ಬೆಂಗಳೂರಿನ ಸುಬ್ರಹ್ಮಣ್ಯಪುರ ಬಳಿಯ ಬಾರ್ ಒಂದರಲ್ಲಿ 'ಟಗರು ಪಲ್ಯ' ಖ್ಯಾತಿಯ ಸಹ ನಟ ನಿರಂಜನ್ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆದಿದೆ. ಬಾರ್‌ನಲ್ಲಿ ಗುರಾಯಿಸಿದ್ದೇ ಈ ಗಲಾಟೆಗೆ ಕಾರಣವೆನ್ನಲಾಗಿದ್ದು, ಈ ಸಂಬಂಧ ಮೂವರು ಆರೋಪಿಗಳಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರು (ಏ.7): ಬಾರ್‌ನಲ್ಲಿ ಗುರಾಯಿಸಿದ್ದ ಎಂದು ಕೋಪಗೊಂಡು ಚಲನಚಿತ್ರ ಸಹ ನಟನೊಬ್ಬನ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ಮೂವರು ಗೂಂಡಾವರ್ತನೆ ತೋರಿಸಿದ ಘಟನೆ ಸುಬ್ರಹ್ಮಣ್ಯಪುರ ಸಮೀಪ ನಡೆದಿದೆ.
ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿರುವ ಚಿತ್ರ ನಟ ನಿರಂಜನ್ ಹಲ್ಲೆಗೊಳಗಾಗಿದ್ದು, ಈ ಘಟನೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ರಾಜರಾಜೇಶ್ವರಿ ನಗರದ ನಿತಿನ್, ಪ್ರಜ್ವಲ್ ಹಾಗೂ ರಾಘವೇಂದ್ರ ಎಂಬುವರಿಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇತ್ತೀಚಿಗೆ ಮದ್ಯ ಸೇವನೆಗೆ ಬಾರ್‌ಗೆ ನಿರಂಜನ್ ಹೋಗಿದ್ದಾಗ ಈ ಘಟನೆ ನಡೆದಿದೆ.
‘ಬಡವ ರಾಸ್ಕಲ್’, ‘ಒಡೆಯ’ ಹಾಗೂ ‘ಟಗರು ಪಲ್ಯ’ ಸೇರಿದಂತೆ ಹಲವು ಚಲನಚಿತ್ರಗಳಲ್ಲಿ ಸಹನಟನಾಗಿ ನಿರಂಜನ್ ನಟಿಸಿದ್ದು, ಆರ್.ಆರ್.ನಗರ ಸಮೀಪ ಅವರು ನೆಲೆಸಿದ್ದಾರೆ.
ಮಾ.28 ರಂದು ನಟ ಹಾಗೂ ಸ್ನೇಹಿತ ಯಶಸ್ ಸೂರ್ಯ ಅವರನ್ನು ಭೇಟಿಯಾಗಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದೆ. ಆಗ ಮಾರ್ಗಮಧ್ಯೆ ಉತ್ತರಹಳ್ಳಿ ಮುಖ್ಯರಸ್ತೆ ಬಳಿ ಬಾಯಾರಿಕೆಯಾಗಿ ನೀರು ಬಾಟಲ್ ಖರೀದಿಸಲು ಬಾರ್ ಆ್ಯಂಡ್ ಕಿಚನ್‌ಗೆ ತೆರಳಿದೆ. ಆಗ ನನ್ನನ್ನು ಅಪರಿಚಿತ ವ್ಯಕ್ತಿ ತಳ್ಳಿದೆ. ಇದಕ್ಕೆ ನಾನು ಆಕ್ಷೇಪಿಸಿದೆ. ಇದಕ್ಕೆ ನನ್ನನ್ನು ನಿಂದಿಸಿದ. ನೀನು ಆರ್ಟಿಸ್ಟ್ ಆದರೆ ನನಗೇನು ಎಂದೆಲ್ಲ ಮಾತನಾಡಿದ. ಆಗ ನಾನು ಬಾರ್ ಮಾಲೀಕರ ಜತೆ ಮಾತನಾಡಿ ಒಳಗೆ ತೆರಳಿದೆ. ಅಷ್ಟರಲ್ಲಿ ಅಲ್ಲೇ ಕಾರಿನಲ್ಲಿ ಕುಳಿತಿದ್ದ ನಾಲ್ವರು ಬಂದು ಗಲಾಟೆ ಶುರು ಮಾಡಿದರು. ಅದರಲ್ಲಿ ಇಬ್ಬರು ನನಗೆ ಬಿಯರ್ ಬಾಟಲಿನಿಂದ ಹೊಡೆದರು. ನನಗೆ ಗಾಯವಾಯಿತು ಎಂದು ನಿರಂಜನ್ ಹೇಳಿದ್ದಾರೆ.
ಈ ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಗೆ ಅವರು ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಆಧರಿಸಿ ಮೂವರನ್ನು ಪತ್ತೆ ಹಚ್ಚಿ ವಿಚಾರಣೆಗೆ ನೋಟಿಸ್ ನೀಡಿದ್ದಾರೆ. ಮೊದಲು ಬಾರ್ ಒಳಗೆ ಗಲಾಟೆಯಾಗಿದೆ. ಮದ್ಯ ಸೇವನೆ ವೇಳೆ ಗುರಾಯಿಸಿದ ಕಾರಣಕ್ಕೆ ನಿರಂಜನ್ ಮೇಲೆ ಗಲಾಟೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


