*  ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಘಟನೆ*  ವೃದ್ಧನನ್ನ ಅಡ್ಡಗಟ್ಟಿ ಚಿನ್ನ ಕದ್ದ ನಾಲ್ವರು ಕಳ್ಳರು*  ಕಳ್ಳರ ಪತ್ತೆಗಾಗಿ ಜಾಲ ಬೀಸಿದ ಪೊಲೀಸರು  

ಸಿಂಧನೂರು(ಜೂ.11): ನಗರದ ಗಂಗಾವತಿ ರಸ್ತೆಯಲ್ಲಿರುವ ರಿಲ್ಯಾಯನ್ಸ್‌ ಪೆಟ್ರೋಲ್‌ ಬಂಕ್‌ ಹತ್ತಿರ ನಾಲ್ಕು ಜನ ಕಳ್ಳರು ಪೊಲೀಸರಂತೆ ನಟಿಸಿ ವೃದ್ಧನೋರ್ವನಿಂದ ಬಂಗಾರ ಕದ್ದಿರುವ ಘಟನೆ ನಡೆದಿದೆ.

ನಗರದಿಂದ ಸ್ವಗ್ರಾಮ ಸಾಲಗುಂದಾಕ್ಕೆ ತೆರಳುತ್ತಿದ್ದ ವೃದ್ಧ ಹನುಮೇಶ ಶೆಟ್ಟಿ ಅವರನ್ನು ಅಡ್ಡಗಟ್ಟಿದ ನಾಲ್ವರು ಕಳ್ಳರು, ನಾವು ಪೊಲೀಸರು ಎಂದೇಳಿಕೊಂಡು ನಿನ್ನ ಬೈಕ್‌ನಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿದಿಯಾ ಎಂಬ ದೂರು ಬಂದಿದ್ದು, ಗಾಡಿಯನ್ನು ಚೆಕ್‌ ಮಾಡುತ್ತೇವೆ ಎಂದು ಹೇಳಿ ಹೆದರಿಸಿದ್ದಾರೆ. ನಂತರ ಆತನಿಗೆ ಮೂರ್ಛೆ ಹೋಗುವ ಪೌಡರ್‌ ಎರಚಿ 2 ಬಂಗಾರದ ಉಂಗುರ ಹಾಗೂ 1 ಸರವನ್ನು ಬಿಚ್ಚಿಕೊಂಡಿದ್ದಾರೆ.

ಕಣ್ಣು ಕಾಣಲ್ಲವೆಂದು ಬೇರೊಬ್ಬನ ಸಹಾಯ ಪಡೆದು ಮನೆಗಳ್ಳತನ..!

ತದನಂತರ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ನಿನ್ನ ಉಂಗುರ ಮತ್ತು ಸರವನ್ನು ಬೈಕ್‌ನ ಬಾಕ್ಸ್‌ನಲ್ಲಿ ಇಟ್ಟಿದ್ದೇವೆ. ಹುಷಾರಾಗಿ ಊರಿಗೆ ಹೋಗು ಎಂದು ಕಾಲ್ಕಿತ್ತಿದ್ದಾರೆ. ವೃದ್ಧ ಸ್ವಲ್ಪ ದೂರ ಹೋದ ಮೇಲೆ ಬೈಕ್‌ನ ಬಾಕ್ಸ್‌ ತೆಗೆದು ನೋಡಿದಾಗ ಉಂಗುರ ಮತ್ತು ಸರ ಇರಲಿಲ್ಲ. ಇದರಿಂದ ಗಾಬರಿಗೊಂಡು ಶಹರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಸರ್ಕಲ್‌ ಇನ್ಸ್‌ಪೆಕ್ಟರ್‌ ಉಮೇಶ ಕಾಂಬ್ಳೆ ಹಾಗೂ ಸಬ್‌ಇನ್ಸ್‌ಪೆಕ್ಟರ್‌ ಸೌಮ್ಯ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.