಖಾಂತರ ಬ್ಯಾಂಕ್‌ ಖಾತೆದಾರರನ್ನು ಹುಡುಕಿ ಅವರ ಹೆಸರಿನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡಮಾನವಿರಿಸಿ ಸಾಲ ಪಡೆಯುತ್ತಿದ್ದ. ಈ ವಿಚಾರವನ್ನು ತನ್ನ ಜಿಮ್‌ ಇನ್‌ಸ್ಟ್ರಕ್ಟರ್‌ ಅರುಣ್‌ಗೂ ತಿಳಿಸಿದ್ದ.

15 ಕೆ.ಜಿ. ನಕಲಿ ಚಿನ್ನಾಭರಣ ಅಡಮಾನ !

ಮೂವರು ಆರೋಪಿಗಳು ಸೇರಿಕೊಂಡು ಪಶ್ಚಿಮ ಬಂಗಾಳದ ಕೋಲ್ಕತ ಮತ್ತು ಗುಜರಾತ್‌ನ ಸೂರತ್‌ನಿಂದ ಕೋರಿಯರ್‌ನಲ್ಲಿ ನಕಲಿ ಚಿನ್ನಾಭರಣ ತರಿಸಿ ಗದಗ, ಹುಬ್ಬಳ್ಳಿ, ಕೊಪ್ಪಳ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳ ರಾಷ್ಟ್ರೀಕೃತ ಬ್ಯಾಂಕ್‌ಗಳು, ಖಾಸಗಿ ಬ್ಯಾಂಕ್‌ಗಳು ಹಾಗೂ ಖಾಸಗಿ ವ್ಯಕ್ತಿಗಳ ಬಳಿ ಅಡಮಾನವಿರಿಸಿ ಕೋಟ್ಯಂತರ ರು. ಸಾಲ ಪಡೆದು ವಂಚಿಸಿದ್ದಾರೆ. ಈವರೆಗೆ ಆರೋಪಿಗಳು ಸುಮಾರು 15 ಕೆ.ಜಿ. ನಕಲಿ ಚಿನ್ನಾಭರಣಗಳನ್ನು ಅಡಮಾನವಿರಿಸಿ ಸುಮಾರು 4-5 ಕೋಟಿ ರು. ಹಣವನ್ನು ಸಾಲ ಪಡೆದು ವಂಚಿಸಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಶೇ.30ರಷ್ಟು ಚಿನ್ನ ಲೇಪನ:

ತಾಮ್ರದ ಆಭರಣಗಳಿಗೆ ಶೇ.30ರಷ್ಟುಅಸಲಿ ಚಿನ್ನವನ್ನು ಲೇಪಿಸಲಾಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಈ ನಕಲಿ ಚಿನ್ನಾಭರಣಗಳ ಮೇಲೆ ಚಿನ್ನದ ಪರಿಶುದ್ಧತೆಯ ‘ಹಾಲ್‌ಮಾರ್ಕ್’ಸಹ ಹಾಕಲಾಗುತ್ತಿತ್ತು. ಬ್ಯಾಂಕ್‌ಗಳಲ್ಲಿ ಪರೀಕ್ಷೆ ಮಾಡಿದಾಗಲೂ ಇದು ನಕಲಿ ಚಿನ್ನಾಭರಣ ಎಂಬುದು ಗೊತ್ತಾಗುತ್ತಿರಲಿಲ್ಲ. ಆಭರಣಗಳ ಮೇಲೆ ಶೇ.30ರಷ್ಟುಚಿನ್ನದ ಲೇಪನ ಇರುತ್ತಿದ್ದರಿಂದ ಆಭರಣ ಉಜ್ಜಿದಾಗ ಅಥವಾ ಯಂತ್ರದಲ್ಲಿ ಹಾಕಿ ಪರೀಕ್ಷಿಸಿದಾಗಲೂ ಇದು ನಕಲಿ ಚಿನ್ನ ಎಂಬುದು ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಆರೋಪಿಗಳು ಬ್ಯಾಂಕ್‌ಗಳಲ್ಲಿ ಈ ನಕಲಿ ಚಿನ್ನಾಭರಣ ಅಡವಿರಿಸಿ ಕೋಟ್ಯಂತರ ರು. ಸಾಲ ಪಡೆದಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮುಂಬೈ: ನಕಲಿ ಚಿನ್ನಾಭರಣ ಮಾರಾಟ: ವ್ಯಾಪಾರಿಗೆ ₹5.5 ಲಕ್ಷ ವಂಚಿಸಿದ್ದ ಮಹಿಳೆ ಅರೆಸ್ಟ್

ಕ್ಯಾಸಿನೋದಲ್ಲಿ ಮಸ್ತಿ

ಆರೋಪಿಗಳು ಬ್ಯಾಂಕ್‌ಗಳಲ್ಲಿ ನಕಲಿ ಚಿನ್ನಾಭರಣ ಅಡವಿರಿಸಿ ಪಡೆದ ಹಣದಲ್ಲಿ ಗೊವಾಗೆ ತೆರಳಿ ಮೋಜು-ಮಸ್ತಿ ಮಾಡುತ್ತಿದ್ದರು. ಕ್ಯಾಸಿನೋಗಳಲ್ಲಿ ಜೂಜು, ಮದ್ಯ ಸೇವನೆ, ಹೆಂಗಸರ ಸಹವಾಸ ಸೇರಿದಂತೆ ತಮ್ಮ ಚಟಗಳಿಗೆ ಹಣವನ್ನು ಖರ್ಚು ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಉತ್ತರ ಭಾರತಕ್ಕೆ ಪೊಲೀಸರ ತಂಡ

ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಿಗೆ ಸೂರತ್‌ ಮತ್ತು ಕೋಲ್ಕತ್ತದಿಂದ ಕೋರಿಯರ್‌ ಮುಖಾಂತರ ನಕಲಿ ಚಿನ್ನಾಭರಣ ಕಳುಹಿಸುತ್ತಿದ್ದ ತಂಡದ ಬಂಧನಕ್ಕೆ ವಿಜಯನಗರ ಠಾಣೆ ಪೊಲೀಸರ ತಂಡ ಉತ್ತರ ಭಾರತಕ್ಕೆ ತೆರಳಿದೆ.
 

Follow Us:
Download App:
  • android
  • ios