ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲದಲ್ಲಿ ನಡೆದ ಘಟನೆ.
ಬಂಟ್ವಾಳ(ಮಾ.10): ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ್ತಿಲದಲ್ಲಿ ನಡೆದಿದೆ. ಬಾಳ್ತಿಲ ನಿವಾಸಿ, ಶಿಕ್ಷಕರಾದ ಚಂದ್ರಶೇಖರ ಮತ್ತು ಸೌಮ್ಯ ದಂಪತಿ ಪುತ್ರಿ ವೈಷ್ಣವಿ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.
ಶುಕ್ರವಾರ ಸಂಸ್ಕೃತ ಭಾಷಾ ಪರೀಕ್ಷೆ ಆರಂಭವಾಗುವ ಹಿನ್ನೆಲೆಯಲ್ಲಿ ಮನೆಯಲ್ಲೇ ಇದ್ದು ಪರೀಕ್ಷೆ ತಯಾರಿಯಲ್ಲಿದ್ದಳು. ವೈಷ್ಣವಿಯ ತಾಯಿ ಸೌಮ್ಯ ಅವರು ಮಗಳು ಓದುತ್ತಿದ್ದಾಳಾ ಎಂದು ವಿಚಾರಿಸಲು ನೆರೆ ಮನೆಯವರಿಗೆ ಫೋನ್ ಮಾಡಿದ್ದಾರೆ. ನೆರೆಮನೆಯವರು ಮನೆಗೆ ಹೋಗಿ ನೋಡಿದಾಗ ವಿದ್ಯಾರ್ಥಿನಿ ವೈಷ್ಣವಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದಿದೆ.
ದಾವಣಗೆರೆ: ದ್ವಿತೀಯ ಪಿಯು ಪರೀಕ್ಷೆ ಆರಂಭಕ್ಕೆ ಮುನ್ನಾ ದಿನವೇ ವಿದ್ಯಾರ್ಥಿನಿ ಆತ್ಮಹತ್ಯೆ!
ಕಳೆದ ಕೆಲವು ದಿನಗಳಿಂದ ಇವಳು ಖಿನ್ನತೆಗೊಳಗಾಗಿದ್ದಳು, ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ನೀಡಲಾಗಿತ್ತು ಎಂದು ಹೇಳಲಾಗಿದೆ. ವೈಷ್ಣವಿ ತಂದೆ ಚಂದ್ರಶೇಖರ್ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು, ತಾಯಿ ಸೌಮ್ಯ ಕಲ್ಲಡ್ಕ ಶ್ರೀರಾಮ ಪಿಯು ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದಾರೆ. ವೈಷ್ಣವಿ ಕಲ್ಲಡ್ಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ತರಗತಿಯಲ್ಲಿ ಪ್ರಥಮ ಬರುತ್ತಿದ್ದಳು.