Shivamogga News: ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿ ಹಂತಕರು ಜುಲೈ 27 ವರೆಗೆ ಪೋಲಿಸ್ ಕಸ್ಡಡಿಗೆ
Rowdy Sheeter Handi Anni Murder: ಶಿವಮೊಗ್ಗದ ಕುಖ್ಯಾತ ರೌಡಿಶೀಟರ್ ಹಂದಿ ಅಣ್ಣಿ ಹತ್ಯೆ ಮಾಡಿದ ಹಂತಕರು ಪೊಲೀಸರಿಗೆ ರಾತ್ರೋರಾತ್ರಿ ಶರಣಾಗಿದ್ದರು. ಇದೀಗ ಆರೋಪಿಗಳನ್ನು ಒಂದು ವಾರಗಳ ಅವಧಿಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಶಿವಮೊಗ್ಗ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಶಿವಮೊಗ್ಗ: ಹಂದಿ ಅಣ್ಣಿಯನ್ನು ಹಾಡಹಗಲೇ ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದರು. ಇದೀಗ ಶಿವಮೊಗ್ಗ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಜುಲೈ 27ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಶಿವಮೊಗ್ಗ ಜಿಲ್ಲೆಯನ್ನು ನಡುಗಿಸಿದ್ದ ಹಂದಿ ಅಣ್ಣಿ ಹತ್ಯೆ ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಆದರೆ ಸೋಮವಾರ ಚಿಕ್ಕಮಗಳೂರು ಪೊಲೀಸರಿಗೆ ಶರಣಾಗಿದ್ದರು. ಮಧ್ಯರಾತ್ರಿಯೇ ಜಿಲ್ಲಾ ಪೊಲೀಸ್ ಕಚೇರಿಗೆ ಬಂದ 8 ಮಂದಿ ಆರೋಪಿಗಳು ಶರಣಾಗಿದ್ದರು. ಅರಸೀಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಆರೋಪಿಗಳ ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರ ಮಾಡಲಾಗಿತ್ತು.
ಜು.14, ಅಂದು ಬೆಳಗ್ಗೆ ಸುಮಾರು 11.30ರ ವೇಳೆಯಲ್ಲಿ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ರೌಡಿ ಹಂದಿ ಅಣ್ಣಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಹಂತಕರು ಕೂಡಲೇ ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಅವರ ಪತ್ತೆಗಾಗಿ ಜಿಲ್ಲಾ ಪೊಲೀಸ್ ಇಲಾಖೆ ತಂಡಗಳನ್ನು ರಚನೆ ಮಾಡಿ ಹಲವೆಡೆ ಹುಡುಕಾಟ ನಡೆಸುತ್ತಿತ್ತು.
5 ದಿನಗಳ ಬಳಿಕ ಆರೋಪಿಗಳಾದ ನಿತಿನ್, ಬಂಕ್ ಮನು, ಫಾರೂಕ್, ಚಂದನ್, ಆಂಜನೇಯ, ಕಾರ್ತೀಕ್, ಬಸ್ ಮಧು, ಮಧುಸೂದನ್ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆಯ ಕಚೇರಿಗೆ ಬಂದು ಶರಣಾಗಿದ್ದಾರೆ. ನಿಯಮದ ಪ್ರಕಾರ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ತನಿಖಾಧಿಕಾರಿಗಳಿಗೆ ಅವರನ್ನು ಹಸ್ತಾಂತರ ಮಾಡಲಾಯಿತು.
ಅರಸೀಕೆರೆಯಿಂದ ಚಿಕ್ಕಮಗಳೂರಿಗೆ:
ಹಗಲು ಹೊತ್ತಿನಲ್ಲಿ ಮರ್ಡರ್ ಮಾಡಿ, ರಾತ್ರಿ ಸಮಯದಲ್ಲಿ ಶರಣಾಗತಿ ಆಗಿರುವ ಹಂತಕರ ಕೃತ್ಯದ ಹಿಂದೆ ರೋಚಕ ಮಾತ್ರವಲ್ಲ ಹಸಿ ಸುಳ್ಳು, ಅಂತೆ ಕಂತೆಯ ಕಥೆ ಇದೆ. ಮರ್ಡರ್ ಮಾಡಿ ಕಾರಿನಲ್ಲಿ ಊರು ಬಿಟ್ಟಹಂತಕರು, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಗೆ ಬಂದಿದ್ದು ಮಧ್ಯರಾತ್ರಿ. ಇದಕ್ಕೆ ಹಂತಕರು ನೀಡಿರುವ ಕಾರಣ, ಕೈಯಲ್ಲಿ ಇರೋ ದುಡ್ಡೆಲ್ಲಾ ಖಾಲಿಯಾಗಿತ್ತು. ಊರಿಗೆ ವಾಪಸ್ ಹೋಗೋಣವೆಂದರೆ ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ಸರಿ ಇಲ್ಲ. ತಮ್ಮ ಟೀಂನಲ್ಲಿರುವ ಯಾರಿಗಾದರೂ ಏನಾದರೂ ಆಗಬಹುದೆಂಬ ಭಯ. ಈ ಕಾರಣಕ್ಕಾಗಿ ಅರಸೀಕೆರೆಯಿಂದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಅರಸೀಕೆರೆ ಎಷ್ಟುಹೊತ್ತಿಗೆ ಬಿಟ್ಟರು, ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಎಷ್ಟುಹೊತ್ತಿಗೆ ಬಂದರು, ಅಲ್ಲಿಂದ ಸುಮಾರು ದೂರದಲ್ಲಿರುವ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ನಡೆದುಕೊಂಡು ಹೋದ್ರಾ ಎಂಬ ಪ್ರಶ್ನೆಗಳು ನಮ್ಮ ಎದುರಿಗೆ ಬರುತ್ತವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲು ಈ ಜಿಲ್ಲೆಯ ಪೊಲೀಸ್ ಇಲಾಖೆ ಅಷ್ಟೇನೂ ತಲೆಕೆಡಿಸಿಕೊಳ್ಳುವುದಿಲ್ಲ. ಕಾರಣ, ಅಣ್ಣಿ ಹತ್ಯೆ ಪ್ರಕರಣ, 8 ಮಂದಿ ಆರೋಪಿಗಳಿಗೂ, ಚಿಕ್ಕಮಗಳೂರಿಗೂ ಯಾವುದೇ ಸಂಬಂಧ ಇಲ್ಲ. ಅವರೆಲ್ಲರೂ ಮೂಲತಃ ಶಿವಮೊಗ್ಗ ಜಿಲ್ಲೆಯವರು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಕಚೇರಿಗೆ ರಾತ್ರಿ ಹೊತ್ತಿನಲ್ಲಿ ಹೋಗಿ ಶರಣಾಗತಿಯಾದರೆ, ಬೆಳಗ್ಗೆ ಶಿವಮೊಗ್ಗ ಪೊಲೀಸರಿಗೆ ಒಪ್ಪಿಸುತ್ತಾರೆ ಎಂಬ ಪ್ಲಾನ್ ಹಿಂದೆ ಕಾಣದ ಕೈ ಕೆಲಸ ಮಾಡಿದೆ ಎಂಬ ಸಂಶಯ ಮೂಡಿದೆ. 8 ಮಂದಿಯನ್ನು ವ್ಯಕ್ತಿಯೊಬ್ಬ ಚಿಕ್ಕಮಗಳೂರಿಗೆ ಕರೆದುಕೊಂಡು ಬಂದು ಅವರನ್ನು ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯನ್ನು ದೂರದಿಂದಲೇ ತೋರಿಸಿ ಹೋಗಿರಬಹುದು ಎಂದು ಸಹ ಅಂದಾಜು ಮಾಡಲಾಗಿದೆ.
ಇದಕ್ಕೆ ನೀಡುವ ಕಾರಣ, ಈ 8 ಮಂದಿ ಹಂತಕರಿಗೆ ಚಿಕ್ಕಮಗಳೂರು ಜಿಲ್ಲೆ ಪರಿಚಯವಿಲ್ಲ. ಅವರಾಗಿಯೇ ಬಸ್‌ನಿಂದ ಇಳಿದು ಜಿಲ್ಲಾ ಎಸ್‌ಪಿ ಕಚೇರಿಗೆ ನೇರವಾಗಿ ಹೋಗಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಮರ್ಡರ್ ಮಾಡಿ ಎಸ್ಕೇಪ್ ಆಗಿರುವವರ ಬಳಿ ಕಾರ್ ಇತ್ತು. ಆದರೆ, ಕಾರ್ ಬಿಟ್ಟು, ಮೊಬೈಲ್ ಪೋನ್‌ಗಳನ್ನೂ ಬಿಟ್ಟು ಬರಿಗೈಯಲ್ಲಿ ಹಂತಕರು ಚಿಕ್ಕಮಗಳೂರು ಪೊಲೀಸರ ಬಳಿಗೆ ಬಂದಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಂದಿ ಅಣ್ಣಿ ಕೊಲೆ ಮಾಡಿದ್ದ ಆರೋಪಿಗಳು ಚಿಕ್ಕಮಗಳೂರು SP ಮುಂದೆ ಶರಣು
ಆಗಿದ್ದೇನು?:
ಚಿಕ್ಕಮಗಳೂರಿಗೆ ಸೋಮವಾರ ಮಧ್ಯ ರಾತ್ರಿ ಬಂದ ಹಂತಕರು, ಎಸ್‌ಪಿ ಕಚೇರಿಗೆ ಹೋಗಿ ಶಿವಮೊಗ್ಗದಲ್ಲಿ ಹಂದಿ ಅಣ್ಣಿಯನ್ನು ಕೊಲೆ ಮಾಡಿರುವವರೇ ತಾವೇ ಎಂದು ಒಪ್ಪಿಕೊಂಡರು. 8 ಮಂದಿ ಏಕ ಕಾಲದಲ್ಲಿ ಬಂದು ಶರಣಾಗಿದ್ದರಿಂದ ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಅವರು, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಕೂಡಲೇ ಸಂಪರ್ಕಿಸಿ ಮಾಹಿತಿಯನ್ನು ನೀಡಿದ್ದಾರೆ.
ಹಂತಕರನ್ನು ಚಿಕ್ಕಮಗಳೂರಿನ ಟೌನ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿತ್ತು. ಬೆಳಗ್ಗೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ನಗರಕ್ಕೆ ಬಂದು ಆರೋಪಿಗಳನ್ನು ವಿಚಾರಿಸಿದರು. ವಿಚಾರಣೆ ವೇಳೆ ತಾವು ಮಾಡಿರುವ ಕೃತ್ಯವನ್ನು ಒಪ್ಪಿಕೊಂಡಿರುವ ಮೇರೆಗೆ ಮಧ್ಯಾಹ್ನ ಜಿಲ್ಲಾಸ್ಪತ್ರೆಯಲ್ಲಿ ಅವರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ಬಳಿಕ ಸ್ಥಳೀಯ ಪೊಲೀಸರು ಆರೋಪಿಗಳನ್ನು ಶಿವಮೊಗ್ಗ ಪೊಲೀಸರಿಗೆ ಹಸ್ತಾಂತರ ಮಾಡಿದರು.
ಯಾರಿವರು?:
ರೌಡಿ ಹಂದಿ ಅಣ್ಣಿಯನ್ನು ಹತ್ಯೆ ಮಾಡಿರುವ ಹಿಂದೆ ಕ್ರೈಂ ಸ್ಟೋರಿ ಇದೆ. 2018ರಲ್ಲಿ ಬಂಕ್ ಬಾಲು ಎಂಬುವರನ್ನು ಹಂದಿ ಅಣ್ಣಿಯ ಗ್ಯಾಂಗ್‌ನವರು ಹತ್ಯೆ ಮಾಡಿದ್ದರು. ಈ ಸೇಡಿಗಾಗಿ ಬಂಕ್ ಬಾಲುವಿನ ಸಹಚರರು ಹಂದಿ ಅಣ್ಣಿಯನ್ನು ಹಾಡಹಗಲೇ ಹತ್ಯೆ ಮಾಡಿದ್ದಾರೆ. ಶರಣಾಗತಿ ಆಗಿರುವ 8 ಮಂದಿಯಲ್ಲಿ ಬಂಕ್ ಬಾಲುವಿನ ಅಪ್ಪಟ ಇಬ್ಬರು ಶಿಷ್ಯರು ಇದ್ದಾರೆ. ಅವರಲ್ಲಿ ಓರ್ವರು ತನ್ನ ಹೆಸರನ್ನು ಬಂಕ್ ಮನು ಎಂಬುದಾಗಿ ಇಟ್ಟುಕೊಂಡಿದ್ದಾನೆ.
ಇದನ್ನೂ ಓದಿ: ಲವ - ಕುಶರನ್ನು ಹತ್ಯೆ ಮಾಡಿದ್ದ ಹಂದಿ ಅಣ್ಣಿ ಬರ್ಬರ ಕೊಲೆ ಮತ್ತು ಮುನ್ನೆಲೆಗೆ ಬಂದ ಶಿವಮೊಗ್ಗ ಭೂಗತಲೋಕ
ತನಿಖೆ ನಂತರ ಖಚಿತ ಮಾಹಿತಿ ಹೊರಬರಲಿದೆ: ಶಿವಮೊಗ್ಗ ಎಸ್‌ಪಿ ಹೇಳಿಕೆ:
ಹಂದಿ ಅಣ್ಣಿ ಕೊಲೆ ಪ್ರಕರಣದ ಎಂಟು ಆರೋಪಿಗಳು ಚಿಕ್ಕಮಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ. ನಮ್ಮ ಪೊಲೀಸರು ಅಲ್ಲಿಗೆ ಹೋಗಿ ಕೋರ್ಚ್ ಮುಂದೆ ಹಾಜರುಪಡಿಸಿ, ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಆ ಬಳಿಕ ಮುಂದಿನ ತನಿಖೆ ನಡೆಸುತ್ತೇವೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೇಪ್ರಸಾದ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ತಿಕ್, ನಿತಿನ್, ಮಧು, ಫಾರೂಕ್, ಆಂಜನೇಯ, ಮದನ್, ಮಧು ಮತ್ತು ಚಂದನ್ ಎಂಬುವವರು ಶರಣಾಗಿದ್ದಾರೆ ಎಂದು ಮಾಹಿತಿ ಬಂದಿದೆ. ಇದರಲ್ಲಿ ಬಹುತೇಕರು ಕೊಲೆಯಲ್ಲಿ ಭಾಗಿಯಾಗಿದ್ದವರು. ಆರೋಪಿ ಅಲ್ಲದವರು ಶರಣಾಗಿದ್ದಾರೆ ಎಂಬುದು ಈಗ ಹೇಳಲು ಸಾಧ್ಯವಿಲ್ಲ. ಕಸ್ಟಡಿಗೆ ಪಡೆದ ಬಳಿಕ ವಿಚಾರಣೆ ನಡೆಸುತ್ತೇವೆ. ಆ ಬಳಿಕ ಏನೆಲ್ಲ ನಡೆಯಿತು ಅನ್ನುವುದು ಗೊತ್ತಾಗಲಿದೆ. ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಕರಣದ ಬಳಿಕ ಒಂದೂವರೆ ದಿನದಲ್ಲಿ ಯಾರೆಲ್ಲ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಅನ್ನುವುದು ಗೊತ್ತಾಗಿದೆ. ಕಾರ್ತಿಕ್, ನಿತಿನ್ ಎಂಬವರು ಬಂಕ್ ಬಾಲು ಹಿಂಬಾಲಕರಾಗಿದ್ದಾರೆ. ಇವರ ವಿರುದ್ಧ ಪ್ರಕರಣಗಳಿವೆ. ಬಂಕ್ ಬಾಲು ಹತ್ಯೆ ಪ್ರಕರಣದಲ್ಲಿ ಹಂದಿ ಅಣ್ಣಿ ಭಾಗಿಯಾಗಿದ್ದ ಎಂದು ಇವರು ತಿಳಿದುಕೊಂಡು, ಆತನ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹಂದಿ ಅಣ್ಣಿ ಕೊಲೆ ಬೆನ್ನಲ್ಲೇ ಮೈಕೊಡವಿ ನಿಂತಿದೆ ಶಿವಮೊಗ್ಗ ಅಂಡರ್‌ವಲ್ಡ್, ಇನ್ನೊಂದು ಕೊಲೆಗೆ ಯತ್ನ
ಹಂದಿ ಅಣ್ಣಿ ಹತ್ಯೆ ಆರೋಪಿಗಳ ಪತ್ತೆಗೆ ಈಗಾಗಲೇ ತಂಡ ತನ್ನ ಕೆಲಸದಲ್ಲಿ ನಿರತವಾಗಿದೆ. ಈ ಮಧ್ಯೆ ಆರೋಪಿಗಳೇ ಬಂದು ಶರಣಾಗಿದ್ದಾರೆ. ಅವತ್ತು ರೌಡಿ ಶೀಟರ್ ಅಂಬು ಅಥವಾ ಹಂದಿ ಅಣ್ಣಿಯನ್ನು ಕೋಲೆ ಮಾಡಲೆಂದೆ ಆರೋಪಿಗಳು ಹೊಂಚು ಹಾಕಿದ್ದು, ಅದರಂತೆ ಹಂದಿ ಅಣ್ಣಿಯನ್ನು ಹತ್ಯೆ ಮಾಡಿದ್ದಾರೆ. ಹತ್ಯೆಯಲ್ಲಿ ಬಹುತೇಕ ಶಿವಮೊಗ್ಗದವರೇ ಇದ್ದು, ಕೆಲವರು ಬೇರೆ ಜಿಲ್ಲೆಯವರು ಇದ್ದರು ಎಂಬ ಮಾಹಿತಿ ಇದೆ. ತನಿಖೆ ನಂತರ ಸಮಗ್ರ ಮಾಹಿತಿ ಗೊತ್ತಾಗಲಿದೆ ಎಂದು ತಿಳಿಸಿದರು.