2015 ರಿಂದ ಜನಾರ್ಧನ ರೆಡ್ಡಿ ಜಾಮೀನಿನ ಮೇಲೆ ಹೊರಗಿದ್ದರೂ, ಅವರು ಕರ್ನಾಟಕದ ಬಳ್ಳಾರಿಗೆ ಹಾಗೂ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕಡಪಕ್ಕೆ ಭೇಟಿ ನೀಡದಂತೆ ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿದೆ. 

ಮಾಜಿ ಸಚಿವ ಜನಾರ್ಧನ ರೆಡ್ಡಿಗೆ (Janardhan Reddy) ಸುಪ್ರೀಂಕೋರ್ಟ್‌ (Supreme Court) ರಿಲೀಫ್‌ ನೀಡಿದೆ. ಮಾಜಿ ಸಚಿವರಿಗೆ ಬಳ್ಳಾರಿಗೆ (Bellary) ಹೋಗಲು ಸೋಮವಾರ ಅನುಮತಿ ನೀಡಿದೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಗಾಲಿ ಜನಾರ್ಧನ ರೆಡ್ಡಿ ಅವರು ತಮ್ಮ ಮಗಳನ್ನು ಭೇಟಿ ಮಾಡಲು ದೇಶದ ಉನ್ನತ ನ್ಯಾಯಾಲಯ (Top Court) ಅವಕಾಶ ನೀಡಿದೆ. ನವೆಂಬರ್ 6 ರವರೆಗೆ ಬಳ್ಳಾರಿ ಜಿಲ್ಲೆಯಲ್ಲಿರಲು ಇಂದು ಒಪ್ಪಿಗೆ ಸೂಚಿಸಿದೆ. 

ಇನ್ನೊಂದೆಡೆ,ಆಂಧ್ರದ ನಾಂಪಲ್ಲಿ ಕೋಟ್೯ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು 6 ತಿಂಗಳ ಒಳಗೆ ಮುಗಿಸಲು ಸಹ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ಸೂಚನೆ ನೀಡಿದೆ. ನವೆಂಬರ್ 9, 2022 ರಿಂದ ಪ್ರತಿನಿತ್ಯ ವಿಚಾರಣೆ ನಡೆಸಿ ಅಂದಿನಿಂದ 6 ತಿಂಗಳೊಳಗೆ ವಿಚಾರಣೆಯನ್ನು ಪೂರ್ಣಗೊಳಿಸಿ ಎಂದು ಆಂಧ್ರ ಪ್ರದೇಶದ ನಾಂಪಲ್ಲಿ ವಿಶೇಷ ಕೋರ್ಟ್‌ ಆದೇಶ ನೀಡಿದೆ. ನ್ಯಾಯಮೂರ್ತಿ .ಎಂ. ಆರ್. ಶಾ ಹಾಗೂ ನ್ಯಯಮೂರ್ತಿ.ಕೃಷ್ಣಾ ಮುರಾರಿ ಸೇರಿ ಸುಪ್ರೀಂಕೋರ್ಟ್‌ ದ್ವಿ ಸದಸ್ಯ ಪೀಠ ಈ ಆದೇಶ ನೀಡಿದೆ.

ಇದನ್ನು ಓದಿ: ನಾನು ಬಳ್ಳಾರಿಯಲ್ಲಿರಲು ಸುಪ್ರೀಂಕೋರ್ಟ್‌ ಒಪ್ಪಿದೆ: ಜನಾರ್ದನ ರೆಡ್ಡಿ

ಅಲ್ಲದೆ, ಈ ಪ್ರಕರಣದ ವಿಚಾರಣೆ ಆರಂಭವಾದ ನಂತರ ಹಾಗೂ ವಿಚಾರಣೆ ಮುಗಿಯುವ ತನಕ ಬಳ್ಳಾರಿ, ಅನಂತಪುರ ಹೋಗುವಂತಿಲ್ಲ ಎಂದೂ ಮಾಜಿ ಸಚಿವ ಜನಾರ್ಧನ ರೆಡ್ಡಿಗೆ ಸೂಚನೆ ನೀಡಿದ್ದಾರೆ. ಹಾಗೂ, ವಿಚಾರಣೆಯನ್ನು ವಿಳಂಬಗೊಳಿಸಲು ಜನಾರ್ಧನ ರೆಡ್ಡಿ ಯಾವುದೇ ಯತ್ನ ನಡೆಸುವಂತಿಲ್ಲ ಎಂದೂ ದೇಶದ ಉನ್ನತ ನ್ಯಾಯಾಲಯ ಎಚ್ಚರಿಕೆ ನೀಡಿದೆ. 

ಬಹುಕೋಟಿ ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಗಾಲಿ ಜನಾರ್ಧನ ರೆಡ್ಡಿ ಜೈಲು ಶಿಕ್ಷೆ ಅನುಭವಿಸಿದ್ದು, ಬಳಿಕ 2015 ರಿಂದ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಜಾಮೀನು ನೀಡಿದ್ದರೂ, ಅವರು ಕರ್ನಾಟಕದ ಬಳ್ಳಾರಿಗೆ ಹಾಗೂ ಆಂಧ್ರ ಪ್ರದೇಶದ ಅನಂತಪುರ ಹಾಗೂ ಕಡಪಕ್ಕೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿದೆ. ತನ್ನ ಮಗಳು ಹೆಣ್ಣು ಮಗುವಿಗೆ ಜನ್ಮ ನೀಡಿರುವ ಹಿನ್ನೆಲೆ ಬಳ್ಳಾರಿಗೆ ಭೇಟಿ ನೀಡಲು ಅನುಮತಿ ನೀಡಬೇಕೆಂದು ಜನಾರ್ಧನ ರೆಡ್ಡಿ ಮನವಿ ಮಾಡಿಕೊಂಡಿದ್ದರು. 

ಜನಾರ್ಧನ ರೆಡ್ಡಿ ಹಾಗೂ ಓಬಳಾಪುರಂ ಮೈನಿಂಗ್ ಕಂಪನಿ (ಓಎಂಸಿ) ಯ ಎಂಡಿ ಹಾಗೂ ಅವರ ಸಂಬಂಧಿ ಬಿ.ವಿ. ಶ್ರೀನಿವಾಸ ರೆಡ್ಡಿ ಅವರನ್ನು ಸೆಪ್ಟೆಂಬರ್ 5, 2011 ರಂದು ಸಿಬಿಐ ಬಳ್ಳಾರಿಯಲ್ಲಿ ಬಂಧಿಸಿತ್ತು ಹಾಗೂ ಅವರನ್ನು ಹೈದರಾಬಾದ್‌ಗೆ ಕರೆದೊಯ್ಯಲಾಗಿತ್ತು. ಈ ಗಣಿಗಾರಿಕೆ ಕಂಪನಿ ಮೈನಿಂಗ್‌ ಲೀಸ್‌ ಗಡಿ ಮಾರ್ಕಿಂಗ್‌ಗಳನ್ನು ಬದಲಾಯಿಸಿದೆ ಎಂಬ ಆರೋಪವಿದೆ. ಕರ್ನಾಟಕದ ಬಳ್ಳಾರಿ ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯನ್ನು ಆವರಿಸಿರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಅವ್ಯವಹಾಋ ಮಾಡಿದೆ ಹಾಗೂ ಗಡಿಗಳನ್ನು ದಾಟಿ ಗಣಿಗಾರಿಕೆ ಮಾಡಿದೆ ಎಂಬ ಆರೋಪ ಓಬಳಾಪುರಂ ಮೈನಿಂಗ್ ಕಂಪನಿಯ ಮೇಲಿದೆ. 

ಇದನ್ನೂ ಓದಿ: ಬಳ್ಳಾರಿಯಲ್ಲಿ ಮತ್ತೆ ಗಣಿಗಾರಿಕೆಗೆ ಅವಕಾಶ ನೀಡಿದ ಸುಪ್ರೀಂ ಕೋರ್ಟ್‌; ಹಿರೇಮಠ್‌ಗೆ ಹಿನ್ನಡೆ

ಇನ್ನು, ಜಾಮೀನು ನೀಡುವಾಗ ಸಾಕಷ್ಟು ಷರತ್ತುಗಳನ್ನು ವಿಧಿಸಿದ್ದ ನ್ಯಾಯಾಲಯ, ಅವರು ವಿಚಾರಣೆ ನಡೆಯುತ್ತಿರುವ ಅಧೀನ ನ್ಯಾಯಾಲಯದಲ್ಲಿ ಪಾಸ್‌ಪೋರ್ಟ್‌ ಅನ್ನು ನೀಡಬೇಕೆಂದು ದೇಶದ ಉನ್ನತ ನ್ಯಾಯಾಲಯ ಸೂಚನೆ ನೀಡಿತ್ತು. ಹಾಗೂ, ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದ ಅನುಮತಿ ಇಲ್ಲದೆ ದೇಶ ಬಿಟ್ಟು ಹೊರ ಹೋಗುವಂತಿಲ್ಲ ಎಂದೂ ಸುಪ್ರೀಂಕೋರ್ಟ್‌ ಸೂಚಿಸಿದೆ.