Asianet Suvarna News Asianet Suvarna News

ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಉಪನ್ಯಾಸಕನಿಂದ ಡ್ರಗ್ಸ್‌ ದಂಧೆ: 76 ಲಕ್ಷ ಮೌಲ್ಯದ ಗಾಂಜಾ ಜಪ್ತಿ

ತೆಲಂಗಾಣದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಮಾರಾಟ| ಅತಿಥಿ ಉಪನ್ಯಾಸಕ ಸೇರಿದಂತೆ ಮೂವರ ಬಂಧನ| ಆರೋಪಿ ಕಿರಣ್‌ ಮೂಲತಃ ತೆಲಂಗಾಣ ರಾಜ್ಯದವನಾಗಿದ್ದು, ಕೆ.ಆರ್‌.ಪುರ ಹತ್ತಿರ ಐಟಿಐ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ| 

Three Accused Arrest for Drugs Mafia Case in Bengalurugrg
Author
Bengaluru, First Published Sep 30, 2020, 7:34 AM IST

ಬೆಂಗಳೂರು(ಸೆ.30): ಮಾದಕ ವಸ್ತು ಮಾಫಿಯಾದ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿರುವ ಜೆ.ಪಿ.ನಗರ ಠಾಣೆ ಪೊಲೀಸರು, ಈ ದಂಧೆಯಲ್ಲಿದ್ದ ಅತಿಥಿ ಉಪನ್ಯಾಸಕ ಸೇರಿದಂತೆ ಮೂವರನ್ನು ಸೆರೆ ಹಿಡಿದು 76 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.

ಕೆ.ಆರ್‌.ಪುರದ ನಿವಾಸಿ ಕಿರಣ್‌ (22), ಮಹಿಪಾಲ್‌ (22) ಹಾಗೂ ಆನೇಕಲ್‌ನ ಅಡಿಗಾರ ಕಲ್ಲಹಳ್ಳಿ ನಿವಾಸಿ ಅಸ್ಗರ್‌ ಖಾನ್‌ ಬಂಧಿತರಾಗಿದ್ದು, ಆರೋಪಿಗಳಿಂದ 76 ಲಕ್ಷ ಮೌಲ್ಯದ 127 ಕೆ.ಜಿ ಗಾಂಜಾ, ಕಾರು ಮತ್ತು ಮೊಬೈಲ್‌ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಸರ್‌.ಎಂ.ವಿಶ್ವೇಶ್ವರಯ್ಯ ಮೈದಾನದ ಬಳಿ ಗಾಂಜಾ ಸೇವಿಸುವ ವ್ಯಸನಿಯೊಬ್ಬ ಸಿಕ್ಕಿಬಿದ್ದ. ಆತನನ್ನು ಠಾಣೆಗೆ ಕರೆದು ವಿಚಾರಿಸಿದಾಗ ಅಸ್ಗರ್‌ ಮಾಹಿತಿ ಸಿಕ್ಕಿತು. ಈ ಸುಳಿವಿನ ಮೇರೆಗೆ ಅಸ್ಗರ್‌ನನ್ನು ಸೆರೆ ಹಿಡಿದಾಗ ಮಾದಕ ಜಾಲ ಬಯಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ವೆಬ್‌ ಸರಣಿ ನೋಡಿ ಡ್ರಗ್ಸ್‌ ದಂಧೆಗಿಳಿದ ವಿದ್ಯಾರ್ಥಿ..!

ಲಾಕ್‌ಡೌನ್‌ ಕೆಲಸವಿಲ್ಲದೆ ದಂಧೆ

ಕಿರಣ್‌ ಮೂಲತಃ ತೆಲಂಗಾಣ ರಾಜ್ಯದವನಾಗಿದ್ದು, ಕೆ.ಆರ್‌.ಪುರ ಹತ್ತಿರ ಐಟಿಐ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿದ್ದ. ಆತನ ಸಂಬಂಧಿ ಮಹಿಪಾಲ್‌ ಪದವಿ ಓದುತ್ತಿದ್ದಾನೆ. ಕೊರೋನಾ ಪರಿಣಾಮ ಕೆಲಸ ಕಳೆದುಕೊಂಡ ಕಿರಣ್‌, ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದ. ತೆಲಂಗಾಣದ ಜಹಿರಾಬಾದ್‌ನಲ್ಲಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಈ ಇಬ್ಬರು ಆರೋಪಿಗಳು, ಬೀದರ್‌ ಜಿಲ್ಲೆಯ ಹೆದ್ದಾರಿಗಳಲ್ಲಿ ಮಾರುತ್ತಿದ್ದರು. ಹೀಗೆ ಗಾಂಜಾ ಖರೀದಿಗೆ ತೆರಳಿದ್ದಾಗ ಅವರಿಗೆ ಅಸ್ಗರ್‌ ಖಾನ್‌ ಪರಿಚಯವಾಗಿದೆ. ಈ ಸ್ನೇಹದಲ್ಲೇ ಗಾಂಜಾ ಪೂರೈಕೆಗೆ ಒಪ್ಪಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಅಸ್ಗರ್‌ ಜತೆಗೂಡಿ ಕಿರಣ್‌ ಹಾಗೂ ಮಹಿಪಾಲ್‌ ವ್ಯವಹರಿಸುತ್ತಿದ್ದರು. ಬೀದರ್‌ನ ಪರಿಚಿತರ ಕಾರಿನಲ್ಲಿ ನಗರಕ್ಕೆ ಗಾಂಜಾ ತಂದಿದ್ದಾಗ ಆರೋಪಿಗಳನ್ನು ಬಂಧಿಸಲಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್‌ ಪಾಂಡೆ ತಿಳಿಸಿದ್ದಾರೆ.

ಇನ್ನು ಆನೇಕಲ್‌ ಹತ್ತಿರದ ಖಾಸಗಿ ಕಂಪನಿಯೊಂದರಲ್ಲಿ ಲಿಫ್ಟ್‌ ನಿರ್ವಹಿಸುತ್ತಿದ್ದ ಅಸ್ಗರ್‌ ಜೂಜು, ಮದ್ಯ ಹಾಗೂ ಮಾದಕ ವಸ್ತು ಸೇವನೆಯ ದುಶ್ಚಟಗಳಿಗೆ ದಾಸನಾಗಿದ್ದ. ಜೀವನ ಸಾಗಿಸಲು ಹಣಕಾಸು ಸಮಸ್ಯೆ ಎದುರಿಸುವಂತಾಯಿತು. ಸುಲಭವಾಗಿ ಸಂಪಾದನೆಗೆ ಗಾಂಜಾ ಮಾರಾಟ ದಂಧೆಯಲ್ಲಿ ಆತ ತೊಡಗಿದ್ದ. ಬಾಡಿಗೆ ಕಾರು ಮಾಡಿಕೊಂಡು ಬೀದರ್‌ಗೆ ಹೋಗಿ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ನಗರಕ್ಕೆ ತಂದು ಮಾರುತ್ತಿದ್ದ. ಒಂದೂವರೆ ತಿಂಗಳ ಹಿಂದೆ 12 ಕೆ.ಜಿ. ಗಾಂಜಾ ಬಿಕರಿ ಮಾಡಲಾಗಿತ್ತು. ಕೆಲ ದಿನಗಳ ಹಿಂದೆ ವಿಶ್ವೇಶ್ವರಯ್ಯ ಆಟ ಮೈದಾನದ ಬಳಿ 600 ಗ್ರಾಂ ಗಾಂಜಾವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಎಂದು ಡಿಸಿಪಿ ವಿವರಿಸಿದ್ದಾರೆ.

Follow Us:
Download App:
  • android
  • ios