ಶೇಷಮೂರ್ತಿ ಅವಧಾನಿ

ಕಲಬುರಗಿ(ಡಿ.11): ಹಾವಿನ ಸ್ನೇಹ ಮಾಡಿ ಸುಟ್ಟು ಹೋದ ಮರದ ಕಥೆ ಗೊತ್ತು. ಆದರೆ ‘ಎರಡು ತಲೆ’ ಹಾವಿನ ಸ್ನೇಹ ಮಾಡಿ ಸಾವನ್ನಪ್ಪೋದು ಹೊಸತು! ಎರಡು ತಲೆ ಹಾವನ್ನು ಮಾರಿ ಲಕ್ಷಾಂತರ ರು. ಗಳಿಸುವ ಕನಸು ಕಂಡಿದ್ದ ಕೊಡಂಬಲ್‌ (ಬೀದರ್‌ ಜಿಲ್ಲೆ, ಚಿಟಗುಪ್ಪ ತಾಲೂಕು) ನಿವಾಸಿ, ದುಬೈ ರಿಟನ್ಡರ್‍ ಸಂಜೀವ ಸಾಸರವಗ್ಗೆ (30) ನಿಗೂಢ ಕೊಲೆಯನ್ನು ಕಲಬುರಗಿ ಪೊಲೀಸರು ಭೇದಿಸಿದ್ದು ಹಾವಿನ ಸ್ನೇಹವೇ ಕೊಲೆಗೆ ಕಾರಣವೆಂಬುದನ್ನು ಸಾಬೀತು ಪಡಿಸಿದ್ದಾರೆ.

ಎರಡು ತಲೆ ಹಾವಿನ ಸಂಗ (ಮಣ್ಣಮುಕ್ಕ ಹಾವು ಎಂದೇ ಸ್ಥಳೀಯ ಪ್ರಸಿದ್ಧಿ) ಮಾಡಿದ್ದ ಸಂಜೀವ ಬರ್ಬರವಾಗಿ ಕೊಲೆಯಾಗಿ ಹಳ್ಳ ಸೇರಿದ್ದ ಪ್ರಕರಣದಲ್ಲಿ ಹಂತಕರನ್ನ ಹೆಡಮುರಿ ಕಟ್ಟುವಲ್ಲಿ ಗ್ರಾಮೀಣ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನ.5ರಂದು ಶವ ಪತ್ತೆ:

ನ.5ರಂದು ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಹಳ್ಳದ ಸೇತುವೆ ಬಳಿ ಅಪರಿಚಿತ ಶವ ಪತ್ತೆಯಾಗುತ್ತದೆ. ನ.4ರಂದು ನಸುಕಿನಲ್ಲಿ ಕೊಲೆ ಮಾಡಿ ಬಿಸಾಕಿರಬಹುದೆಂದು ಪೊಲೀಸರು ಶಂಕಿಸುತ್ತಾರೆ. ಅದರಂತೆಯೇ ತನಿಖೆ ಜಾಡು ಹಿಡಿದು ಸಾಗಿದಾಗ ಶವ ಬೀದರ್‌ ಜಿಲ್ಲೆ, ಔರಾದ್‌ ತಾಲೂಕಿನ ಕೊಡಂಬಲ್‌ ಊರಿನ ಸಂಜೀವನದ್ದೆಂದು ಗೊತ್ತಾಗುತ್ತದೆ. ಕೊಲೆಯಾದ ಸಂಜೀವ ಕುಮಾರನ ತಾಯಿ, ಸೋದರಳಿಯನ ಜೊತೆ ಅದೇ ಊರಿನ ರಾಮಣ್ಣ ಎಂಬಾತನೂ ಬಂದು ಸಂಜೀವನ ಶವ ಗುರುತಿಸಿ ಊರಿಗೆ ಹೊತ್ತೊಯ್ದು ಸಂಸ್ಕಾರ ಮಾಡಿರುತ್ತಾರೆ.

ಚಿಕ್ಕಮಗಳೂರು; 40ರ ಆಂಟಿ ಮೇಲೆ‌ 28 ವರ್ಷದ ಯುವಕನಿಗೆ ಪ್ರೀತಿ, ಒಪ್ಪಿಲ್ಲ ಎಂದು ಬೆಂಕಿ ಇಟ್ಟ!

ಚುರುಕಾಯ್ತು ತನಿಖೆ:

ಈ ಘಟನೆ ತನಿಖೆ ಕೈಗೆತ್ತಿಕೊಂಡ ಕಲಬುರಗಿ ಗ್ರಾಮೀಣ ಸಿಪಿಐ ಶಂಕರಗೌಡ ಪಾಟೀಲ್‌ ನೇತೃತ್ವದ ಪೊಲೀಸ್‌ ತಂಡಕ್ಕೆ ಕೊಲೆಯಾದ ಸಂಜೀವ ಎರಡು ತಲೆ ಹಾವಿನ ವಿಚಾರವಾಗಿ ಮೊಬೈಲ್‌ನಲ್ಲಿ ಮಾತನಾಡುತ್ತ ಮನೆಯಿಂದ ಹೊರಗೆ ಹೋದವ ಶವವಾಗಿಯೇ ಪತ್ತೆಯಾಗಿರುವ ವಿಚಾರ ತನಿಖೆಯಲ್ಲಿ ಗೊತ್ತಾಗುತ್ತದೆ. ಇದೇ ಸುಳಿವಿನೊಂದಿಗೆ ಸಂಜೀವನ ಮೊಬೈಲ್‌ ಸಿಡಿಆರ್‌ ಮಾಹಿತಿ ಕಲೆ ಹಾಕಿದಾಗ ಹಾವಿನ ವಿಚಾರವಾಗಿ ಸಂಜೀವ ಹಲವರೊಂದಿಗೆ ಸಂಪರ್ಕದಲ್ಲಿರುವ ಸಂಗತಿ ಖಚಿತವಾಗುತ್ತದೆ.

ಸಂಗಾರೆಡ್ಡಿಯಲ್ಲಿ ಸಿಕ್ಕಿತ್ತು ಹಾವು:

ಸಂಗಾರೆಡ್ಡಿ ಬಳಿ ದೊರಕಿದ್ದ ಹಾವನ್ನ ಲಾರಿ ಚಾಲಕ ಶೀಮಂತ ಮುಸ್ತಾರಿ (ಚಿಟಗುಪ್ಪ)ಗೆ ಬಂದು ರಾಮಣ್ಣನಿಗೆ ಕೊಡುತ್ತಾನೆ. ರಾಮಣ್ಣ ತಕ್ಷಣ ಸಂಜೀವನೊಂದಿಗೆ ಸಂಪರ್ಕಿಸಿ ಲಕ್ಷಾಂತರ ಬೆಲೆಗೆ ಮಾರಲು ಮುಂದಾಗುತ್ತಾರೆ. ಹಾವು ರಾಮಣ್ಣನ ಮನೆಯಲ್ಲಿಟ್ಟಿರುತ್ತಾರೆ. ಈ ವಿಚಾರ ತಿಳಿದ ಶ್ರೀಮಂತ ಹಾವನ್ನು ರಾಮಣ್ಣನ ಮನೆಯಿಂದ ಹೊತ್ತೊಯ್ಯುತ್ತಾನೆ. ಈ ವಿಚಾರ ತಿಳಿಯದ ಸಂಜೀವ ರಾಮಣ್ಣನೊಂದಿಗೆ ಜಗಳಕ್ಕಿಳಿಯುತ್ತಾನೆ. ನ.4ರಂದು ಈ ಜಗಳ ನಡೆದು ವಿಕೋಪಕ್ಕೆ ಹೋದಾಗ ರಾಮಣ್ಣ ಹಾಗೂ ಆತನ ಮಗ ಬಲವಂತ ಮನೆಯಲ್ಲಿದ್ದ ಚಾಕು, ಮಚ್ಚಿನಿಂದ ಸಂಜೀವ ಕುಮಾರನ ಕತ್ತಿಗೆ ಇರಿದು ಕೊಲೆ ಮಾಡುತ್ತಾರೆ. ತಂದೆ - ಮಕ್ಕಳಿಬ್ಬರೂ ಸೇರಿಕೊಂಡು ಕೌದಿಯಲ್ಲಿ ಸಂಜೀವನ ಶವ ಕಟ್ಟಿಕೊಂಡು ಕಮಲಾಪುರ ವ್ಯಾಪ್ತಿಯ ಹಳ್ಳದಲ್ಲಿ ಬಿಸಾಕುತ್ತಾರೆ.

ಕೊಲೆಯಾದ ಸಂಜೀವನ ಮೊಬೈಲ್‌ ರಾಮಣ್ಣನ ಬಳಿ ಇತ್ತು. ಊರವರ ಮಾಹಿತಿ, ತನಿಖೆಯಿಂದಾಗಿ ರಾಮಣ್ಣನ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಎರಡು ತಲೆ ಹಾವಿನ ಕಳ್ಳ ದಂಧೆ ಸುಳಿವು ಈ ಪ್ರಕರಣ ನೀಡಿದೆ. ಇದು ವಿಷ ರಹಿತ ಹಾವು. ನಿಧಿ ಪೂಜೆಗೆ ಈ ಹಾವಿದ್ದರೆನೇ ಯಶಸ್ಸು ಎಂಬ ನಂಬಿಕೆಯೇ ಇಂತಹ ದಂಧೆಗೆ ಕಾರಣ. ಇದು ಮೂಢ ನಂಬಿಕೆ, ಜನ ಇಂತಹ ಕೆಟ್ಟಕೆಲಸಕ್ಕೆ ಮುಂದಾಗದೆ ಹಾವುಗಳನ್ನು ಬದುಕಲು ಬಿಡಬೇಕು ಎಂದು ಕಲಬುರಗಿ ಗ್ರಾಮೀಣ ಠಾಣೆಯ ಸಿಪಿಐ ಶಂಕರಗೌಡ ಪಾಟೀಲ್‌ ತಿಳಿಸಿದ್ದಾರೆ. 

ತನಿಖೆಯ ದಿಕ್ಕುತಪ್ಪಿಸಲು ಯತ್ನ!

ಹಂತಕ ರಾಮಣ್ಣ ತನಿಖೆಯ ದಿಕ್ಕು ತಪ್ಪಿಸಲು ತಾನೇ ಕೊಲೆಯಾದ ಸಂಜೀವನ ಬಂಧುಗಳ ಜೊತೆ ಓಡಾಡುತ್ತ ಪೊಲೀಸ್‌ ಠಾಣೆಗೂ ಹೋಗಿ ಬಂದಿರುತ್ತಾನೆ. ಸಂಜೀವನ ಕುಟುಂಬದ ಜೊತೆ ಸಂಪರ್ಕದಲ್ಲಿರುವ ತನ್ನ ಮೇಲೆ ಕೊಲೆಯ ಆರೋಪ ಬರಲು ಸಾಧ್ಯವೇ ಇಲ್ಲವೆಂಬ ಆತನ ಲೆಕ್ಕಾಚಾರ ಪೊಲೀಸ್‌ ತನಿಖೆ ಬುಡಮೇಲು ಮಾಡಿತು.