ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ: ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳ ಪ್ರತಿಭಟನೆ
ಗಣಪತಿ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟವಾಗಿದ್ದು, ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳ ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.
ಮಂಡ್ಯ (ಸೆ.11): ಗಣಪತಿ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟವಾಗಿದ್ದು, ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳ ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ. ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಇಂದು ಅದ್ದೂರಿಯಾಗಿ ವಿಸರ್ಜನೆ ಮಾಡಲಾಗ್ತಿತ್ತು.
ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರಿಂದ ಗಣೇಶ ಮೂರ್ತಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ವಾಕ್ಸಮರ, ತಳ್ಳಾಟ ನೂಕಾಟ ನಡೆದಿದ್ದು, ಲಘುಲಾಠಿ ಪ್ರಹಾರದ ಮೂಲಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಸದ್ಯ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ನಿಲ್ಲಿಸಿ, ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದು, ಕಳೆದ ವರ್ಷವೂ ಇದೇ ದರ್ಗಾ ಮುಂಭಾಗ ಗಲಾಟೆ ನಡೆದಿದೆ. ಇನ್ನು ಮೆರವಣಿಗೆ ವೇಳೆ ದರ್ಗಾ ಮುಂಭಾಗ ತಮಟೆ, ಡೊಳ್ಳು ಬಾರಿಸದಂತೆ ಕಿರಿಕ್ ಮಾಡಲಾಗಿದ್ದು, ನಾಗಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಿಜೆಪಿ ಕುತಂತ್ರದಿಂದ ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಕಿಂಗ್‌ಪಿನ್: ಸಚಿವ ರಾಮಲಿಂಗಾರೆಡ್ಡಿ ಗರಂ
ನಾಗಮಂಗಲ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಲ್ಲು ಎಸೆಯುತ್ತಿರುವ ವಿಡಿಯೋ ಲಭ್ಯವಾಗಿದೆ. ಹಿಂದೂ ಯುವಕರ ಜೊತೆಗೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಲಾಠಿ ಬೀಸಿ ನಿಯಂತ್ರಣಕ್ಕೆ ತರಲು ಪೊಲೀಸರ ಹರಸಾಹಸ ನಡೆಸಿದ್ದಾರೆ. ಇನ್ನು ಕಲ್ಲು ತೂರಾಟಕ್ಕೆ ಓರ್ವ ಪೊಲೀಸ್ ಸಿಬ್ಬಂದಿಗೂ ಗಾಯವಾಗಿದ್ದು, ಇದೇ ವೇಳೆ ಕತ್ತಿ, ತಲ್ವಾರ್ ಅನ್ನು ಅನ್ಯಕೋಮಿನ ಯುವಕರಿಂದ ಜಳಪಿಸಿದ್ದು, ಕತ್ತಿ ತೋರಿಸಿ ಬೆದರಿಕೆ ಹಾಕುವ ಯತ್ನ ಕೂಡಾ ನಡೆದಿದೆ.