ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ: ಪತ್ನಿ ನಿಖಿತಾ ಸೇರಿದಂತೆ ಮೂವರ ಬಂಧನ
ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ ನಿಖಿತಾ ಸೇರಿ ಮೂವರನ್ನು ಬಂಧಿಸಲಾಗಿದೆ. ಅತ್ತೆ, ಮಾವ ಇಬ್ಬರನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ನ್ಯಾಯಾಲಯವು ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಅತುಲ್ ಪತ್ನಿ ನಿಖಿತಾಳನ್ನು ಹರಿಯಾಣದ ಗುರುಗ್ರಾಮದಲ್ಲಿ ಬಂಧಿಸಲಾಗಿದೆ. ಅತುಲ್ ಅತ್ತೆ ನಿಶಾ ಸಿಂಘಾನಿಯಾ, ಬಾಮೈದ ಅನುರಾಗ್ ಸಿಂಘಾನಿಯಾ ಇಬ್ಬರನ್ನು ಉತ್ತರ ಪ್ರದೇಶದ ಅಲಹಬಾದ್ ನಲ್ಲಿ ಬಂಧನ ಮಾಡಲಾಗಿದೆ. ಮೂವರನ್ನು ಬೆಂಗಳೂರಿಗೆ ಕರೆತಂದಿರುವ ಮಾರತಹಳ್ಳಿ ಪೊಲೀಸರು ಆರೋಪಿಗಳನ್ನು 29 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
3 ದಿನಗಳೊಳಗಾಗಿ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಸೂಚಿಸಿ ಬೆಂಗಳೂರು ಸಿಟಿ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದರು. ಈ ಸಮನ್ಸ್ ಬೆನ್ನಲ್ಲೇ
ಪತ್ನಿ ನಿಖಿತಾ ಹಾಗೂ ತಾಯಿ ನಿಶಾ, ಸಹೋದರ ಅನುರಾಗ್, ಚಿಕ್ಕಪ್ಪ ಸುಶೀಲ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.
ಆತ್ಮಹತ್ಯೆಗೂ ಮುನ್ನ ತನ್ನ ಸಾವಿಗೆ ಪತ್ನಿ ನಿಕಿತಾ ಹಾಗೂ ಅವರ ಪರಿವಾರದವರು ನೀಡುತ್ತಿದ್ದ ಕಿರುಕುಳವೇ ಕಾರಣ ಎಂದು ಅತುಲ್ ಸುಭಾಷ್ 24 ಪುಟಗಳ ಸುದೀರ್ಘ ಪತ್ರ ಬರೆದಿದ್ದರು. ಇದರ ಆಧಾರದಲ್ಲಿ ಅವರ ಸಹೋದರ ಬಿಕಾಸ್ ದೂರು ದಾಖಲಿಸಿದ್ದರು.
ಇದನ್ನೂ ಓದಿ: ಗಿಫ್ಟ್ ರೆಡಿ ಮಾಡಿ ಮಗುವಿಗೆ ತಲುಪಿಸಲು ಹೇಳಿದ್ದ! ದೇಶಾದ್ಯಂತ 'ಜಸ್ಟಿಸ್ ಫಾರ್ ಅತುಲ್' ಸದ್ದು!
ಜಡ್ಜ್ ನಕ್ಕಿದ್ದರು
ಅತುಲ್ ಮಾಸಿಕ ನಿರ್ವಹಣಾ ವೆಚ್ಚ ನೀಡಲು ಆಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಪತ್ನಿ ಉತ್ತರ ಪ್ರದೇಶದ ಕೋರ್ಟ್‌ನಲ್ಲಿಯೇ ವ್ಯಂಗ್ಯವಾಡಿದ್ದರು. ಇದಕ್ಕೆ ಜಡ್ಜ್ ಕೂಡ ನಕ್ಕಿದ್ದರು’ ಎಂದು ಟೆಕ್ಕಿಯ ಸಂಬಂಧಿ ಪವನ್ ಕುಮಾರ್ ಆರೋಪಿಸಿದ್ದಾರೆ.
ಅತುಲ್ ಸಾವಿನ ಬಗ್ಗೆ ಗುರುವಾರ ಪಿಟಿಐ ವಿಡಿಯೋಸ್ ಜತೆ ಮಾತನಾಡಿದ ಅವರು, ‘ಅತುಲ್ ಕಿರುಕಳಕ್ಕೆ ಒಳಗಾಗಿದ್ದರು. ಮತ್ತು ಹಣಕ್ಕಾಗಿ ಚಿತ್ರಹಿಂಸೆ ನೀಡಿದ್ದರು. ಪತ್ನಿ ಮತ್ತು ನ್ಯಾಯಾಧೀಶರು ಅವಮಾನಿಸಿದ್ದರು. ಸುಭಾಷ್ ಅವರ ಪತ್ನಿ ಮತ್ತು ಅವರ ಕುಟುಂಬದವರು ದಂಪತಿಯ 4 ವರ್ಷದ ಮಗನ ನಿರ್ವಹಣೆಯ ನೆಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದರು. ಅಲ್ಲದೇ ಹೆಂಡತಿಯು, ‘ಅತುಲ್‌ಗೆ ಹಣ ನೀಡಲು ಸಾಧ್ಯವಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು’ ಎಂದು ಕೋರ್ಟಲ್ಲೇ ಹೇಳಿದ್ದರು. ಇದಕ್ಕೆ ನ್ಯಾಯಾಧೀಶರು ನಕ್ಕಿದ್ದರು. ಇದು ಅತುಲ್‌ಗೆ ನಿಜವಾಗಿಯ ತುಂಬಾ ನೋವುಂಟು ಮಾಡಿತ್ತು’ ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ಯುಪಿ ಮೂಲದ ಟೆಕ್ಕಿ ಅತುಲ್ ಕೇಸ್‌ಗೆ ಟ್ವಿಸ್ಟ್; ತನಗೆ ಸಿಗಬೇಕಾದ ನ್ಯಾಯ ಬಾಕಿ ಇದೆ ಎಂದಿದ್ದೇಕೆ ಅತುಲ್?