ಬೆಂಗಳೂರು (ಏ.02):  ತನ್ನ ಮೇಲೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರಿಗೆ ಸೇರಿದ್ದ ಅಪಾರ್ಟ್‌ಮೆಂಟ್‌ನಲ್ಲೇ ಅತ್ಯಾಚಾರ ನಡೆದಿದೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆನ್ನಲಾದ ಹಿನ್ನೆಲೆಯಲ್ಲಿ ಮಲ್ಲೇಶ್ವರ ಸಮೀಪದಲ್ಲಿರುವ ಆ ಫ್ಲ್ಯಾಟ್‌ ಹಾಗೂ ಯುವತಿ ವಾಸವಾಗಿದ್ದ ಪಿ.ಜಿ.ಯಲ್ಲಿ ಗುರುವಾರ ದಿನವಿಡೀ ವಿಶೇಷ ತನಿಖಾ ದಳ (ಎಸ್‌ಐಟಿ) ಮಹಜರು ಪ್ರಕ್ರಿಯೆ ನಡೆಸಿತು.

ಈ ಪರಿಶೀಲನೆ ವೇಳೆ ಅತ್ಯಾಚಾರ ನಡೆದಿದೆ ಎನ್ನಲಾದ ದಿನ ಯುವತಿ ಧರಿಸಿದ್ದ ಉಡುಪು, ಫ್ಲ್ಯಾಟ್‌ನಲ್ಲಿ ಕೆಲವು ಬಟ್ಟೆಗಳು ಸೇರಿದಂತೆ ಇತರೆ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅಲ್ಲದೆ, ಅಪಾರ್ಟ್‌ಮೆಂಟ್‌ ಕಾವಲುಗಾರ, ಫ್ಲ್ಯಾಟ್‌ ಕೆಲಸಗಾರ ಹಾಗೂ ಪಿಜಿ ಮಾಲೀಕರಿಂದ ಸಹ ಅಧಿಕಾರಿಗಳು ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಮೂರು ದಿನಗಳಿಂದ ಅತ್ಯಾಚಾರ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳಿಂದ ಯುವತಿಯ ಮ್ಯಾರಥಾನ್‌ ವಿಚಾರಣೆ ಗುರುವಾರ ಕೂಡಾ ಮುಂದುವರೆಯಿತು. ನೋಟಿಸ್‌ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾದ ಯುವತಿಯನ್ನು ಅಧಿಕಾರಿಗಳು ಕೃತ್ಯ ನಡೆದ ಸ್ಥಳದ ಮಹಜರ್‌ಗೆ ಕರೆದೊಯ್ದರು.

ಅದಕ್ಕೂ ಮೊದಲು ಆಕೆ ನೆಲೆಸಿದ್ದ ಆರ್‌.ಟಿ.ನಗರ ಹತ್ತಿರದ ಪಿಜಿ ಕೊಠಡಿಗೆ ಕರೆದುಕೊಂಡು ಹೋದ ತನಿಖಾ ತಂಡವು, ಅಲ್ಲಿ ಸತತ ಮೂರೂವರೆ ತಾಸು ಕೊಠಡಿ ತಪಾಸಣೆ ನಡೆಸಿತು. ಈ ವೇಳೆ ಅತ್ಯಾಚಾರ ನಡೆದಿದೆ ಎನ್ನಲಾದ ಸಂದರ್ಭದಲ್ಲಿ ಯುವತಿ ಧರಿಸಿದ್ದ ಉಡುಪುಗಳು ಸೇರಿದಂತೆ ಕೆಲವು ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿತು ಎನ್ನಲಾಗಿದೆ. ಆನಂತರ ಪಿ.ಜಿ. ಮಾಲಿಕನನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

ಸೀಡಿ ಲೇಡಿ - ಜಾರಕಿಹೊಳಿ ಏನೆಂದು ಕರೆಯುತ್ತಿದ್ದರು : ಏನೇನ್ ಉಡುಗೊರೆ ಕೊಟ್ಟಿದ್ದರು? .

ಮಾಜಿ ಮಂತ್ರಿಗೆ ಸೇರಿದ ಐಷಾರಾಮಿ ಫ್ಲ್ಯಾಟ್‌:  ಆರ್‌.ಟಿ.ನಗರದ ಯುವತಿ ನೆಲೆಸಿದ್ದ ಪಿ.ಜಿ. ಮಹಜರ್‌ ಪ್ರಕ್ರಿಯೆ ಮುಗಿಸಿದ ನಂತರ ಅಧಿಕಾರಿಗಳು ಅಲ್ಲಿಂದ ಅತ್ಯಾಚಾರ ಕೃತ್ಯ ನಡೆದಿದೆ ಎನ್ನಲಾಗಿರುವ ಮಲ್ಲೇಶ್ವರದ ಸಮೀಪದಲ್ಲಿರುವ ಮಾಜಿ ಮಂತ್ರಿಗೆ ಸೇರಿದ ಐಷಾರಾಮಿ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ಗೆ ಯುವತಿಯನ್ನು ಕರೆತಂದರು.

ಆ ಫ್ಲ್ಯಾಟ್‌ನಲ್ಲಿ ಸುಮಾರು ಐದು ತಾಸಿಗೂ ಹೆಚ್ಚಿನ ಹೊತ್ತು ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಫ್ಲ್ಯಾಟ್‌ನಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಎಷ್ಟುಬಾರಿ ಖಾಸಗಿ ಭೇಟಿಗಳು ನಡೆದಿವೆ? ಪ್ರತಿ ಬಾರಿ ಬಂದಾಗಲೂ ಯಾರ ಹೆಸರಿನಲ್ಲಿ ಅಪಾರ್ಟ್‌ಮೆಂಟ್‌ ಪ್ರವೇಶ ಪಡೆಯಲಾಗುತ್ತಿತ್ತು? ಆ ಫ್ಲ್ಯಾಟ್‌ನಲ್ಲಿ ಎಷ್ಟುಹೊತ್ತು ಇಬ್ಬರು ಉಳಿಯುತ್ತಿದ್ದಿರಿ? ಈ ಫ್ಲ್ಯಾಟ್‌ನ ವಿಳಾಸ ಕೊಟ್ಟವರು ಯಾರು? ಈ ಫ್ಲ್ಯಾಟ್‌ಗೆ ಬಂದಾಗ ಮಾಜಿ ಸಚಿವರು ಮಾತ್ರ ಇರುತ್ತಿದ್ದರಾ? ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿ ಯುವತಿಯಿಂದ ಅಧಿಕಾರಿಗಳು ವಿವರ ಪಡೆದಿದ್ದಾರೆ.

ಅದೇ ವೇಳೆ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆದಿದೆ ಎನ್ನಲಾದ ಸಮಯದಲ್ಲಿ ಯಾರು ಚಿತ್ರೀಕರಣ ಮಾಡಿದ್ದು? ಆ ಕ್ಯಾಮೆರಾವನ್ನು ಯಾರು ಬಳಸಿದ್ದು? ಅದನ್ನು ಎಲ್ಲಿ ಅಳವಡಿಸಲಾಗಿತ್ತು ಎಂದು ಸಹ ಯುವತಿಯನ್ನು ಎಸ್‌ಐಟಿ ಪ್ರಶ್ನಿಸಿದೆ. ಈಗ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಅಶ್ಲೀಲ ವಿಡಿಯೋದಲ್ಲಿ ದೃಶ್ಯದಲ್ಲಿ ಕಂಡುಬರುವ ಹಾಸಿಗೆ, ಮಂಚ ಹಾಗೂ ಹೊದಿಕೆಗಳು ಬದಲಾಗಿದೆಯೇ ಎಂದು ಸಹ ಅಧಿಕಾರಿಗಳು ಪರಿಶೀಲಿಸಿ ಮಹಜರ್‌ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಆ ಫ್ಲ್ಯಾಟ್‌ನ ಕೆಲಸಗಾರರು, ನೆರೆಹೊರೆಯವರು ಹಾಗೂ ಅಪಾರ್ಟ್‌ಮೆಂಟ್‌ ಭದ್ರತಾ ಸಿಬ್ಬಂದಿಯನ್ನು ಕೂಡಾ ಅಧಿಕಾರಿಗಳು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದಾರೆ. ಇದೇ ವೇಳೆ ಅಪಾರ್ಟ್‌ಮೆಂಟ್‌ ಪ್ರವೇಶ ದ್ವಾರದಲ್ಲಿ ಸಂದರ್ಶಕರ ಹೆಸರುಗಳನ್ನು ನೋಂದಾಯಿಸುವ ಪುಸಕ್ತವನ್ನು ವಶಕ್ಕೆ ಪಡೆದು ತನಿಖಾ ತಂಡ ಪರೀಕ್ಷಿಸಿದೆ.

ಮತ್ತೆ ವಿಚಾರಣೆಗೆ ಬುಲಾವ್‌: ಆದರೆ ಮಹಜರ್‌ ಸಂದರ್ಭದಲ್ಲಿ ಎಸ್‌ಐಟಿ ಅಧಿಕಾರಿಗಳ ಕೆಲ ಪ್ರಶ್ನೆಗಳಿಗೆ ಯುವತಿ ಸಮರ್ಪಕ ಉತ್ತರ ನೀಡದೆ ತಬ್ಬಿಬ್ಬಾಗಿದ್ದಾಳೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಶುಕ್ರವಾರ ವಿಚಾರಣೆ ನಡೆಯಲಿದೆ ಎಂದು ತಿಳಿದು ಬಂದಿದೆ.