Anekal rowdy threatens vendor:: ಆನೇಕಲ್‌ನಲ್ಲಿ ಪಾನಿಪುರಿ ಅಂಗಡಿಯವನು ಪಾನಿ ಕೊಡಲು ತಡ ಮಾಡಿದ್ದಕ್ಕೆ ಪುಡಿ ರೌಡಿಯೊಬ್ಬ ಅಂಗಡಿ ಧ್ವಂಸ ಮಾಡಿದ್ದಾನೆ. ನಂತರ, ಅಂಗಡಿ ಮಾಲೀಕ ದೂರು ನೀಡಿದ್ದಕ್ಕೆ ಆತನ ಮನೆಗೆ ನುಗ್ಗಿ ಡ್ರಾಗರ್‌ನಿಂದ ಕೊಲೆ ಬೆದರಿಕೆ ಹಾಕಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಆನೇಕಲ್ (ನ.18): ಪಾನಿಪುರಿ ಅಂಗಡಿಯವನು ಕುಡಿಯಲು ಪಾನಿ ಕೊಡಲಿಲ್ಲ ಎಂಬ ಕಾರಣಕ್ಕೆ ಪೆಟ್ಟಿ ಅಂಗಡಿಯನ್ನು ಧ್ವಂಸ ಮಾಡಿದ ಬಗ್ಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ ಪುಡಿ ರೌಡಿಯೊಬ್ಬ ದೂರು ನೀಡಿದವನ ಮನೆಗೆ ತೆರಳಿ ಡ್ರಾಗಾರ್ ನಿಂದ ಬೆದರಿಸಿ ಕೊಲೆ ಬೆದರಿಕೆವೊಡ್ಡಿದ ಘಟನೆ ಹೆಬ್ಬಗೋಡಿ ಠಾಣಾ ವ್ಯಾಪ್ತಿಯ 22 ನೇ ವಾರ್ಡ್‌ನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಜ್ವಲ್ ಆಲಿಯಾಸ್‌ ಕೊತ್ವಾಲ್ ಎಂಬ ಪುಡಿರೌಡಿ ಈ ಕೃತ್ಯ ಎಸಗಿದ್ದು ಡ್ರಾಗರ್ ಹಿಡಿದು ಕೊಲೆ ಬೆದರಿಕೆ ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪಾನಿಪೂರಿ ವಿಚಾರಕ್ಕೆ ಗಲಾಟೆ:

ಇದೇ ನ.4ರಂದು ಸಂಜೆ ಆರೋಪಿ ಇಲೆಕ್ಟ್ರಾನಿಕ್ ಸಿಟಿ ವೃತ್ತದ ಬಳಿ ಪಾನಿ ಪೂರಿ ತಿಂದು ಕುಡಿಯಲು ಪಾನಿ ಕೇಳಿದಾಗ, ಇನ್ನೂ ಕೆಲವರು ಗ್ರಾಹಕರಿದ್ದು ಸ್ವಲ್ಪ ತಡ ಮಾಡಿ ನೀಡುವೆನು ಎಂದಿದ್ದಕ್ಕೆ ಕೋಪಗೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿಯನ್ನು ಧ್ವಂಸಗೊಳಿಸಿ ಗಲಾಟೆ ಮಾಡಿದ್ದನು. ಈ ಬಗ್ಗೆ ಸ್ನೇಹಿತರ ಸಲಹೆ ಮೇರೆಗೆ ಪಾನಿಪುರಿ ಅಂಗಡಿ ಮಾಲೀಕ ಠಾಣೆಗೆ ದೂರು ಕೊಟ್ಟಿದ್ದ.

ನನ್ನ ಮೇಲೆ ದೂರು ಕೊಡುವಷ್ಟು ಕೊಬ್ಬ

ದೂರಿನಿಂದ ಕೆರಳಿದ ಆರೋಪಿ ಮಾಲೀಕನ ಮನೆಗೆ ತೆರಳಿ ನನ್ನ ಮೇಲೆ ದೂರು ಕೊಡುವಷ್ಟು ಕೊಬ್ಬಾ ನಿನಗೆ ಎಂದು ನಿಂದಿಸಿ ಡ್ರಾಗಾರ್ ತೋರಿಸಿ ನಿನ್ನನ್ನು ಬಿಡುವುದಿಲ್ಲ ಮತ್ತು ನಿನಗೆ ದೂರು ನೀಡಲು ಪ್ರೇರೇಪಿಸಿದವರನ್ನೂ ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು.