* ಪೋಷಕರ ಧರಣಿ* ನೋಟ್ ಬುಕ್ ತರದ್ದಕ್ಕೆ ವಿದ್ಯಾರ್ಥಿ ಮೇಲೆ ಶಿಕ್ಷಕ ಮಾರಣಾಂತಿಕ ಹಲ್ಲೆ* ವಿದ್ಯಾರ್ಥಿಯ ಕಿವಿ, ಕಣ್ಣಿಗೆ ತೀವ್ರ ಹಾನಿ
ಬೆಂಗಳೂರು(ಜು.05): ನೋಟ್ ಬುಕ್ ತಂದಿಲ್ಲ ಎಂಬ ಕಾರಣಕ್ಕೆ ನಗರದ ಖಾಸಗಿ ಶಾಲೆಯೊಂದರ ಶಿಕ್ಷಕ ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿರುವ ಅಮಾನವೀಯ ಘಟನೆ ನಡೆದಿದೆ. ಕಿವಿ ಮತ್ತು ಕಣ್ಣಿಗೆ ತೀವ್ರವಾಗಿ ಪೆಟ್ಟಾಗಿರುವ ವಿದ್ಯಾರ್ಥಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಗರದ ಮಾಗಡಿ ರಸ್ತೆಯ ಅನುಭವ ನಗರದಲ್ಲಿರುವ ಬ್ಲೂವೆಲ್ ಶಾಲೆಯಲ್ಲಿ ಘಟನೆ ನಡೆಸಿದ್ದು, ವಿದ್ಯಾರ್ಥಿ ತನ್ಮಯ್ ಮೇಲೆ ಶಿಕ್ಷಕ ಮಾದೇಶ್ ಹಲ್ಲೆ ನಡೆಸಿದ್ದಾನೆ. ಮಗನ ಮೇಲೆ ಶಿಕ್ಷಕ ನಡೆಸಿರುವ ಹಲ್ಲೆ ಖಂಡಿಸಿ ವಿದ್ಯಾರ್ಥಿಯ ಪೋಷಕರು ಶಾಲೆಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
Koppal News: ವಿದ್ಯಾರ್ಥಿಗೆ ಕಿವಿಯಲ್ಲಿ ರಕ್ತ ಬರುವಂತೆ ಹೊಡೆದ ಕೋಚಿಂಗ್ ಸೆಂಟರ್ ಶಿಕ್ಷಕ!
ಈ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ತಮ್ಮ ಮಗ ತನ್ಮಯ್ ತರಗತಿಗೆ ಬಂದಾಗ ಗಣಿತ ನೋಟ್ ಬುಕ್ ತಂದಿಲ್ಲ ಎಂದು ಶಿಕ್ಷಕ ಮಾದೇಶ್ ಮಗನ ಕೆನ್ನೆಗೆ ಬಲವಾಗಿ ಹೊಡೆದಿದ್ದಾರೆ. ಇದರಿಂದ ನಮ್ಮ ಮಗನ ಕಿವಿ, ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ರಕ್ತ ಹೆಪ್ಪುಗಟ್ಟಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದ ವಾಣಿ ವಿಲಾಸ ಮಕ್ಕಳ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪೋಷಕರು ದೂರಿದ್ದಾರೆ.
ಮಗನ ಮೇಲಿನ ಹಲ್ಲೆ ಕುರಿತು ಶಾಲೆಯ ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ಉಡಾಫೆಯ ಉತ್ತರ ನೀಡುತ್ತಾರೆ. ‘ನಮಗೆ ಪೊಲೀಸ್ ಬೆಂಬಲವಿದೆ ಏನಾದರೂ ಮಾಡಿಕೊಳ್ಳಿ’ ಎಂದು ಹೇಳುತ್ತಾರೆ. ಹಲ್ಲೆ ಮಾಡಿದ ಶಿಕ್ಷಕರ ಬಗ್ಗೆ ವಿಚಾರಿಸಿದರೆ ‘ಅವರಿಗೆ ಕೋವಿಡ್ ಬಂದಿದೆ ಶಾಲೆಗೆ ಬಂದಿಲ್ಲ’ ಎಂದು ಹೇಳುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಸಚಿವರು ಕೂಡಲೇ ಮಧ್ಯಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಮಕ್ಕಳ ಮೇಲೆ ಹಲ್ಲೆ ಮಾಡುವ ಇಂತಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಂತಹ ಶಿಕ್ಷಕರನ್ನು ರಕ್ಷಿಸುತ್ತಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಹಲ್ಲೆಗೊಳಗಾದ ವಿದ್ಯಾರ್ಥಿ ತಂದೆ ನರಸಿಂಹ ಪ್ರತಿಭಟನೆ ವೇಳೆ ಆಗ್ರಹಿಸಿದ್ದಾರೆ.
ಶಾಲೆಗೆ ಶೀಘ್ರ ನೋಟಿಸ್: ಶಿಕ್ಷಣ ಇಲಾಖೆ ಅಧಿಕಾರಿ
ಬ್ಲೂವೆಲ್ ಶಾಲೆಯ ವಿದ್ಯಾರ್ಥಿ ಮೇಲೆ ಶಿಕ್ಷಕರೊಬ್ಬರು ತೀವ್ರ ಪೆಟ್ಟಾಗುವಂತೆ ಹೊಡೆದಿರುವುದು ಗಮನಕ್ಕೆ ಬಂದಿದೆ, ಶೀಘ್ರ ಕಾರಣ ಕೇಳಿ ಶಾಲೆಗೆ ನೋಟಿಸ್ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಬೆಂಗಳೂರು ದಕ್ಷಿಣ ವಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೊ ವೈರಲ್: ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ..!
ಘಟನೆಯ ಮಾಹಿತಿ ಸಿಕ್ಕ ಕೂಡಲೇ ಶಾಲೆಗೆ ತೆರಳಿ ಹೇಳಿಕೆ ಪಡೆಯಲಾಗಿದೆ, ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ವಿವರಣೆ ಪಡೆದಿದ್ದೇವೆ. ಎರಡನ್ನೂ ಪರಿಶೀಲಿಸಲಾಗಿದ್ದು, ಶಾಲೆಗೆ ನೋಟಿಸ್ ನೀಡಲಾಗುವುದು. ಶಾಲೆಯವರು ನೀಡುವ ಉತ್ತರ ಆಧರಿಸಿ ಮುಂದಿನ ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಉದ್ದೇಶಪೂರ್ವಕ ಘಟನೆ ಅಲ್ಲ: ಆಡಳಿತ ಮಂಡಳಿ
ಈ ಮಧ್ಯೆ, ಶಾಲೆಯ ಆಡಳಿತ ಮಂಡಳಿಯ ಸದಸ್ಯರೊಬ್ಬರನ್ನು ಸಂಪರ್ಕಿಸಿದಾಗ, ‘ಅಚಾನಕ್ಕಾಗಿ ಮೊದಲ ಬಾರಿಗೆ ನಮ್ಮ ಶಾಲೆಯಲ್ಲಿ ಇಂತಹ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ, ಆ ಶಿಕ್ಷಕರ ನಾಲ್ಕು ವರ್ಷದಿಂದ ನಮ್ಮ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿ ಕೂಡ ಪೂರ್ವ ಪ್ರಾಥಮಿಕದಿಂದ ನಮ್ಮಲ್ಲೇ ಓದುತ್ತಿದ್ದಾರೆ. ಇಲಾಖೆಗೆ ಘಟನೆ ಬಗ್ಗೆ ಪೂರ್ಣ ವಿವರ ನೀಡಿದ್ದು, ಮುಂದಿನ ತನಿಖೆಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದು ಹೇಳಿದ್ದಾರೆ.
