Asianet Suvarna News Asianet Suvarna News

ಬಾಗಿಲು ತಟ್ಟಿದನ್ನು ಪ್ರಶ್ನಿಸಿದ್ದಕ್ಕೆ ಬಿಯರ್ ಬಾಟಲ್‌ನಿಂದ ಹಲ್ಲೆ: ಮೂವರ ಬಂಧನ

ಪೇಯಿಂಗ್‌ ಗೆಸ್ಟ್‌(ಪಿಜಿ)ನಲ್ಲಿ ಪದೇ ಪದೇ ರೂಮ್‌ನ ಬಾಗಿಲು ತಟ್ಟಿ ಕಿರಿಕಿರಿ ಉಂಟು ಮಾಡಿದ್ದನ್ನು ಪ್ರಶ್ನಿಸಿದ ಇಬ್ಬರು ಯುವಕರ ಜತೆಗೆ ಜಗಳ ತೆಗೆದು ಹಲ್ಲೆಗೈದ ಆರೋಪದಡಿ ಮೂವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. 

Three arrested For Attacked with beer bottle for questioning knocking on door gvd
Author
First Published Oct 8, 2023, 6:03 AM IST

ಬೆಂಗಳೂರು (ಅ.08): ಪೇಯಿಂಗ್‌ ಗೆಸ್ಟ್‌(ಪಿಜಿ)ನಲ್ಲಿ ಪದೇ ಪದೇ ರೂಮ್‌ನ ಬಾಗಿಲು ತಟ್ಟಿ ಕಿರಿಕಿರಿ ಉಂಟು ಮಾಡಿದ್ದನ್ನು ಪ್ರಶ್ನಿಸಿದ ಇಬ್ಬರು ಯುವಕರ ಜತೆಗೆ ಜಗಳ ತೆಗೆದು ಹಲ್ಲೆಗೈದ ಆರೋಪದಡಿ ಮೂವರು ಆರೋಪಿಗಳನ್ನು ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ ಶರತ್‌, ಜಿತಿನ್‌, ಆಕಾಶ್‌ ಬಂಧಿತರು. ಆರೋಪಿಗಳು ಅ.5ರಂದು ರಾತ್ರಿ 11ಕ್ಕೆ ಹೂಡಿಯ ಬಸವಣ್ಣನಗರ ಮುಖ್ಯರಸ್ತೆಯ ವೇದಶ್ರೀ ಪಿಜಿಯಲ್ಲಿ ಅಮರೇಶ್‌(30) ಮತ್ತು ಗುರುಬಸಪ್ಪ(30) ಮೇಲೆ ಬಿಯರ್‌ ಬಾಟಲಿಯಿಂದ ಹಲ್ಲೆಗೈದಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ: ರಾಯಚೂರು ಮೂಲದ ಅಮರೇಶ್‌ ಮತ್ತು ಗುರುಬಸಪ್ಪ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅ.5ರಂದು ರಾತ್ರಿ 11ರ ಸುಮಾರಿಗೆ ಅಮರೇಶ್‌ ಮತ್ತು ಗುರುಬಸಪ್ಪ ಪಿಜಿಯ ತಮ್ಮ ರೂಮ್‌ನಲ್ಲಿ ಕೆಲಸದಲ್ಲಿ ಮಗ್ನರಾಗಿದ್ದರು. ಈ ವೇಳೆ ಯಾರೋ ಬಾಗಿಲು ತಟ್ಟುವ ಶಬ್ಧವಾಗಿದೆ. ಬಾಗಿಲು ತೆರೆದು ನೋಡಿದರೆ, ಅಲ್ಲಿ ಯಾರು ಕಾಣಿಸಿಲ್ಲ. ಬಳಿಕ ಬಾಗಿಲು ಹಾಕಿಕೊಂಡು ರೂಮ್‌ಗೆ ಹೋಗಿದ್ದಾರೆ. ಇದೇ ರೀತಿ ಮೂರ್ನಾಲ್ಕು ಬಾರಿ ರೂಮ್‌ ಬಾಗಿಲು ತಟ್ಟಿ ಕಿರಿಕಿರಿ ಉಂಟು ಉಂಟು ಮಾಡಲಾಗಿದೆ. ಕೊನೆಗೆ ಕಿಟಕಿಯಲ್ಲಿ ನೋಡಿದಾಗ ಎದುರು ರೂಮ್‌ನ ಜಿತಿನ್‌ ಬಾಗಿಲು ತಟ್ಟಿ ಮೆಟ್ಟಿಲಲ್ಲಿ ಓಡುತ್ತಿರುವುದು ಕಂಡು ಬಂದಿದೆ.

ವಿದ್ಯಾರ್ಥಿನಿಯಿಂದ ಶೌಚಾಲಯ ಕ್ಲೀನ್ ಮಾಡಿಸಿರೋ ಶಿಕ್ಷಕರು: ಆಸಿಡ್, ಬ್ಲಿಚಿಂಗ್ ವಾಸನೆಗೆ ಅಸ್ವಸ್ಥಗೊಂಡ ಬಾಲಕಿ

ಪ್ರಶ್ನಿಸಿದ್ದಕ್ಕೆ ಹಲ್ಲೆ: ಈ ವೇಳೆ ಗುರುಬಸಪ್ಪ ಅವರು ರೂಮ್‌ನ ಬಾಗಿಲು ತೆರೆದು ಏತಕ್ಕೆ ಕಿರಿಕಿರಿ ಉಂಟು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಪಾನಮತ್ತನಾಗಿದ್ದ ಜಿತಿನ್‌, ಗುರುಬಸಪ್ಪ ಜತೆಗೆ ಜಗಳಕ್ಕೆ ಬಿದ್ದಿದ್ದಾನೆ. ಈ ವೇಳೆ ಆತನ ರೂಮ್‌ನಲ್ಲಿದ್ದ ಪಾನಮತ್ತ ಶರತ್‌ ಮತ್ತು ಆಕಾಶ್‌ ಹೊರಗೆ ಬಂದು ಗುರುಬಸಪ್ಪನ ಮೇಲೆ ಹಲ್ಲೆ ಮಾಡಿದ್ದಾರೆ. ತಕ್ಷಣ ರೂಮ್‌ನಿಂದ ಹೊರಗೆ ಬಂದ ಅಮರೇಶ್‌, ಸ್ನೇಹಿತನಿಗೆ ಏತಕ್ಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕೋಪೋದ್ರಿಕ್ತರಾದ ಮೂವರು ಆರೋಪಿಗಳು ಕೈಯಲ್ಲಿದ್ದ ಬಿಯರ್‌ ಬಾಟಲಿ ತೆಗೆದು ಅಮರೇಶ್‌ ಅವರ ತಲೆಗೆ ಹಲ್ಲೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.

ಈ ವೇಳೆ ರಕ್ತಸ್ರಾವವಾಗಿ ಕುಸಿದು ಬಿದ್ದ ಅಮರೇಶ್‌ ಹಾಗೂ ಹಲ್ಲೆಯಿಂದ ಗಾಯಗೊಂಡಿದ್ದ ಗುರುಬಸಪ್ಪ ಅವರನ್ನು ಪಿಜಿ ಮಾಲೀಕರು ಆಸ್ಪತ್ರೆಗೆ ಕಳುಹಿಸಿದ್ದಾರೆ. ಬಳಿಕ ಹೊಯ್ಸಳ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಮಹದೇವಪುರ ಪೊಲೀಸ್‌ ಠಾಣೆಗೆ ಕಯ್ದೊಯ್ದಿದ್ದಾರೆ. ಅಷ್ಟರಲ್ಲಿ ಕೆ.ಆರ್‌.ಪುರದ ಸರ್ಕಾರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಅಮರೇಶ್‌ ಮತ್ತು ಗುರುಬಸಪ್ಪ ಠಾಣೆಗೆ ಬಂದು ಹಲ್ಲೆ ಸಂಬಂಧ ದೂರು ನೀಡಿದ್ದಾರೆ.

ಕನ್ನಡಿಗರ ಮೇಲಿನ ಹಲ್ಲೆಗೆ ನೆಟ್ಟಿಗರ ತೀವ್ರ ಆಕ್ರೋಶ: ಘಟನೆಯ ಮಾರನೇ ದಿನವೇ ಮೂವರು ಆರೋಪಿಗಳು ಪಿಜಿಯಲ್ಲಿ ಇರುವುದು ಕಂಡು ಬಂದಿದೆ. ಇದರಿಂದ ಬೇಸರಗೊಂಡ ಅಮರೇಶ್‌, ಸಾಮಾಜಿಕ ಜಾಲತಾಣದಲ್ಲಿ ನಡೆದ ಘಟನೆ ವಿವರಿಸಿ, ‘ಪೊಲೀಸರು ಆರೋಪಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಹೊರರಾಜ್ಯದವರು ಕನ್ನಡಿಗರ ಮೇಲೆ ಹಲ್ಲೆ ಮಾಡಿದರೂ ಯಾರು ನಮ್ಮ ಸಹಾಯಕ್ಕೆ ಬಂದಿಲ್ಲ’ ಎಂದು ನೋವಿನಿಂದ ಪೋಸ್ಟ್‌ ಮಾಡಿದ್ದರು. ಇದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮಹದೇವಪುರ ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಉದ್ಯೋಗ ಸೃಷ್ಟಿ ಉದ್ದೇಶದಿಂದ ಸೂಕ್ತ ಸ್ಥಳದಲ್ಲಿ ಮದ್ಯದಂಗಡಿ ತೆರೆಯಲು ಚಿಂತನೆ: ಡಿಕೆಶಿ

ಈ ಪ್ರಕರಣದಲ್ಲಿ ಆರಂಭಿಕ ಹಂತದಲ್ಲಿ ಸೂಕ್ತ ಸೆಕ್ಷನ್‌ಗಳನ್ನು ಹಾಕಲು ಪೊಲೀಸರು ಎಡವಿದ್ದರು, ಅದನ್ನು ಈಗ ಸರಿಪಡಿಸಲಾಗಿದೆ. ಕೊಲೆ ಯತ್ನ ಪ್ರಕರಣ ದಾಖಲಿಸಿ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ರೀತಿಯ ಗೂಂಡಾ ವರ್ತನೆ ನಗರದಲ್ಲಿ ಯಾರಿಂದಲೂ ನಡೆಯಲು ಬಿಡುವುದಿಲ್ಲ.
-ಸಂಜೀವ್‌ ಪಾಟೀಲ್‌, ವೈಟ್‌ಫೀಲ್ಡ್ ವಿಭಾಗದ ಡಿಸಿಪಿ

Follow Us:
Download App:
  • android
  • ios