ಬೆಂಗಳೂರು(ಮೇ.23): ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಿಂದ ಜಿಗಿದು ಟೆಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉತ್ತಮ್‌ ಹೆಗಡೆ (30) ಆತ್ಮಹತ್ಯೆ ಮಾಡಿಕೊಂಡ ಸಾಫ್ಟ್‌ವೇರ್‌ ಉದ್ಯೋಗಿ. ಅವಿವಾಹಿತರಾಗಿರುವ ಉತ್ತಮ್‌ ಹೆಗಡೆ ಬೆನ್ನಿಗಾನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರಲ್ಲಿ ಪೋಷಕರೊಂದಿಗೆ ವಾಸವಿದ್ದು, ನಗರದ ಪ್ರತಿಷ್ಠಿತ ಖಾಸಗಿ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ರಾತ್ರಿ ಎಂದಿನಂತೆ ಪೋಷಕರೊಂದಿಗೆ ಬೆರೆತು ಊಟ ಮಾಡಿ ನಿದ್ರೆಗೆ ಜಾರಿದ್ದರು. 

ಬಿಲ್ಡಿಂಗ್‌ನಿಂದ ಹಾರಿ ಟೆಕ್ಕಿ ಉತ್ತಮ್ ಹೆಗಡೆ  ಆತ್ಮಹತ್ಯೆ, ಕಾರಣ ನಿಗೂಢ

ಗುರುವಾರ ನಸುಕಿನ ವೇಳೆ ಮೂರು ಗಂಟೆ ಸಮಯದಲ್ಲಿ ಅಪಾರ್ಟ್‌ಮೆಂಟ್‌ನ ಬಾಲ್ಕನಿಗೆ ಬಂದಿದ್ದ ಉತ್ತಮ್‌ ನಾಲ್ಕನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಉತ್ತಮ್‌ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಡೆತ್‌ನೋಟ್‌ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.