ಬೆಳಗಾವಿ(ಏ.21): ಲಾರಿ ಸಮೇತ ಚಾಲಕನನ್ನು ಅಪಹರಿಸಿಕೊಂಡು ಹೋಗಿದ್ದ ಮೂವರನ್ನು ಮಂಗಳವಾರ ಪೊಲೀಸರು ಬಂಧಿಸಿ, ಅವರಿಂದ ಅಪಹರಿಸಿಕೊಂಡು ಹೋಗಿದ್ದ ಲಾರಿ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ವಾಹನ ಸೇರಿದಂತೆ ಒಟ್ಟು 17.03 ಲಕ್ಷ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಜಿಲ್ಲೆಯ ಕುಮಟಗಿ ತಾಂಡಾದ ಯುವರಾಜ ಉಮಲು ರಾಠೋಡ (30), ಸುರೇಶ ಉಮಲು ರಾಠೋಡ (34) ಹಾಗೂ ಮುತ್ತು ಉಮಲು ರಾಠೋಡ ಬಂಧಿತರು. ವಿಜಯಪುರದ ಕಲ್ಲಪ್ಪ ಬೆಳಗಲಿ ಎಂಬುವವರಿಗೆ ಸೇರಿದ್ದ ಲಾರಿಯನ್ನು ಬಳ್ಳಾರಿಯ ಫೈನಾನ್ಸ್‌ ಹರಾಜು ಪ್ರಕ್ರಿಯೆಯಲ್ಲಿ ಮಹಾರಾಷ್ಟ್ರದ ಸಾತಾರಾದ ಅರ್ಜುನ ಸುಪೇಕರ ಎಂಬುವವರು ಖರೀದಿ ಮಾಡಿದ್ದರು. ಆ ಲಾರಿಯನ್ನು ಏ.7 ರಂದು ಮಹಾರಾಷ್ಟ್ರ ಸಾತಾರ ಜಿಲ್ಲೆ ಖಟಾವ ತಾಲೂಕಿನ ಪವಾರವಾಡಿ (ವರ್ಧನಗಡ) ಗ್ರಾಮದ ರಮೇಶ ಪ್ರಹ್ಲಾದ ಪ್ರವಾರ (ಲಾರಿ ಚಾಲಕ) ಬಳ್ಳಾರಿಯಿಂದ ಸಾತಾರದ ಕಡೆಗೆ ನಡೆಸಿಕೊಂಡು ಹೋಗುತ್ತಿದ್ದನು. ಈ ಲಾರಿಯ ಸಣ್ಣ ಪುಟ್ಟ ರಿಪೇರಿ ಕಾರ್ಯ ಇರುವುದರಿಂದ ಕೊಲ್ಹಾಪುರದಲ್ಲಿ ಮಾಡಿಸಲು ನಿರ್ಧರಿಸಿ ಚಾಲಕ ರಾತ್ರಿಯಾಗಿದ್ದರಿಂದ ಅಪ್ಪಾಚಿವಾಡಿ ಪೆಟ್ರೋಲ್‌ ಬಂಕ್‌ನಲ್ಲಿ ಲಾರಿ ನಿಲ್ಲಿಸಿ ಮಲಗಿಕೊಂಡಿದ್ದಾನೆ.

ನೈಟ್‌ ಶಿಫ್ಟ್ ಮುಗಿಸಿ ಬರ್ತಿದ್ದ ಯುವತಿ ಅಪಹರಣ: ಐವರಿಂದ ಗ್ಯಾಂಗ್ ರೇಪ್

ನಂತರ ಮಾರನೆ ದಿನ ಏ.8 ರಂದು ಬೆಳಗ್ಗೆ 8 ಗಂಟೆಯ ಸುಮಾರಿಗೆ ಚಾಲಕ ಲಾರಿ ಚಲಾಯಿಸಿಕೊಂಡು ಕೊಲ್ಹಾಪುರದ ಕಡೆಗೆ ಹೋಗುತ್ತಿದ್ದ ವೇಳೆ ಸರ್ವಿಸ್‌ ರಸ್ತೆಯ ಮೇಲೆ ಇದ್ದ ಕ್ಯಾಂಟೀನ್‌ಗೆ ನಿಲ್ಲಿಸಿ ಉಪಹಾರ ಮಾಡಲು ನಿಂತ ಸಂದರ್ಭದಲ್ಲಿ ಸುಮಾರು 8 ಜನರ ತಂಡ ಸ್ಕಾರ್ಪಿಯೊ ವಾಹನದಲ್ಲಿ ಬಂದ ಲಾರಿ ಚಾಲಕ ರಮೇಶಗೆ ಮುತ್ತಿಗೆ ಹಾಕಿದ್ದಾರೆ. ನಂತರ ತಮ್ಮ ವಾಹನದಲ್ಲಿ ಹಾಕಿಕೊಂಡು ಲಾರಿ, ಮೊಬೈಲ್‌, ಪಾಕೆಟ್‌, ಎಟಿಎಂ ಹಾಗೂ 7500 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದಲ್ಲಿ ಹಲ್ಲೆ ಮಾಡುತ್ತಾ ವಿಜಯಪುರಕ್ಕೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಹೆದರಿಸಿ ಎಟಿಎಂ ಪಿನ್‌ ಪಡೆದುಕೊಂಡು ಖಾತೆಯಲ್ಲಿದ್ದ 2500 ವನ್ನು ಪಡೆದುಕೊಂಡು, ಏ.9 ವರೆಗೆ ಆರೋಪಿಗಳು ತಮ್ಮ ಮನೆಯಲ್ಲಿ ಕೂಡಿಹಾಕಿದ್ದಾರೆ.

ಏ.9 ರಂದು ಲಾರಿ ಮಾಲೀಕ ಅರ್ಜುನ ಸೂಪೇಕರ ಹಾಗೂ ಇನ್ನೀತರರು ವಿಜಯಪುರಕ್ಕೆ ಆಗಮಿಸಿ ಆರೋಪಿಗಳ ವಶದಲ್ಲಿದ್ದ ಲಾರಿ ಚಾಲಕ ರಮೇಶನನ್ನು ಬಿಡಿಸಿಕೊಂಡು, ನಂತರ ಲಾರಿ ನಿಪ್ಪಾಣಿ ಗ್ರಾಮೀಣ ಪೊಲೀಸ್‌ ಠಾಣಾ ವ್ಯಾಪ್ತಿಯ ಅಪ್ಪಾಚಿವಾಡಿಯಿಂದ ವಿಜಯಪುರಕ್ಕೆ ತೆಗೆದುಕೊಂಡು ಹೋಗಿದ್ದರಿಂದ ಲಾರಿ ಚಾಲಕ ಹಾಗೂ ಮಾಲೀಕರು ನಿಪ್ಪಾಣಿಗೆ ಬಂದು ಈ ಘಟನೆ ಕುರಿತು ದೂರು ಸಲ್ಲಿಸಿದ್ದರು. 

ಈ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತಂಡ ರಚಿಸಿದ ಪೊಲೀಸರು, ಮಂಗಳವಾರ ವಿಜಯಪುರ ಜಿಲ್ಲೆಯ ತೊರವಿ ಗ್ರಾಮದ ವ್ಯಾಪ್ತಿಯಲ್ಲಿ ಯುವರಾಜ ರಾಠೋಡ, ಸುರೇಶ್‌ ರಾಠೋಡ ಹಾಗೂ ಮುತ್ತು ರಾಠೋಡ ಎಂಬುವರನ್ನು ಬಂಧಿಸಿದ್ದಾರೆ. ನಂತರ ಅಪಹರಿಸಿದ್ದ 14 ಲಕ್ಷ ಮೌಲ್ಯದ ಲಾರಿ, ಕೃತ್ಯಕ್ಕೆ ಬಳಕೆ ಮಾಡಿದ್ದ 3 ಲಕ್ಷ ಮೌಲ್ಯದ ಸ್ಕಾರ್ಪಿಯೊ ಹಾಗೂ 3 ಸಾವಿರ ಮೌಲ್ಯದ ಮೊಬೈಲ್‌ ಸೇರಿದಂತೆ ಒಟ್ಟು 17.03 ಲಕ್ಷ ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.