ಕಲಬುರಗಿ(ಸೆ.07): ರಾತ್ರೋ ರಾತ್ರಿ ದೇವಸ್ಥಾನದಲ್ಲಿಡಲಾಗಿದ್ದಂತಹ ಭಕ್ತರ ದೇಣಿಗೆ ಹಣದಿಂದ ತುಂಬಿದ್ದ ಹುಂಡಿಯನ್ನು ಕದ್ದೊಯ್ದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಪುಣ್ಯಕ್ಷೇತ್ರ ದಂಡಗುಂಡ ಬಸವಣ್ಣ ದೇವಸ್ಥಾನದಲ್ಲಿ ನಡೆದಿದ್ದು, ಕಳ್ಳರ ಕೈಚಳ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. 

ದಂಡಗುಂಡ ಬಸವಣ್ಣ ದೇವಸ್ಥಾನ ಹುಂಡಿ ಕಳವು ಶನಿವಾರ ನಸುಕಿನ ಜಾವ 1-18 ಕ್ಕೆ ದೇವಸ್ಥಾನಕ್ಕೆ ಕನ್ನ ಹಾಕಿದ ಇಬ್ಬರು ಖದೀಮರು ಹುಂಡಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಹುಂಡಿಯನ್ನು ದೇವಸ್ಥಾನದ ಹೊರ ಭಾಗದಲ್ಲಿ ಇಡಲಾಗಿತ್ತು. ಕಳ್ಳರು ಹುಂಡಿಯನ್ನು ದೇವಾಲಯ ಹಿಂಭಾಗದಲ್ಲಿ ತೆಗೆದುಕೊಂಡು ಹೋಗಿ ಒಡೆದು ಅದರಲ್ಲಿ ನಗ-ನಾಣ್ಯ ಕಳವು ಮಾಡಿಕೊಂಡು ಹೋಗಿದ್ದಾರೆ. 

ಆಳಂದ: ವಿದ್ಯುತ್‌ ಬೇಲಿಯ ತಂತಿ ತಗುಲಿ ಇಬ್ಬರು ರೈತರ ದುರ್ಮರಣ

ಹುಂಡಿಯಲ್ಲಿ ಸುಮಾರು ನಾಲ್ಕು ಲಕ್ಷ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಹುಂಡಿ ಕಳುವಾಗಿರುವ ವಿಷಯ ಗ್ರಾಮದಲ್ಲಿ ಹರಡಿದ್ದು, ಆತಂಕ ಸೃಷ್ಟಿಯಾಗಿದೆ. ಶನಿವಾರ ಸಾಯಂಕಾಲ ಏಳು ಗಂಟೆಯಿಂದ ಗರ್ಭ ಗುಡಿಯ ದರ್ಶನ ಬಂದ್‌ ಮಾಡಲಾಗಿದೆ. 

ಗೇಟ್‌ ಹೊರಭಾಗದಿಂದಲೇ ಭಕ್ತರು ದರ್ಶನ ಪಡೆಯುವಂತಾಯಿತು. ಸದ್ಯ ದೇವಸ್ಥಾನ ಟ್ರಸ್ಟ್‌ ಕಾರ್ಯದರ್ಶಿ ಬಸವರಾಜ ಚಿತ್ತಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪಿಎಸ್‌ಐ ಶ್ರೀಶೈಲ ಅಂಬಟ್ಟಿ, ಪೊಲೀಸ್‌ ಸಿಬ್ಬಂದಿ, ಶ್ವಾನದಳ ತಂಡ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.