ಲಕ್ನೌ(ಸೆ. 07)  ಈಕೆ ಅಂತಿಂಥ ಚಾಲಾಕಿ ಅಲ್ಲ, ಹಣ ಮಾಡಲು ಸುಲಭ ಉಪಾಯವೊಂದನ್ನು ಕಂಡುಕೊಂಡಿದ್ದಳು. ಅದು ಅಜ್ಜಂದರಿಗೆ ಗಾಳ ಹಾಕಿ ಮದುವೆ ಮಾಡಿಕೊಳ್ಳುವುದು.

ಈ ಲಲನಾಮಣಿಯ ಹೆಸರು ಮೋನಿಕಾ ಮಲಿಕ್​. ಕಳೆದ ಹತ್ತು ವರ್ಷದಿಂದ ಸರಾಸರಿ ಹೇಳುವುದಾದರೆ ವರ್ಷಕ್ಕೊಬ್ಬರನ್ನು ಮದುವೆಯಾಗುತ್ತಾ ಬಂದಿದ್ದಾಳೆ.  8 ಮಂದಿ ಹಿರಿಯ ನಾಗರಿಕರು ಇವಳ ಬಲೆಗೆ ಬಿದ್ದುದ್ದು ಹಣ-ಆಸ್ತಿ ಕಳೆದುಕೊಂಡಿದ್ದಾರೆ!

ಗಾಜಿಯಾಬಾದ್‍ನ 66 ವರ್ಷದ ಕಟ್ಟಡ ನಿರ್ಮಾಣ ಗುತ್ತಿಗೆದಾರ ಜುಗಲ್ ಕಿಶೋರ್ ಎಂಬುವವರನ್ನು ಮದುವೆಯಾಗಿ ಮೋಸ ಮಾಡಿದ ನಂತರ ಈ ಮಾಯಾಂಗನೆಯ ಬಂಡವಾಳ ಬಟಾಬಯಲಾಗಿದೆ.

ಪತ್ನಿಯನ್ನು ಕಳೆದುಕೊಂಡ ಜುಗಲ್ ಕಿಶೋರ್  ವಧು-ವರರ ಕೇಂದ್ರದಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ. ಎಲ್ಲ ಕೇಂದ್ರಗಳಲ್ಲಿಯೂ ತನ್ನ ಹೆಸರನ್ನು ಮೊದಲೇ ವಿಚ್ಛೇದಿತೆ ಎಂದು ದಾಖಲಿಸಿಕೊಂಡಿರುವ ಮೋನಿಕಾಳನ್ನು ಕೇಂದ್ರದವರು ಪರಿಚಯ ಮಾಡಿಕೊಟ್ಟಿದ್ದಾರೆ.. ಸಾಕಲ್ಲವೇ ಇಷ್ಟು!

ಪ್ರಾಯದ ಯುವತಿ ಸಿಕ್ಕಿದ್ದಾಳೆ ಎಂಬ ಖುಷಿಯಲ್ಲಿ ಮದುವೆಯೂ ನಡೆದು ಹೋಗಿದೆ. ಇದಾದ ಮೇಲೆ ಎರಡು ತಿಂಗಳು ಕಳೆದಿದೆ ಅಷ್ಟೆ, ಮೋನಿಕಾಳೂ ಇಲ್ಲ, ಚಿನ್ನಾಭರಣ, ನಗದು ಯಾವೂದು ಇಲ್ಲ!

ಹೊಸದಾಗಿ ಮದುವೆಯಾಗಿದ್ದ ಹೆಂಡತಿ, ಆಸ್ತಿ ಕಳೆದುಕೊಂಡ ಜುಗಲ್ ಕಿಶೋರ್ ದೂರು ದಾಖಲಿಸಲು ಹೋದಾಗ ಮತ್ತೊಬ್ಬ ಸಂತ್ರಸ್ತ ಕೂಡ ಬಂದಿದ್ದರು. ಎಲ್ಲವೂ ತಾಳೆಯಾದಾಗ ಈಕೆ  ಒಬ್ಬಳೆ ಎಂಟು ಜನರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.