ಭೋಪಾಲ್(ಮಾ.29): ಮಧ್ಯಪ್ರದೇಶದ ಅಲೀರಾಜ್‌ಪುರ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಅಮಾನವೀಯ ಘಟನೆಯೊಂದು ನಡೆದಿದೆ. ಹೌದು ಇಲ್ಲಿ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಗೆ ಧೈರ್ಯ ತುಂಬುವ ಬದಲು, ಆಕೆಯನ್ನು ಆರೋಪಿಯೊಂದಿಗೆ ಹಗ್ಗದಿಂದ ಕಟ್ಟಿ ಹಾಕಿ ಮೆರವಣಿಗೆ ಮಾಡಿಸಿದ್ದಾರೆ. ಸದ್ಯ ಪೊಲೀಸರು ಸಂತ್ರಸ್ತ ಬಾಲಕಿ ನೀಡಿದ ದೂರಿನ ಮೇರೆಗೆ ಎರಡು ಎಫ್‌ಐಆರ್‌ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಾಲಕಿ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.

ಅಲೀರಾಜ್‌ಪುರ ಜಿಲ್ಲೆಯ 16 ವರ್ಷದ ಬಾಲಕಿಯನ್ನು 21 ವರ್ಷದ ಯುವಕ ಭಾನುವಾರ ಅತ್ಯಾಚಾರಗೈದಿದ್ದ. ಈ ವಿಚಾರ ತಿಳಿಯುತ್ತಿದ್ದಂತೆಯೇ ಸಂತ್ರಸ್ತ ಬಾಲಕಿಯ ಕುಟುಂಬ ಸದಸ್ಯರು ಬಾಲಕಿ ಹಾಗೂ ಆರೋಪಿ ಇಬ್ಬರನ್ನೂ ಹಗ್ಗವೊಂದಕ್ಕೆ ಕಟ್ಟಿ ಊರಿಡೀ ಮೆರವಣಿಗೆ ಮಾಡಿಸಿದ್ದಾರೆ. ಸಾಲದೆಂಬಂತೆ ಇದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಪಪೊಲೀಸರು ಅತ್ಯಾಚಾರ ಆರೋಪಿ ಸೇರಿ ಒಟ್ಟು ಆರು ಮಂದಿಯನ್ನು ಬಂಧಿಸಿದ್ದಾರೆ.

ಇನ್ನು ಆರೋಪಿ ಹಾಗೂ ಅತ್ಯಾಚಾರ ಸಂತ್ರಸ್ತೆಯ ಮೆರವಣಿಗೆ ಮಾಡಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಈ ವೇಳೆ ಇಬ್ಬರಿಗೂ ಕೋಲಿನಿಂದ ಥಳಿಸಿದ್ದಾರೆ. ಅಲ್ಲದೇ 'ಭಾರತ್‌ ಮಾತಾ ಕೀ ಜೈ' ಎಂಬ ಘೋಷಣೆಯನ್ನೂ ಕೂಗಿದ್ದಾರೆ.

ಅಲೀರಾಜ್‌ಪುರ ಮುಖ್ಯ ಕಚೇರಿಯಿಂದ ಸುಮಾರು 22 ಕಿಲೋ ಮೀಟರ್‌ ದೂರವಿರುವ ಜೋಬಟ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಸಂತ್ರಸ್ತೆ ದೂರಿನ ಮೇರೆಗೆ ಪೊಲೀಸರು ಎರಡು ದೂರು ದಾಖಲಿಸಿಕೊಂಡಿದ್ದಾರೆ. ಮೊದಲನೇ ಕೇಸ್ ಅತ್ಯಾಚಾರ ಆರೋಪಿ ವಿರುದ್ಧ ದಾಖಲಿಸಿದ್ದರೆ, ಎರಡನೇ ಪ್ರಕರಣ ಸಂತ್ರಸ್ತ ಬಾಲಕಿಯ ಕುಟುಂಬಸ್ಥರ ವಿರುದ್ಧ ದಾಖಲಿಸಲಾಗಿದೆ. ಇನ್ನು ಬಂಧಿತ ಅತ್ಯಾಚಾರ ಆರೋಪಿ ಮದುವೆಯಾಗಿದ್ದು, ಆತನಿಗೆ ಇಬ್ಬರು ಮಕ್ಕಳಿಸಿದ್ದಾರೆ.