Shivamogga: ಹೋರಿ ಬೆದರಿಸುವ ಸ್ಪರ್ಧೆ: ಹೋರಿ ತಿವಿದು ಇಬ್ಬರ ಸಾವು
ಹೋರಿ ಬೆದರಿಸುವ ಹಬ್ಬದಲ್ಲಿ ಇಬ್ಬರು ಬಲಿಯಾಗಿರುವ ಪ್ರತ್ಯೇಕ ದುರ್ಘಟನೆಗಳು ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಡೆದಿವೆ.
ವರದಿ- ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್
ಶಿವಮೊಗ್ಗ (ಜ.16): ಹೋರಿ ಬೆದರಿಸುವ ಹಬ್ಬದಲ್ಲಿ ಇಬ್ಬರು ಬಲಿಯಾಗಿರುವ ಪ್ರತ್ಯೇಕ ದುರ್ಘಟನೆಗಳು ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ನಡೆದಿವೆ.
ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಶಿವಮೊಗ್ಗ ತಾಲೂಕಿನ ಕೊನೆಗವಳ್ಳಿ ಗ್ರಾಮ ಹಾಗೂ ಸೊರಬ ತಾಲೂಕಿನ ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಆಯೋಜನೆ ಮಾಡಲಾಗಿತ್ತು. ಕೊನಗವಳ್ಳಿಯಲ್ಲಿ ನಡೆದಿದ್ದ ಹೋರಿಬೆದರಿಸುವ ಸ್ಪರ್ಧೆಯನ್ನು ನೋಡಲು ಹೋಗಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಆಲ್ಕೊಳ ನಿವಾಸಿ ಲೋಕೇಶ್(32)ಎದೆಗೆ ಹೋರಿ ತಿವಿದು ಸಾವನ್ನಪ್ಪಿದ್ದಾರೆ. ಇದೇ ವೇಳೆ 6 ಜನರಿಗೆ ಗಾಯಗಳಾಗಿದ್ದು ಸ್ಥಳೀಯವಾಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೋರಿ ಬೆದರಿಸುವ ವೇಳೆ ಗಾಯಗೊಂಡಿದ್ದ ಲೋಕೇಶ್ ನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಲ್ಲಿ ಮತ್ತೊಬ್ಬ ಸಾವು: ಇನ್ನು ಜ.14 ರಂದು ಸೊರಬ ತಾಲೂಕಿನ ಆನವಟ್ಟಿಯ ಮಳ್ಳೂರು ಹೋರಿ ಬಹಬ್ಬದಲ್ಲಿ ರಂಗನಾಥ್ ಎಂಬ 24 ವರ್ಷದ ಯುವಕ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆ ನಡೆದ ತಕ್ಷಣ ಶಿಕಾರಿಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಗಾಯಾಳು ಯುವಕನ ಹೊಟ್ಟೆಗೆ ಹೊಲಿಗೆ ಹಾಕಲಾಗಿತ್ತು. ನಂತರ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಯುವಕನೂ ಕೂಡ ಚಿಕಿತ್ಸೆಗೆ ಫಲಿಸದೇ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಒಟ್ಟಾರೆ ಜಿಲ್ಲೆಯ ಇಬ್ಬರು ಹೋರಿಗಳ ದಾಳಿಯಿಂದ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಹೋರಿ ಬೆದರಿಸುವ ಸ್ಪರ್ಧೆ ವೇಳೆ ಅವಘಡ: ಯುವಕನನ್ನು ದರದರನೆ ಎಳೆದುಕೊಂಡು ಹೋದ ಹೋರಿಗಳು
ರಕ್ಷಣಾ ಕ್ರಮ ಅನುಕರಣೆ ಇಲ್ಲ: ಆಯೋಜಕರ ಮೇಲೆ ದೂರು: ಇನ್ನು ಜಿಲ್ಲೆಯ ಕೊನೆಗವಳ್ಳಿ ಮತ್ತು ಮಳ್ಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬದ ಆಯೋಜಕರ ವಿರುದ್ಧ ದೂರು ದಾಖಲು ಆಗಿದೆ. ಹೋರಿ ಹಿಡಿಯುವ ಸ್ಪರ್ಧೆ ಆಯೋಜನೆ ವೇಳೆ ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ, ಇದಕ್ಕೆ ಯಾವುದೇ ಅನುಮತಿ ಪಡೆಯದೇ ಆಯೋಜನೆ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಆದರೆ, ಹೋರಿ ಹಿಡಿಯುವ ಸ್ಪರ್ಧೆಯ ವೇಳೆ ಪ್ರೇಕಕರು ದೂರದಲ್ಲಿ ನಿಂತು ನೋಡಲು ಅವಕಾಶ ಮಾಡಿಕೊಡಬೇಕು. ಜೊತೆಗೆ, ಹೋರಿ ಓಡುವ ಜಾಗಕ್ಕೆ ಬ್ಯಾರಿಕೇಡ್ ಅಳವಡಿಕೆ ಮಾಡಬೇಕು. ಇದ್ಯಾವ ರಕ್ಷಣಾ ಕ್ರಮಗಳನ್ನು ಸ್ಪರ್ಧೆ ಆಯೋಜನೆ ಮಾಡುವವರು ಅನುಸರಿಸಿರಲಿಲ್ಲ ಎಂದು ತಿಳಿದುಬಂದಿದೆ.
ದೀಪಾವಳಿ ಅನಾಹುತ ಸಂಭವಿಸಿತ್ತು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಗಳು ಇದೀಗ ಮಕರ ಸಂಕ್ರಾಂತಿಯ ನೆಪದಲ್ಲೂ ಶುರುವಾಗಿ ಹಲವರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಅರೆ ಮಲೆನಾಡಿನ ಪ್ರದೇಶಗಳಾದ ಶಿವಮೊಗ್ಗ ತಾಲೂಕಿನ ಹಾರ್ನಳ್ಳಿ ಸುತ್ತಮುತ್ತಲ ಗ್ರಾಮಗಳು ಶಿಕಾರಿಪುರ ತಾಲೂಕಿನ ಈಸೂರು, ಕಲ್ಮನೆ, ಹಿತ್ತಲ , ಶಿರಳಕೊಪ್ಪ ಭಾಗಗಳು ಸೊರಬ ತಾಲೂಕಿನ ಆನವಟ್ಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಭರ್ಜರಿಯಾಗಿ ಆಯೋಜನೆ ಮಾಡಲಾಗುತ್ತಿತ್ತು. ಈ ಹಬ್ಬದ ಸಂದರ್ಭದಲ್ಲಿ ಹೋರಿ ಹಿಡಿಯಲು ಹೋಗಿದ್ದ ಹಲವರು ಪ್ರಾಣ ಕಳೆದುಕೊಂಡಿದ್ದರು.
ಹಾವೇರಿ: ಕೊಬ್ಬರಿ ಹೋರಿ ಇನ್ನಿಲ್ಲ, ಕಂಬನಿ ಮಿಡಿದ ಅಭಿಮಾನಿಗಳು
ನಿಯಮ ಗಾಳಿಗೆ ತೂರಿ ಸ್ಪರ್ಧೆ ಆಯೋಜನೆ: ಹೀಗಾಗಿಯೇ ಜಿಲ್ಲಾಡಳಿತ ಹೋರಿ ಹಬ್ಬದ ಸ್ಪರ್ಧೆ ಆಯಸ್ಸು ಮುನ್ನ ಕಡ್ಡಾಯ ಅನುಮತಿಯನ್ನು ಪಡೆಯಬೇಕೆಂದು ಸೂಚನೆ ನೀಡಿತ್ತು ಅಲ್ಲದೆ ಹೋರಿ ಬೆದರಿಸುವ ಹಬ್ಬದ ಸಂದರ್ಭದಲ್ಲಿ ಸಂಭವಿಸಿದರೆ ಆಯೋಜಕರ ವಿರುದ್ಧವೇ ಕಠಿಣ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕೂಡ ಜಿಲ್ಲಾಡಳಿತ ನೀಡಿತ್ತು. ಹೀಗಿದ್ದರೂ ಹೋರಿ ಬೆದರಿಸುವ ಹಬ್ಬವನ್ನು ಆಯೋಜಕರು ರಾಜಕೀಯ ಪ್ರಭಾವ ಬೀರಿ ಆದೇಶಗಳನ್ನು ಗಾಳಿಗೆ ತೂರಿದ್ದರು. ಇದೀಗ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯೋಜಿಸಬೇಕಾಗಿದ್ದ ಹೋರಿ ಹಬ್ಬವನ್ನು ಮಕರ ಸಂಕ್ರಮಣದ ವೇಳೆ ಆಯೋಜಿಸಿ ಇಬ್ಬರ ಪ್ರಾಣಕ್ಕೆ ಸಂಚಕಾರ ತಂದಿದ್ದರೆ ಹಲವರಿಗೆ ಗಾಯಗಳಾಗಿವೆ.