Darshan Case: ರೇಣುಕಾಸ್ವಾಮಿ ರಕ್ತಸಿಕ್ತ ಬಟ್ಟೆ ಪತ್ತೆ, ಮೊಬೈಲ್‌ ಮಾತ್ರ ಇನ್ನೂ ನಾಪತ್ತೆ!

ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ನಿಂದ ಹತ್ಯೆಯಾದ ವೇಳೆ ಚಿತ್ರದುರ್ಗದ ರೇಣುಕಾಸ್ವಾಮಿ ಧರಿಸಿದ್ದ ಬಟ್ಟೆಗಳನ್ನು ಘಟನೆ ನಡೆದ ಎಂಟು ದಿನಗಳ ನಂತರ ಕೊನೆಗೂ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

Darshan Case Renukaswamy blood clothes are found only the mobile phone is still missing gvd

ಬೆಂಗಳೂರು (ಜೂ.17): ನಟ ದರ್ಶನ್‌ ಮತ್ತು ಅವರ ಗ್ಯಾಂಗ್‌ನಿಂದ ಹತ್ಯೆಯಾದ ವೇಳೆ ಚಿತ್ರದುರ್ಗದ ರೇಣುಕಾಸ್ವಾಮಿ ಧರಿಸಿದ್ದ ಬಟ್ಟೆಗಳನ್ನು ಘಟನೆ ನಡೆದ ಎಂಟು ದಿನಗಳ ನಂತರ ಕೊನೆಗೂ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಂತ್ರಸ್ತನನ್ನು ಹೊಡೆದು ಸಾಯಿಸಿದ ಪಟ್ಟಣಗೆರೆಯ ಶೆಡ್‌ನಲ್ಲೇ ಬಟ್ಟೆಯನ್ನು ಹಂತಕರು ಬಚ್ಚಿಟ್ಟಿದ್ದರು. ಆದರೆ, ಮೃತದೇಹದ ಜೊತೆಗೇ ರಾಜಾಕಾಲುವೆಗೆ ಎಸೆದಿದ್ದಾರೆ ಎನ್ನಲಾದ ರೇಣುಕಾಸ್ವಾಮಿಯ ಮೊಬೈಲ್‌ ಮಾತ್ರ ಇನ್ನೂ ನಾಪತ್ತೆಯಾಗಿದೆ. ಪ್ರಕರಣದಲ್ಲಿ ಆತನ ಮೊಬೈಲ್‌ ಕೂಡ ಪ್ರಮುಖ ಸಾಕ್ಷ್ಯವಾಗಿದ್ದು, ಅದರ ಶೋಧಕ್ಕಾಗಿ ಪೊಲೀಸರು ಅಗ್ನಿಶಾಮಕ ಸಿಬ್ಬಂದಿಯ ಜೊತೆಗೆ ರಾಜಾಕಾಲುವೆಯನ್ನು ಜಾಲಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳಾದ ನಾಗರಾಜ್‌, ದೀಪಕ್‌, ನಂದೀಶ್‌ನನ್ನು ಭಾನುವಾರ ಮತ್ತೆ ಬೆಂಗಳೂರಿನ ಪಟ್ಟಣಗೆರೆಯ ಶೆಡ್‌ಗೆ ಕರೆತಂದಿದ್ದ ಪೊಲೀಸರು, ಆರೋಪಿಗಳು ಬಚ್ಚಿಟ್ಟಿದ್ದ ರೇಣುಕಾಸ್ವಾಮಿಯ ರಕ್ತಸಿಕ್ತ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಮೃಗೀಯವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದ ಆರೋಪಿಗಳು, ಬಳಿಕ ರೇಣುಕಾಸ್ವಾಮಿಯ ರಕ್ತಸಿಕ್ತ ಬಟ್ಟೆಗಳನ್ನು ಕಳಚಿ ಶೆಡ್‌ನಲ್ಲೇ ಬಚ್ಚಿಟ್ಟಿದ್ದರು. ಬಳಿಕ ಮೃತದೇಹಕ್ಕೆ ಬೇರೆ ಬಟ್ಟೆ ತೊಡಿಸಿ ಬಳಿಕ ಕಾರಿನಲ್ಲಿ ಮೃತದೇಹ ಹಾಕಿಕೊಂಡು ಶೆಡ್‌ನಿಂದ ನಿರ್ಗಮಿಸಿದ್ದರು. ರೇಣುಕಾಸ್ವಾಮಿಯ ಮೃತದೇಹಕ್ಕೆ ತೊಡಿಸಿದ್ದ ಬಟ್ಟೆಗಳು ಆರೋಪಿ ಪವನ್‌ಗೆ ಸೇರಿದ ಬಟ್ಟೆಗಳು ಎನ್ನಲಾಗಿದೆ.

ಕೊಲೆಯಾದ ರೇಣುಕಾಸ್ವಾಮಿಯ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆಗಳು ಆತನ ಬಟ್ಟೆಗಳಲ್ಲ ಎಂದು ಕುಟುಂಬದ ಸದಸ್ಯರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳನ್ನು ವಿಚಾರಣೆ ಮಾಡಿದಾಗ, ಕೊಲೆ ವೇಳೆ ರೇಣುಕಾಸ್ವಾಮಿ ಧರಿಸಿದ್ದ ಬಟ್ಟೆಗಳು ರಕ್ತಸಿಕ್ತವಾಗಿದ್ದವು. ಹೀಗಾಗಿ ಆ ಬಟ್ಟೆಗಳನ್ನು ಕಳಚಿ ಬೇರೆ ಬಟ್ಟೆಗಳನ್ನು ತೊಡಿಸಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು, ಮೂವರು ಆರೋಪಿಗಳನ್ನು ಶೆಡ್‌ಗೆ ಕರೆತಂದು ರೇಣುಕಾಸ್ವಾಮಿಯ ರಕ್ತಸಿಕ್ತ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ. ಇವುಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ.

ದರ್ಶನ್‌ ಗ್ಯಾಂಗ್‌ ಅಳಿಸಿದ್ದ ರಕ್ತದ ಕಲೆ ಪತ್ತೆಗೆ ಲೂಮಿನಾರ್‌ ಟೆಸ್ಟ್‌!

ಮೊಬೈಲ್‌ಗಾಗಿ ಹುಡುಕಾಟ: ಕೊಲೆಯಾದ ರೇಣುಕಾಸ್ವಾಮಿಯ ಮೊಬೈಲ್‌ ನಾಪತ್ತೆಯಾಗಿದ್ದು, ಪತ್ತೆಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಜೂ.8ರ ಸಂಜೆಯಿಂದ ರೇಣುಕಾಸ್ವಾಮಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಬರುತ್ತಿದೆ. ಆರೋಪಿಗಳು ಪಟ್ಟಣಗೆರೆಯ ಶೆಡ್‌ನಲ್ಲಿ ರೇಣುಕಾಸ್ವಾಮಿಯ ಕೊಲೆ ಬಳಿಕ ಆತನ ಮೊಬೈಲನ್ನೂ ಶವದ ಜೊತೆಗೆ ರಾಜಾಕಾಲುವೆಗೆ ಎಸೆದಿರುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪೊಲೀಸರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿ, ಶೋಧ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Latest Videos
Follow Us:
Download App:
  • android
  • ios