ಬೆಂಗಳೂರು(ಡಿ.12): ಮಹಿಳೆಯೊಬ್ಬರು ಪೊಲೀಸ್‌ ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ಅಶ್ಲೀಲ ಫೋಟೋ ಕಳುಹಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಇನ್‌ಸ್ಪೆಕ್ಟರ್‌ ಸಿ.ದಯಾನಂದ ಕೇಂದ್ರ ವಿಭಾಗದ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ. ಡಿ.8ರ ರಾತ್ರಿ 8.30ರಲ್ಲಿ ಅಪರಿಚಿತ ಮೊಬೈಲ್‌ ನಂಬರ್‌ನಿಂದ ಇನ್‌ಸ್ಪೆಕ್ಟರ್‌ ವಾಟ್ಸ್‌ಆಪ್‌ನಲ್ಲಿ ವಿಡಿಯೋ ಕಾಲ್‌ ಬಂದಿದ್ದು, ಅದನ್ನು ಸ್ವೀಕರಿಸಿದ್ದಾರೆ. 

ಶೌಚಾಲಯದಲ್ಲಿ ಮೊಬೈಲಿಟ್ಟು ಚಿತ್ರೀಕರಣ: ವಿಡಿಯೋ ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್‌..!

ಅದರಲ್ಲಿ ಮಹಿಳೆ ಅಶ್ಲೀಲ ವಿಡಿಯೋವನ್ನು ತೋರಿಸುತ್ತಿದ್ದು, ತಕ್ಷಣ ದಯಾನಂದ್‌ ಕರೆಯನ್ನು ಕಟ್‌ ಮಾಡಿದ್ದಾರೆ. ಆನಂತರ ವಿಡಿಯೋದ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಇನ್‌ಸ್ಪೆಕ್ಟರ್‌ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಕಳುಹಿಸಿ 11 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇಲ್ಲವಾದರೆ, ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿ ಸ್ನೇಹಿತರಿಗೆ ಕಳುಹಿಸಿ ಮರ್ಯಾದೆ ತೆಗೆಯುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಮೊಬೈಲ್‌ ನಂಬರ್‌ ಆಧರಿಸಿ ತನಿಖೆ ಕೈಗೊಂಡಿರುವುದಾಗಿ ಸೈಬರ್‌ ಕ್ರೈಂ ಪೊಲೀಸರು ತಿಳಿಸಿದ್ದಾರೆ.