ಮೈಸೂರು ರಸ್ತೆಯ ಬಾಪೂಜಿ ನಗರದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬರುವಾಗ ತಡೆಯಲು ಮುಂದಾದ ಕರ್ತವ್ಯ ನಿರತ ಸಂಚಾರ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು (ಏ.17) : ಮೈಸೂರು ರಸ್ತೆಯ ಬಾಪೂಜಿ ನಗರದ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬರುವಾಗ ತಡೆಯಲು ಮುಂದಾದ ಕರ್ತವ್ಯ ನಿರತ ಸಂಚಾರ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರನೊಬ್ಬ ಪರಾರಿಯಾಗಿರುವ ಘಟನೆ ನಡೆದಿದೆ.

ಘಟನೆಯಲ್ಲಿ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆ(Batarayanpur Traffic Police Station)ಯ ಹೆಡ್‌ ಕಾನ್‌ಸ್ಟೇಬಲ್‌ ನ್ಯಾಮಗೌಡ(Nyamagowda Head constable) ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಸಂಬಂಧ ಪ್ರಕರಣ ದಾಖಲಿಸಿದ್ದು, ಸವಾರನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಮಕೂರಿನಲ್ಲಿ ಭೀಕರ ಅಪಘಾತ, ಬಸ್ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು: ಮಗು ಸೇರಿ 5 ಮಂದಿ ದುರಂತ ಅಂತ್ಯ

ಮೈಸೂರು ರಸ್ತೆ(Mysuru road)ಯ ಬಾಪೂಜಿ ನಗರ ಜಂಕ್ಷನ್‌(Bapuji nagar junction)ನಲ್ಲಿ ಹೆಡ್‌ಕಾನ್‌ಸ್ಟೇಬಲ್‌ ನ್ಯಾಮಗೌಡ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಸವಾರನೊಬ್ಬ ಹೆಲ್ಮೆಟ್‌ ಧರಿಸದೆ ಅಡ್ಡಾದಿಡ್ಡಿಯಾಗಿ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಬರುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ನ್ಯಾಮಗೌಡ ಕೈ ಅಡ್ಡಿ ಹಿಡಿದು ದ್ವಿಚಕ್ರ ವಾಹನ ನಿಲ್ಲಿಸುವಂತೆ ಸನ್ನೆ ಮಾಡಿದ್ದಾರೆ. ಆದರೆ, ಸವಾರ ಏಕಾಏಕಿ ನ್ಯಾಮಗೌಡರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ನ್ಯಾಮಗೌಡ ತಲೆಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಗಾಯಾಳು ನ್ಯಾಮಗೌಡರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೈಕ್‌ ಮರಕ್ಕೆ ಡಿಕ್ಕಿಯಾಗಿ ಸವಾರ ಸಾವು, ಹಿಂಬದಿ ಸವಾರ ಗಂಭೀರ

ಬೆಂಗಳೂರು : ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಯಲಹಂಕ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಿರಂಡನಹಳ್ಳಿ ನಿವಾಸಿ ಮಿಥುನ್‌ ರೆಡ್ಡಿ(28) ಮೃತ ಸವಾರ. ಋುಷಿಕ್‌ ರೆಡ್ಡಿ(25) ಗಾಯಗೊಂಡ ಹಿಂಬದಿ ಸವಾರ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಸ್ರೋ ಬಡಾವಣೆಯ ಹಾರೋಹಳ್ಳಿ ಕೆರೆ ಸಮೀಪದ ರಸ್ತೆಯಲ್ಲಿ ಭಾನುವಾರ ಮುಂಜಾನೆ 1.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಮೂಲದ ಮಿಥುನ್‌ ರೆಡ್ಡಿ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ತನ್ನ ಚಿಕ್ಕಪ್ಪನ ಮಗ ಋುಷಿಕ್‌ ರೆಡ್ಡಿಯನ್ನು ಹಂಬದಿ ಕೂರಿಸಿಕೊಂಡು ಹೀರಂಡನಹಳ್ಳಿ ಕಡೆಗೆ ಹೋಗುತ್ತಿದ್ದ. ಈ ವೇಳೆ ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸವಾರಿರಬ್ಬರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಗರ್ಭಿಣಿ ಮಹಿಳೆಗೆ ಆಟೋ ರಿಕ್ಷಾ ಡಿಕ್ಕಿ, ಅಮ್ಮನ ಜತೆಗೆ ಇನ್ನೂ ಜಗತ್ತೇ ನೋಡದ ಕಂದಮ್ಮ ಬಲಿ!

ಹೆಲ್ಮೆಟ್‌ ಧರಿಸದ ಸವಾರ ಮಿಥುನ್‌ ರೆಡ್ಡಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಂಬದಿ ಸವಾರ ಗಾಯಾಳು ಋುಷಿಕ್‌ ರೆಡ್ಡಿಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.