ದರ್ಶನ್ ಜತೆ ಸೆಲ್ಫಿ ಕ್ಲಿಕ್ಕಿಸಿ ಕಿಡ್ನಾಪ್ ಆರೋಪಿಗಳ ಸಂಭ್ರಮ: ರೇಣುಕಾಸ್ವಾಮಿ ಕರೆತಂದಿದ್ದೆ ಈ ಮೂವರು!
ರೇಣುಕಾಸ್ವಾಮಿಯನ್ನು ಉಪಾಯ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ ಮೂವರು ಆರೋಪಿಗಳು ಬಳಿಕ ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್ ಜತೆಗೆ ಮೊಬೈಲ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.
ಬೆಂಗಳೂರು (ಜೂ.17): ರೇಣುಕಾಸ್ವಾಮಿಯನ್ನು ಉಪಾಯ ಮಾಡಿ ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದಿದ್ದ ಮೂವರು ಆರೋಪಿಗಳು ಬಳಿಕ ಪಟ್ಟಣಗೆರೆಯ ಶೆಡ್‌ನಲ್ಲಿ ನಟ ದರ್ಶನ್ ಜತೆಗೆ ಮೊಬೈಲ್ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು. ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಸೂಚನೆ ಮೇರೆಗೆ ಆರೋಪಿಗಳಾದ ಜಗದೀಶ್, ಅನುಕುಮಾರ್ ಹಾಗೂ ರವಿಶಂಕರ್, ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಚಿತ್ರದುರ್ಗದಿಂದ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದರು. ಈ ವೇಳೆ ಶೆಡ್‌ಗೆ ಆಗಮಿಸಿದ ದರ್ಶನ್ ಈ ಮೂವರಿಗೂ ಹಸ್ತಲಾಘವ ನೀಡಿದ್ದರು.
ದರ್ಶನ್ ಅಭಿಮಾನಿಗಳಾಗಿರುವ ಈ ಮೂವರು ಆರೋಪಿಗಳು ನೆಚ್ಚಿನ ನಟನ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ವೇಳೆ ನಟ ದರ್ಶನ್ ಮೂವರಿಗೂ ಊಟ ಮಾಡುವಂತೆ ಹಣ ನೀಡಿದ್ದರು. ಬಳಿಕ ಮೂವರು ಚಿತ್ರದುರ್ಗದತ್ತ ಪ್ರಯಾಣ ಬೆಳೆಸಿದ್ದರು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಘಟನೆ ಬೆಳಕಿಗೆ ಬಂದು ನಟ ದರ್ಶನ್ ಸೇರಿ ಹಲವರ ಬಂಧನವಾದ ಬಳಿಕ ಈ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದ ಬಳಿಕ ಮೂವರು ಚಿತ್ರದುರ್ಗದ ಡಿವೈಎಸ್ಪಿ ಎದುರು ಶರಣಾಗಿದ್ದರು. ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚಿತ್ರದುರ್ಗಕ್ಕೆ ತೆರಳಿ ಮೂವರನ್ನೂ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು.
Darshan Case: ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್ ಮಾತ್ರ ಇನ್ನೂ ನಾಪತ್ತೆ!
ದರ್ಶನ್‌ನ ಮತ್ತೊಬ್ಬ ಸಹಚರ ಸೆರೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ನ ಮತ್ತೊಬ್ಬ ಸಹಚರ ಧನರಾಜ್ ಅಲಿಯಾಸ್ ರಾಜ ಎಂಬಾತನನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟಣಗೆರೆಯ ಶೆಡ್‌ನಲ್ಲಿ ಅಂದು ರೇಣುಕಾಸ್ವಾಮಿ ಮೇಲೆ ನಡೆದ ಹಲ್ಲೆ ವೇಳೆ ಈ ಧನರಾಜ್ ಸಹ ದರ್ಶನ್ ಜತೆಗೆ ಇದ್ದ. ಈತನೂ ಸಹ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ. ರೇಣುಕಾಸ್ವಾಮಿ ಮೃತಪಟ್ಟ ಹಿನ್ನೆಲೆಯಲ್ಲಿ ಆತ ತಲೆಮರೆಸಿಕೊಂಡಿದ್ದ. ಈ ಧನರಾಜ್ ನಟ ದರ್ಶನ್‌ನ ಸಹಚರನಾಗಿದ್ದು, ಪವಿತ್ರಾ ಗೌಡ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ.