ಅಂಗಡಿಯ ಮಹಿಳಾ ಶೌಚಾಲಯದಲ್ಲಿ ಅವಿತು ದುಬಾರಿ ಮೊಬೈಲ್ ಕದ್ದವ ಸೆರೆ
ಬೆಂಗಳೂರು(ಜು.30): ತನ್ನ ಪ್ರೇಯಸಿ ಓಲೈಕೆಗೆ ದುಬಾರಿ ಮೌಲ್ಯದ ಮೊಬೈಲ್ ಉಡುಗೊರೆ ನೀಡಲು ಎಲೆಕ್ಟ್ರಾನಿಕ್ ಉಪಕರಣ ಮಾರಾಟ ಮಳಿಗೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅವಿತು ಕುಳಿತು ಮುಂಜಾನೆ ಆ ಅಂಗಡಿಯಲ್ಲಿ ಮೊಬೈಲ್ ಕದ್ದು ಪರಾರಿಯಾಗಿದ್ದ ಚಾಲಾಕಿ ಜೆ.ಪಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಿಟಿಎಂ ಲೇಔಟ್‌ನ ಅಬ್ದುಲ್ ಮುನ್ನಾಫ್ ಬಂಧಿತನಾಗಿದ್ದು, ಆರೋಪಿಯಿಂದ .5 ಲಕ್ಷ ಮೌಲ್ಯದ 6 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜೆ.ಪಿ.ನಗರದ 2ನೇ ಹಂತದ ಕ್ರೋಮಾ ಎಲೆಕ್ಟ್ರಾನಿಕ್ ಉಪಕರಣ ಮಾರಾಟ ಮಳಿಗೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ. ಅಂಗಡಿ ವ್ಯವಸ್ಥಾಪಕರು ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಅರಳಿದ ಪ್ರೇಮ:
ಬಿಹಾರ ಮೂಲದ ಅಬ್ದುಲ್, ಬಿಟಿಎಂ ಲೇಔಟ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಆತನಿಗೆ ಯುವತಿಯೊಬ್ಬಳು ಪರಿಚಯವಾಗಿದ್ದಳು. ಕ್ರಮೇಣ ಚಾಟಿಂಗ್ ಬಳಿ ಆಕೆ ಮೇಲೆ ಅವನಿಗೆ ಪ್ರೇಮವಾಯಿತು. ಹೇಗಾದರೂ ಮಾಡಿ ಗೆಳತಿಯನ್ನು ಓಲೈಸಿಕೊಳ್ಳಬೇಕು ಎಂದು ಭಾವಿಸಿದ ಅಬ್ದುಲ್, ಗೆಳತಿಗೆ ದುಬಾರಿ ಮೌಲ್ಯದ ಮೊಬೈಲ್ ಉಡುಗೊರೆ ನೀಡಲು ನಿರ್ಧರಿಸಿದ್ದ. ಆದರೆ ಜೇಬಿನಲ್ಲಿ ಬಿಡಿಗಾಸಿರಲಿಲ್ಲ. ಹೀಗಾಗಿ ಜೆ.ಪಿ.ನಗರದ ಕ್ರೋಮಾ ಎಲೆಕ್ಟ್ರಾನಿಕ್ ಅಂಗಡಿಗೆ ಮೊಬೈಲ್ ಖರೀದಿ ನೆಪದಲ್ಲಿ ತೆರಳಿ ಆ ಮಳಿಗೆಯ ಮಹಿಳೆಯರ ಶೌಚಾಲಯದಲ್ಲಿ ರಾತ್ರಿ ಅವಿತುಕೊಂಡು ಮುಂಜಾನೆ ಅಂಗಡಿ ಬಾಗಿಲು ತೆರೆಯುವ ಹೊತ್ತಿಗೆ ಮೊಬೈಲ್ ಕಳ್ಳತನಕ್ಕೆ ಸಂಚು ರೂಪಿಸಿದ.
ಬೆಂಗ್ಳೂರಲ್ಲಿ ಬುಲೆಟ್ ಕಳ್ಳತನ, ರಾಯಚೂರಲ್ಲಿ ಮಾರಾಟ: ಖತರ್ನಾಕ್ ಕಳ್ಳನ ಬಂಧನ
ಅದರಂತೆ ಜುಲೈ 20ರ ಸಂಜೆ ಆ ಮಳಿಗೆಗೆ ಹೋದ ಅಬ್ದುಲ್, ಗ್ರಾಹಕನ ಸೋಗಿನಲ್ಲಿ ಎಲ್ಲೆಡೆ ಸುತ್ತಾಡಿ ಕೊನೆಗೆ ಮಹಿಳೆಯ ಶೌಚಗೃಹದಲ್ಲಿ ಅವಿತುಕೊಂಡಿದ್ದ. ಎಂದಿನಂತೆ ರಾತ್ರಿ 9ಕ್ಕೆ ವಹಿವಾಟು ಮುಗಿಸಿ ಅಂಗಡಿ ಬಾಗಿಲು ಬಂದ್ ಮಾಡಿ ಆ ಮಳಿಗೆ ಸಿಬ್ಬಂದಿ ತೆರಳಿದ್ದರು. ಇದಾದ ನಂತರ ರಾತ್ರಿ ಆ ಮಳಿಗೆಯಲ್ಲಿ ದುಬಾರಿ ಬೆಲೆಯ 6 ಮೊಬೈಲ್‌ಗಳನ್ನು ಕಳವು ಮಾಡಿದ ಅಬ್ದುಲ್, ಮರು ದಿನ ಬೆಳಗ್ಗೆ 7ಕ್ಕೆ ಅಂಗಡಿ ಬಾಗಿಲು ತೆರೆದು ಸ್ವಚ್ಛಗೊಳಿಸಲು ಸಿಬ್ಬಂದಿ ಬಂದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದ.
ಕೂಡಲೇ ಮಳಿಗೆಗೆ ವ್ಯವಸ್ಥಾಪಕರ ಗಮನಕ್ಕೆ ಅಪರಿಚಿತ ವ್ಯಕ್ತಿ ಓಡಿ ಹೋದ ಸಂಗತಿಯನ್ನು ಸ್ವಚ್ಛತಾ ಸಿಬ್ಬಂದಿ ತಂದಿದ್ದರು. ಆ ಸಿಸಿಟಿವಿ ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯ ಓಡಾಟ ಗೊತ್ತಾಯಿತು. ಬಳಿಕ ಮಳಿಗೆಗೆಯ ಜನರೇಟರ್ ಬಳಿ ಒಂದು ಮೊಬೈಲ್ ಪತ್ತೆಯಾಯಿತು. ಈ ಬಗ್ಗೆ ಆ ಅಂಗಡಿಯ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಆರೋಪಿಯನ್ನು ಜೆ.ಪಿ.ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
