Asianet Suvarna News Asianet Suvarna News

ಬೆಂಗಳೂರು: ಜಂಟಿಯಾಗಿ ಡ್ರಗ್ಸ್‌ ದಂಧೆ, ಮಹಿಳೆ ಸೇರಿ ಇಬ್ಬರು ವಿದೇಶಿ ಪ್ರಜೆಗಳ ಬಂಧನ

ತಾಂಜೇನಿಯಾ ದೇಶದ ಪ್ರಜೆ ಮ್ಯಾಗೋಲಿನ್‌ ಅಲಿಯಾಸ್‌ ಮ್ಯಾಗಿ ಹಾಗೂ ಬಾಣಸವಾಡಿಯ ಪ್ರಿನ್ಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 4 ಕೇಜಿ ಗಾಂಜಾ ಹಾಗೂ 105 ಗ್ರಾಂ ಎಂಡಿಎಂಎ ಸೇರಿದಂತೆ .4.25 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. 

Three Arrested For Drugs Cases in Bengaluru grg
Author
First Published Jul 11, 2023, 8:01 AM IST

ಬೆಂಗಳೂರು(ಜು.11): ನಗರದಲ್ಲಿ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ ಇಬ್ಬರು ವಿದೇಶಿ ಪ್ರಜೆಗಳನ್ನು ಪ್ರತ್ಯೇಕವಾಗಿ ಕೊತ್ತನೂರು ಹಾಗೂ ಸಂಪಿಗೆಹಳ್ಳಿ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕಸ್ತೂರಿ ನಗರದ ನಿವಾಸಿ ತಾಂಜೇನಿಯಾ ದೇಶದ ಪ್ರಜೆ ಮ್ಯಾಗೋಲಿನ್‌ ಅಲಿಯಾಸ್‌ ಮ್ಯಾಗಿ ಹಾಗೂ ಬಾಣಸವಾಡಿಯ ಪ್ರಿನ್ಸ್‌ ಬಂಧಿತರಾಗಿದ್ದು, ಆರೋಪಿಗಳಿಂದ 4 ಕೇಜಿ ಗಾಂಜಾ ಹಾಗೂ 105 ಗ್ರಾಂ ಎಂಡಿಎಂಎ ಸೇರಿದಂತೆ .4.25 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ಆರೋಪಿಗಳು ಒಟ್ಟಿಗೆ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಡ್ರಗ್ಸ್‌  ಮಾರಾಟಕ್ಕೆ ಯತ್ನಿಸಿದ್ದಾಗ ಪ್ರತ್ಯೇಕವಾಗಿ ಬಂಧಿಸಲಾಯಿತು ಎಂದು ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮೀಪ್ರಸಾದ್‌ ತಿಳಿಸಿದ್ದಾರೆ.

ಬೀದರ್‌: ಲಕ್ಷಾಂತರ ರು. ಮಾದಕ ಪದಾರ್ಥ ಸಾಗಾಟ, ಮೂವರ ಸೆರೆ

ಐದು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ತಾಂಜೇನಿಯಾ ದೇಶದ ಮ್ಯಾಗಿ ಹಾಗೂ ಪ್ರಿನ್ಸ್‌ ಬಂದಿದ್ದರು. ಬಳಿಕ ಬೆಂಗಳೂರಿಗೆ ಬಂದು ಪ್ರತಿಷ್ಠಿತ ಕಾಲೇಜಿನಲ್ಲಿ ಇಬ್ಬರು ಪ್ರವೇಶ ಪಡೆದಿದ್ದರು. ಮೋಜು ಮಸ್ತಿಗೆ ಸುಲಭವಾಗಿ ಹಣ ಸಂಪಾದಿಸಲು ಡ್ರಗ್ಸ್‌ ದಂಧೆಗಿಳಿದ ಆರೋಪಿಗಳು, ತಮ್ಮ ಪರಿಚಿತ ಪೆಡ್ಲರ್‌ಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿ ನಗರದಲ್ಲಿ ದುಬಾರಿ ಬೆಲೆಗೆ ಮಾರುತ್ತಿದ್ದರು. ಕೆಲ ತಿಂಗಳ ಹಿಂದೆ ಡ್ರಗ್ಸ್‌ ಮಾರಾಟ ಪ್ರಕರಣದಲ್ಲಿ ಪ್ರಿನ್ಸ್‌ನನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನು ಪಡೆದು ಜೈಲಿನಿಂದ ಹೊರಬಂದು ಆತ ಮತ್ತೆ ಮ್ಯಾಗಿ ಜತೆ ಸೇರಿ ಡ್ರಗ್ಸ್‌ ದಂಧೆ ಮುಂದುವರೆಸಿದ್ದ.

ಪ್ರಿನ್ಸ್‌ಗೆ ಗಾಂಜಾ ಹಾಗೂ ಎಂಡಿಎಂಎ ಅನ್ನು ಮ್ಯಾಗಿ ಪೂರೈಸುತ್ತಿದ್ದಳು. ಬಳಿಕ ಆ ಡ್ರಗ್ಸ್‌ ಅನ್ನು ಮಾರಾಟ ಮಾಡಿ ಹಣವನ್ನು ಮ್ಯಾಗಿಗೆ ಆತ ನೀಡುತ್ತಿದ್ದ. ಈ ಇಬ್ಬರು ಪಾಲುದಾರಿಕೆಯಲ್ಲಿ ದಂಧೆ ನಡೆಸುತ್ತಿದ್ದರು. ಇತ್ತೀಚೆಗೆ ಸಂಪಿಗೆಹಳ್ಳಿ ಹಾಗೂ ಕೊತ್ತನೂರು ಸಮೀಪ ಡ್ರಗ್ಸ್‌ ಮಾರಾಟಕ್ಕೆ ಇಬ್ಬರು ಪ್ರತ್ಯೇಕವಾಗಿ ಬಂದಿದ್ದಾಗ ಮಾಹಿತಿ ಪಡೆದು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ದಾಳಿ ವೇಳೆ ಪ್ರಿನ್ಸ್‌ ಬಳಿ 75 ಸಾವಿರ ಮೌಲ್ಯದ 1.5 ಕೇಜಿ ಗಾಂಜಾ ಹಾಗೂ ಮ್ಯಾಗಿಯಿಂದ 2.7 ಕೇಜಿ ಗಾಂಜಾ ಹಾಗೂ 105 ಗ್ರಾಂ ಎಡಿಎಂಎ ಸೇರಿದಂತೆ .3.45 ಲಕ್ಷ ಮೌಲ್ಯದ ಡ್ರಗ್ಸ್‌ ಜಪ್ತಿಯಾಗಿದೆ. ವೀಸಾ ಅವಧಿ ಮುಗಿದ ಬಳಿಕ ಅನಧಿಕೃತವಾಗಿ ನಗರದಲ್ಲಿ ಆರೋಪಿಗಳು ನೆಲೆಸಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Follow Us:
Download App:
  • android
  • ios