ಚಿಕ್ಕಬಳ್ಳಾಪುರ: ಪ್ರೀತಿಸಿ ಮದುವೆಯಾದ ಮಹಿಳೆ ಅನುಮಾನಾಸ್ಪದ ಸಾವು, ಕೊಲೆ ಶಂಕೆ
* ಪೋಷಕರ ವಿರೋಧದ ನಡುವೆಯೇ ವರ್ಷದ ಹಿಂದೆ ಮದುವೆ ಆಗಿದ್ದ ಮೃತ ಮಹಿಳೆ
* ಪೋಷಕರಿಂದ ಪೊಲೀಸರಿಗೆ ದೂರ
* ಗಂಡ ಪೊಲೀಸ್ ವಶಕ್ಕೆ
ಚಿಕ್ಕಬಳ್ಳಾಪುರ(ಜೂ.05): ಜಿಲ್ಲಾ ಕೇಂದ್ರದಲ್ಲಿ ವರ್ಷದ ಹಿಂದೆ ಪ್ರೀತಿಸಿ ವಿವಾಹ ಆಗಿದ್ದ ಮಹಿಳೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದು ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮೃತಳನ್ನು ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದ ನಿವಾಸಿ ಅನುಷಾ ಎಂದು ಗುರುತಿಸಲಾಗಿದೆ. ವರ್ಷದ ಹಿಂದೆ ಈಕೆ ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜ್‌ನಲ್ಲಿ ಪದವಿ ವ್ಯಾಸಂಗ ಮಾಡುವ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ ಕರಿಗಾನಹಳ್ಳಿ ನಿವಾಸಿ ಕಲ್ಲು ಕ್ವಾರಿಯಲ್ಲಿ ಮ್ಯಾನೇಜರ್ ಅಭಿಲಾಷ್ ಎಂಬುವರೊಂದಿಗೆ ಪ್ರೇಮದ ಬಲೆಗೆ ಬಿದ್ದು ಪೋಷಕರ ವಿರೋಧದ ನಡುವೆಯೇ ವರ್ಷದ ಹಿಂದೆ ಮದುವೆ ಆಗಿದ್ದಳು.
ಅನಂತರಾಜು ಆತ್ಮಹತ್ಯೆ ಪ್ರಕರಣ: ಬ್ಯಾಡರಹಳ್ಳಿ ಪೊಲೀಸ್ ಠಾಣೆ ಬಳಿ ಆರೋಪಿ ರೇಖಾ ಆತ್ಮಹತ್ಯೆ ಯತ್ನ
ಇತ್ತೀಚೆಗೆ ಇಬ್ಬರು ಚಿಕ್ಕಬಳ್ಳಾಪುರದ 9ನೇ ವಾರ್ಡ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂದೆ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ಆದರೆ ಶನಿವಾರ ಬೆಳಗ್ಗೆ ಅನುಷಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದ್ದರೂ ಪೊಲೀಸರ ಭೇಟಿ ವೇಳೆ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಇರಲಿಲ್ಲ. ಜೊತೆಗೆ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿರುವ ಅನುಷಾ ಕಿವಿ ಸಹ ಕಟ್ ಆಗಿದ್ದು ಕಿವಿ ಇಲ್ಲದೇ ಇರುವುದು ಆಕೆಯ ಸಾವಿನ ಬಗ್ಗೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಗಂಡ ಪೊಲೀಸ್ ವಶಕ್ಕೆ:
ಸದ್ಯ ಆಕೆಯ ಗಂಡ ಅಭಿಲಾಷ್‌ನನ್ನು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅನುಷಾ ಪೋಷಕರ ಪ್ರಕಾರ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಲಾಗಿದೆಯೆಂದು ಆರೋಪಿಸಿದ್ದಾರೆ.