ಯಲ್ಲಾಪುರ(ಫೆ.27): ಶಾಲಾ ಚಟುವಟಿಕೆ ಸರಿಯಾಗಿ ಮಾಡುತ್ತಿಲ್ಲವೆಂದು ಮನೆಯಲ್ಲಿ ತಾಯಿ ಕೈಯಲ್ಲಿ ಬೈಸಿಕೊಳ್ಳಬೇಕು, ಹೊಡೆತ ತಿನ್ನಬೇಕು ಎಂದು ತಾಲೂಕಿನ ನಂದೊಳ್ಳಿಯ ವಿದ್ಯಾರ್ಥಿನಿ ಅಪಹರಣದ ನಾಟಕವಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸ್‌ ತನಿಖೆಯಿಂದ ಸತ್ಯ ಹೊರ ಬಿದ್ದಿದ್ದು, ಘಟನಾವಳಿಯನ್ನು ವಿದ್ಯಾರ್ಥಿನಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಶಾಲೆಯ ಶಿಕ್ಷಕರೊಬ್ಬರಲ್ಲಿ ತಾಯಿ ವಿದ್ಯಾರ್ಥಿನಿಯ ಶಾಲಾ ಚಟುವಟಿಕೆ ಬಗ್ಗೆ ವಿಚಾರಿಸಿದ್ದಾರೆ. ಆಗ ಅವಳು ಶಾಲೆ ಚಟುವಟಿಕೆಯಲ್ಲಿ ಸಮರ್ಪಕವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ. ಇದರಿಂದ ನಾನು ಮನೆಗೆ ಹೋದ ಮೇಲೆ ತಾಯಿ ಬೈಯ್ಯುವುದು ಖಚಿತ ಎಂದು ಊಹಿಸಿದ ವಿದ್ಯಾರ್ಥಿನಿ ಅಪಹರಣದ ಕಟ್ಟು ಕಥೆ ಕಟ್ಟಿದ್ದಾಳೆ.

ಸಂಜೆ ಶಾಲೆ ಬಿಟ್ಟ ನಂತರ ಬಸ್‌ ಮುಖಾಂತರ ಯಲ್ಲಾಪುರದಿಂದ ನಂದೊಳ್ಳಿಗೆ ಬಂದಿದ್ದಾಳೆ. ಆದರೆ ಮನೆಗೆ ತೆರಳದೇ ಮನೆಯ ಹತ್ತಿರದ ಕಾಡು ಪ್ರದೇಶಕ್ಕೆ ತೆರಳಿ ರಾತ್ರಿ ಸುಮಾರು ಹೊತ್ತಿನವರೆಗೆ ಅಲ್ಲಿಯೇ ಒಬ್ಬಳೇ ಕುಳಿತಿದ್ದಾಗಿ ತಿಳಿಸಿದ್ದಾಳೆ. ಕೊನೆಗೆ ಮನೆಗೆ ಹೋಗುವ ನೆನಪಾಗಿ ರಾತ್ರಿ ಸುಮಾರು ಒಂದು ಗಂಟೆಗೆ ಅಪಹರಣಗೊಂಡ ರೀತಿಯಲ್ಲಿ ಸನ್ನಿವೇಶ ಸೃಷ್ಟಿ ಮಾಡಲು ನನ್ನಷ್ಟಕ್ಕೆ ನಾನೇ ನಾನು ಧರಿಸಿದ್ದ ಲೆಗ್ಗಿಂಗ್ಸ್‌ ಪ್ಯಾಂಟ್‌ ತುದಿಗಳನ್ನು ಒಂದಕ್ಕೊಂದು ಸೇರಿಸಿಕೊಂಡು ಕಾಲು ಕಟ್ಟಿಕೊಂಡಿರುತ್ತೇನೆ ನಂತರ ನನ್ನ ವೇಲ್‌ನಿಂದ ಬಾಯಿಗೆ ಮತ್ತು ಕೈಕಟ್ಟಿಕೊಂಡಿರುತ್ತೇನೆ ಎಂದಿದ್ದಾಳೆ.

ಭಾರತೀಯ ನೌಕಾಪಡೆ ಅಧಿಕಾರಿಯ ಕಿಡ್ನಾಪ್, 10 ಲಕ್ಷ ರೂ ನೀಡದ ಕಾರಣ ಹತ್ಯೆ!

ನಂತರ ಆ ಸಮಯದಲ್ಲಿ ಯಾವುದೋ ಬೈಕ್‌ ನನ್ನ ಮನೆಗೆ ತೆರಳುವ ಸಪ್ಪಳ ಕೇಳಿ ಮಮ್ಮಿ ಮಮ್ಮಿ ಎಂದು ಕಿರುಚಿದೆ ಆನಂತರ ಕಿರುಚಿದ ಶಬ್ದ ಕೇಳಿ ಮನೆಯಿಂದ ನನ್ನ ಅಜ್ಜಿ ಹಾಗೂ ನನ್ನ ಸಂಬಂಧಿಕರು ಬಂದು ನಾನು ಕಟ್ಟಿಕೊಂಡಿದ್ದ ವೇಲನ್ನು ಬಿಚ್ಚಿ ನನ್ನನ್ನು ಮನೆಗೆ ಕರೆದುಕೊಂಡು ಹೋದರು ಎಂದು ಬಾಲಕಿ ಹೇಳಿಕೆ ನೀಡಿದ್ದಾಳೆ.

ಮನೆಗೆ ಹೋದ ನಂತರ ತಾಯಿಯ ಮುಂದೆ ಅಪಹರಣದ ನಾಟಕವಾಡಿ ಎರಡು ಬೈಕ್‌ಗಳಲ್ಲಿ ನನ್ನನ್ನು ಮೂರು ಜನರು ನನ್ನನ್ನು ಸಂಜೆ ಅಪಹರಿಸಿ ಪುನಃ ಈ ಸ್ಥಳದಲ್ಲಿಯೇ ತಂದು ಬಿಟ್ಟು ಹೋದರು ಮತ್ತು ಈ ವಿಷಯವನ್ನು ಮನೆಯವರಿಗೆ ಹೇಳಿದರೆ ನಿಮ್ಮ ಮನೆಯವರಿಗೆ ಸುಮ್ಮನೆ ಬಿಡುವುದಿಲ್ಲ ಅಂತಾ ಬೆದರಿಕೆ ಹಾಕಿದರು ಎಂದು ಬಾಲಕಿ ತಿಳಿಸಿದ್ದಾಳೆ. ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.