* ತಿಹಾರ್‌ ಜೈಲಧಿಕಾರಿಗಳಿಗೆ ಸುಕೇಶ್‌ 1 ಕೋಟಿ ಲಂಚ!* ಬೇಕಾದವರನ್ನು, ಬೇಕಾದಷ್ಟುಹೊತ್ತು ಭೇಟಿಗೆ ಹಣ*  ಪ್ರತಿ ತಿಂಗಳು ಲಂಚವಿತ್ತ ವಂಚಕ: ಇ.ಡಿ. ಮೂಲಗಳು* ಜೈಲಲ್ಲೇ ‘ಕಚೇರಿ’ ತೆರೆಯಲು ಸುಕೇಶ್‌ಗೆ ಸಿಬ್ಬಂದಿ ಅನುಮತಿ* ಕಾರಾಗೃಹದಲ್ಲೇ ಚಿಕನ್‌ ಪಾರ್ಟಿಗಳನ್ನು ಆಯೋಜಿಸಿದ್ದ ವಂಚಕ

ನವದೆಹಲಿ (ಡಿ. 18) ಬಾಲಿವುಡ್‌ ನಟಿಯರಾದ ಜಾಕ್ವೆಲಿನ್‌ ಫರ್ನಾಂಡಿಸ್‌ (Jacqueline Fernandez)ಹಾಗೂ ನೋರಾ ಫತೇಹಿ(Nora) ಅವರಿಗೆ ಕೋಟ್ಯಂತರ ರು. ಮೌಲ್ಯದ ಉಡುಗೊರೆ ನೀಡಿ ಸುದ್ದಿಯಾಗಿರುವ ಬೆಂಗಳೂರು ಮೂಲದ ಬಹುಕೋಟಿ ವಂಚಕ ಸುಕೇಶ್‌ ಚಂದ್ರಶೇಖರ್‌ (Sukesh Chandrashekhar)ವಂಚನೆಯು ಬಗೆದಷ್ಟೂಆಳಕ್ಕೆ ಹೋಗುತ್ತಿದೆ. ತಿಹಾರ್‌ ಜೈಲಿನಲ್ಲಿದ್ದಾಗ (Tihar Jail )ಅಲ್ಲಿನ ಸಿಬ್ಬಂದಿಗೆ ಸುಕೇಶ್‌ ಪ್ರತೀ ತಿಂಗಳು ಲಂಚವಾಗಿ (Bribe) 1 ಕೋಟಿ ರು. ನೀಡುತ್ತಿದ್ದ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು ಸೇರಿದಂತೆ ರಾಜಕೀಯ ಗಣ್ಯರ ಹೆಸರು ಹೇಳಿಕೊಂಡು ವಂಚಿಸುವುದು ಸುಕೇಶ್‌ ಕಲೆ. ಇಂಥ ಕೃತ್ಯ ಹಾಗೂ 200 ಕೋಟಿ ರು. ಅಕ್ರಮ ಹಣ ವ್ಯವಹಾರ ಸೇರಿದಂತೆ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ಸುಕೇಶ್‌, ಹಲವು ಐಷಾರಾಮಿ ಸವಲತ್ತು ಪಡೆಯಲು ಹಾಗೂ ಬೇಕಾದ ‘ಮಹಿಳಾ ಅತಿಥಿ’ಗಳನ್ನು ಭೇಟಿಯಾಗಲು ತಿಹಾರ ಜೈಲಿನ ಸಿಬ್ಬಂದಿಗೆ ಪ್ರತೀ ತಿಂಗಳು 1 ಕೋಟಿ ರು. ಲಂಚವಾಗಿ ನೀಡುತ್ತಿದ್ದ ಎಂದು ಜಾರಿ ನಿರ್ದೇಶನಾಲಯ (ED) ಮೂಲಗಳು ಹೇಳಿವೆ.

ವಂಚಕ ಸುಕೇಶ್ ಬಾಲಿವುಡ್ ನಟಿಯರ ಗೆಳೆತನ ಬೆಳೆಸಿಕೊಂಡಿದ್ದೇ ರೋಚಕ

‘ಜೈಲಿನಲ್ಲಿದ್ದಾಗ ತಾನು ಯಾರನ್ನು ಬೇಕಾದರೂ ಎಷ್ಟೊತ್ತು ಬೇಕಾದರೂ ಭೇಟಿಯಾಗಲು ಅವಕಾಶ ಪಡೆಯಲು ಜೈಲಿನ ಸಿಬ್ಬಂದಿಗೆ ಸುಕೇಶ್‌ ಲಂಚ ನೀಡಿದ್ದ. ಈ ಪ್ರಕಾರ ಸಿಬ್ಬಂದಿಗಳು ಜೈಲಿನಲ್ಲಿ ಸುಕೇಶ್‌ಗೆ ‘ಕಚೇರಿ’ ತೆಗೆಯಲು ಅವಕಾಶ ಕೊಟ್ಟಿದ್ದರು. ಈ ಕಚೇರಿಗೆ ಸುಕೇಶ್‌ ಪತ್ನಿ ಲೀನಾ ಮಾರಿಯಾ ಪಾಲ್‌ ಬೇಕೆಂದಾಗಲೆಲ್ಲಾ ಬಂದು ಹೋಗುತ್ತಿದ್ದರು. ಜತೆಗೆ ಸುಕೇಶ್‌ ಹಲವು ಚಿಕನ್‌ ಪಾರ್ಟಿಗಳನ್ನು ಏರ್ಪಡಿಸಿದ್ದು, ಈ ಪಾರ್ಟಿಗಳಿಗೆ ಜಾಕ್ವೆಲಿನ್‌ ಫರ್ನಾಂಡಿಸ್‌, ನೋರಾ ಅಷ್ಟೇ ಅಲ್ಲದೆ ಸುಮಾರು 10 ಬಾಲಿವುಡ್‌ ನಟಿಯರು ಮತ್ತು ಮಾಡೆಲ್‌ಗಳು ಬಂದು ಹೋಗಿದ್ದಾರೆ’ ಎಂದು ಅವು ಹೇಳಿವೆ.

ಸುಕೇಶ್‌ನ ಕಚೇರಿಯಲ್ಲಿ ಟೀವಿ, ರೆಫ್ರಿಜರೇಟರ್‌, ಸೋಫಾ, ಮಿನರಲ್‌ ನೀರಿನ ಬಾಟಲ್‌ಗಳು ಸೇರಿದಂತೆ ಇನ್ನಿತರ ಐಷಾರಾಮಿ ಸೌಲಭ್ಯಗಳಿದ್ದವು ಎಂದು ಸುಕೇಶ್‌ ಪತ್ನಿ ಹೇಳಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ:  ಸುಕೇಶ್‌ ಚಂದ್ರಶೇಖರ್‌, ಜೈಲಿನೊಳಗೆ ಕುಳಿತೇ 200 ಕೋಟಿ ರು.ಗೂ ಹೆಚ್ಚಿನ ಸುಲಿಗೆ ಮಾಡಿರುವ ಆಘಾತಕಾರಿ ವಿಷಯ ಬೆಳಕಿಗೆ ಬಂದಿತ್ತು. 

ದೆಹಲಿಯ ಉದ್ಯಮಿಯೊಬ್ಬರಿಗೆ 50 ಕೋಟಿ ರು. ವಂಚಿಸಿದ ಪ್ರಕರಣದ ಕುರಿತು ತನಿಖೆ ನಡೆಸಿದ ವೇಳೆ ಸುಕೇಶ್‌ನ ಬ್ರಹ್ಮಾಂಡ ಅವತಾರ ಪತ್ತೆಯಾಗಿತ್ತು. ಜೈಲಿನಲ್ಲಿ ಇದ್ದುಕೊಂಡೇ ದೆಹಲಿಯಲ್ಲಿ ಕಾರ್ಯಾಚರಣೆ ನಡೆಸಿದ್ದ.

ದೆಹಲಿಯ ದೊಡ್ಡ ಉದ್ಯಮ ಸಮೂಹವೊಂದರ ಮಾಲೀಕರನ್ನು ಸಂಪರ್ಕಿಸಿದ್ದ ಸುಕೇಶ್‌ನ ಇಬ್ಬರು ಸಹಚರರು, ‘ನಿಮ್ಮ ವಿರುದ್ಧ ಪ್ರಕರಣವೊಂದರಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಅದರಿಂದ ಬಚಾವ್‌ ಮಾಡಲು 50 ಕೋಟಿ ರು. ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಒಪ್ಪಿದ್ದ ಉದ್ಯಮಿ 50 ಕೋಟಿ ನೀಡಿದ್ದರು. ಬಳಿಕ ತಾವು ಮೋಸ ಹೋಗಿದ್ದು ಗೊತ್ತಾಗಿ ಉದ್ಯಮಿ ಕುಟುಂಬ ದೂರು ನೀಡಿತ್ತು.

ತನಿಖೆ ವೇಳೆ ಇದರ ಹಿಂದೆ ಸುಕೇಶ್‌ ಮತ್ತು ಜೈಲಿನ ಹೊರಗೆ ಆತನ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸಹಚರರಾದ ದೀಪಕ್‌ ರಾಮ್‌ದನಿ ಮತ್ತು ಪ್ರದೀಪ್‌ ರಾಮ್‌ದನಿ ಪಾತ್ರ ಕಂಡುಬಂದಿತ್ತು. ಅವರಿಬ್ಬರನ್ನೂ ಬಂಧಿಸಿ, ಪ್ರಕರಣವನ್ನು ಹೆಚ್ಚಿನ ತನಿಖೆಗೆ ಆರ್ಥಿಕ ಅಪರಾಧ ದಳಕ್ಕೆ ವಹಿಸಲಾಗಿತ್ತು. ಈ ವೇಳೆ ಸುಕೇಶ್‌ ಜೈಲಿನೊಳಗೆ ಇದ್ದುಕೊಂಡೇ ಕನಿಷ್ಠ 190-200 ಕೋಟಿ ರು. ಸುಲಿಗೆ ಮಾಡಿದ್ದ.

ಸುಕೇಶ್‌ ಸೂಚನೆ ಅನ್ವಯ ದೀಪಕ್‌ ಮತ್ತು ಪ್ರದೀಪ್‌, ಉದ್ಯಮಿಗಳು ಅಥವಾ ದೊಡ್ಡ ಕುಳಗಳಿಗೆ ಬಲೆ ಬೀಸುತ್ತಿದ್ದರು. ಪ್ರಕರಣವೊಂದರಲ್ಲಿ ಈಗಾಗಲೇ ನಿಮ್ಮ ವಿರುದ್ಧ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಅಥವಾ ಅರಂಭಿಸಲಿದ್ದಾರೆ ಎಂದು ಬೆದರಿಸುತ್ತಿದ್ದರು. ಜೊತೆಗೆ ತಮಗೆ ದೊಡ್ಡ ರಾಜಕಾರಣಿಗಳು, ಸಿಬಿಐ, ನ್ಯಾಯಾಧಿಶರ ಸಂಪರ್ಕ ಇದೆ. ಪ್ರಕರಣದಿಂದ ನಿಮ್ಮನ್ನು ಬಚಾವ್‌ ಮಾಡುವುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಡೀಲ್‌ ಕುದುರಿಸುತ್ತಿದ್ದರು. ಹಣ ಪಡೆದ ಬಳಿಕ ಸ್ವತಃ ತಾವೇ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತರಿಗೆ ಕರೆ ಮಾಡಿ ನಿಮ್ಮನ್ನು ಕೇಸಿಂದ ಮುಕ್ತ ಮಾಡಿರುವುದಾಗಿ ಸುಳ್ಳು ಹೇಳಿ ವಂಚಿಸುತ್ತಿದ್ದರು.

ಯಾರು ಈ ಸುಕೇಶ್‌? ಬೆಂಗಳೂರು ಮೂಲದ ವಿದ್ಯಾವಂತ ಯುವಕ. ಐಷಾರಾಮಿ ಜೀವನದ ಆಸೆಗೆ ಬಿದ್ದು ಹಲವು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ನೂರಾರು ಜನರಿಗೆ ನೂರಾರು ಕೋಟಿ ರು. ವಂಚಿಸಿದ ಆರೋಪ ಈತನ ಮೇಲಿದೆ. ಈ ಪೈಕಿ ಎಐಎಡಿಎಂಕೆ ಪಕ್ಷದ ಚಿಹ್ನೆ ವಿವಾದ ಚುನಾವಣಾ ಆಯೋಗದ ಮೆಟ್ಟಿಲು ಏರಿದ ಸಂದರ್ಭದಲ್ಲಿ, ಚಿಹ್ನೆಯನ್ನು ಶಶಿಕಲಾ ಬಣಕ್ಕೆ ಉಳಿಸಿಕೊಡಲು, ಶಶಿಕಲಾ ಆಪ್ತ ದಿನಕರನ್‌ ಜೊತೆ 50 ಕೋಟಿ ರು. ಡೀಲ್‌ ಕುದುರಿಸಿದ್ದ. ಈ ಪ್ರಕರಣ ಬೆಳಕಿಗೆ ಬಂದು ಪೊಲೀಸರು ದೆಹಲಿಯಲ್ಲಿ ಆತ ಉಳಿದುಕೊಂಡಿದ್ದ ಹೋಟೆಲ್‌ ಮೇಲೆ ದಾಳಿ ನಡೆಸಿ ಬಂಧಿಸಿದ್ದರು. ಈ ವೇಳೆ 1.3 ಕೋಟಿ ರು. ನಗದು ಪತ್ತೆಯಾಗಿತ್ತು. ಇದಲ್ಲದೆ ಮತ್ತೊಂದು ಪ್ರಕರಣದಲ್ಲಿ ಸಿಬಿಐ ಅಧಿಕಾರಿಯ ಸೋಗಿನಲ್ಲಿ ಟಿಡಿಪಿ ಸಂಸದ ಸಾಂಬಶಿವ ರಾವ್‌ ಅವರಿಂದ 100 ಕೋಟಿ ರು. ಸುಲಿಗೆಗೆ ವಂಚಿಸಲು ಯತ್ನಿಸಿದ್ದ.