ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆಸ್ಪತ್ರೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿಯೇ ಈ ಕೃತ್ಯ ಎಸಗಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಲಬುರಗಿ (ಜುಲೈ.29): ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಹಾಡಹಗಲೇ ದರೋಡೆ, ಡ್ರಗ್ಸ್ ಮಾಫಿಯಾ, ಕೊಲೆ, ಹಲ್ಲೆ ಘಟನೆಗಳು ಮತ್ತು ಅಪ್ರಾಪ್ತರ ಮೇಲಿನ ಬಲಾತ್ಕಾರ ಪ್ರಕರಣಗಳು ಹೆಚ್ಚಳವಾಗುತ್ತಿರುವ ಬೆನ್ನಲ್ಲೇ, ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ನಡೆದಿದೆ.

ಕಲಬುರಗಿಯ ಇ.ಎಸ್.ಐ ಆಸ್ಪತ್ರೆಯಲ್ಲಿ ತೀವ್ರ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಒಂದು ವಾರದ ಹಿಂದೆ ಶಸ್ತ್ರಚಿಕಿತ್ಸೆಗೊಳಗಾದ ತಂದೆಯ ಆರೈಕೆಗಾಗಿ ಆಸ್ಪತ್ರೆಯಲ್ಲಿದ್ದ 17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.

ಬಾಲಕಿಯ ತಾಯಿ ವಿಕಲಚೇತನರಾಗಿರುವ ಕಾರಣ, ಆಕೆಯೇ ತಂದೆಯ ಆರೈಕೆಗಾಗಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದಳು. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಸಂಪತ್ ಕಿವಡೇಕರ್ ಎಂಬ ಆಸ್ಪತ್ರೆಯ ಸ್ವಚ್ಛತಾ ವಿಭಾಗದ ಸಿಬ್ಬಂದಿ, ಬಾಲಕಿಯನ್ನು ವೈದ್ಯಕೀಯ ಕಾಲೇಜಿನ ವಿಶ್ರಾಂತಿ ಕೊಠಡಿಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ. ಆರೋಪಿ ಸಂಪತ್ ಬಾಲಕಿಯ ಗ್ರಾಮದವನೇ ಆಗಿದ್ದಾನೆ ಎನ್ನಲಾಗಿದೆ.

ಈ ಘಟನೆಯ ಬಗ್ಗೆ ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಸಂಪತ್ ಕಿವಡೇಕರ್‌ನನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಘಟನೆ ಕಲಬುರಗಿಯಲ್ಲಿ ಕಾನೂನು ಸುವ್ಯವಸ್ಥೆ ವಿಫಲವಾಗಿರುವುದು ಮತ್ತೊಮ್ಮೆ ಬಯಲಾಗಿದೆ.