ಬೆಂಗಳೂರು: ಬಿಬಿಎಂಪಿಯ 14 ಲಕ್ಷ ಪ್ರೇಯಸಿಯ ಖಾತೆಗೆ..!
ಕಾರ್ಯಪಾಲಕ ಎಂಜಿನಿಯರ್ ರಾಜೇಂದ್ರ ನಾಯ್ಕ್ ನೀಡಿದ ದೂರಿನ ಮೇರೆಗೆ ಆರೋಪಿಗಳ ಬಂಧನ
ಬೆಂಗಳೂರು(ಆ.24): ಗುತ್ತಿಗೆದಾರರಿಗೆ ಪಾವತಿಸಬೇಕಿದ್ದ ಹಣವನ್ನು ತನ್ನ ಪ್ರೇಯಸಿ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದ ಬಿಬಿಎಂಪಿ ದ್ವಿತೀಯ ದರ್ಜೆ ಸಹಾಯಕ ಹಾಗೂ ಆತನ ಪ್ರೇಯಸಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಥಣಿಸಂದ್ರದ ಎಕೆ ಕಾಲನಿ ನಿವಾಸಿ ಎಂ.ಕೆ.ಪ್ರಕಾಶ್ (39) ಮತ್ತು ಯಲಹಂಕ ಉಪನಗರದ ಬ್ಯೂಟಿಷಿಯನ್ ಕಾಂಚನಾ (30) ಬಂಧಿತರು. ಬಿಬಿಎಂಪಿ ಯಲಹಂಕ ವಲಯ ಬ್ಯಾಟರಾಯನಪುರ ಕಚೇರಿಯಲ್ಲಿ ಎಸ್‌ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಕಾಶ್, 2021-22ನೇ ಸಾಲಿನಲ್ಲಿ .14.07 ಲಕ್ಷ ದುರುಪಯೋಗ ಪಡಿಸಿಕೊಂಡಿದ್ದರು. ಈ ಸಂಬಂಧ ಕಾರ್ಯಪಾಲಕ ಎಂಜಿನಿಯರ್ (ವಿದ್ಯುತ್) ರಾಜೇಂದ್ರ ನಾಯ್ಕ್ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲವ್ವರ್‌ಗಾಗಿ ಗಂಡನ ಕೊಲೆಗೆ ಪತ್ನಿಯಿಂದಲೇ ಸುಫಾರಿ; ಪ್ರಾಣ ಉಳಿಸಿದ್ದು ಕುಡಿತದ ಚಟ
ಎಸ್‌ಡಿಎ ಪ್ರಕಾಶ್, ವಾರ್ಡ್‌ನಲ್ಲಿ ನಡೆಯುತ್ತಿದ್ದ ಕಾಮಗಾರಿಗಳ ಸಂಬಂಧ ಮೇಲಧಿಕಾರಿ ಸಹಿ ಹಾಗೂ ಒಪ್ಪಿಗೆ ಪಡೆದು ಗುತ್ತಿಗೆದಾರರಿಗೆ ಚೆಕ್ ಅಥವಾ ಆರ್‌ಟಿಜಿಎಸ್ ಮುಖಾಂತರ ಹಣ ಬಿಡುಗಡೆ ಮಾಡಬೇಕಿತ್ತು. ಈ ನಡುವೆ ಪ್ರಕಾಶ್‌ಗೆ ಬ್ಯೂಟಿಶಿಯನ್ ಕಾಂಚನಾ ಪರಿಚಯವಾಗಿ ಕೆಲ ದಿನಗಳ ಬಳಿಕ ಆಪ್ತರಾಗಿದ್ದರು. ಹೀಗಾಗಿ ಪ್ರಕಾಶ್ ಪಾಲಿಕೆ ಬ್ಯಾಂಕ್ ಖಾತೆಯಿಂದ ಚೆಕ್ ಅಥವಾ ಆರ್‌ಟಿಜಿಎಸ್‌ನಲ್ಲಿ ಹಣ ಪಾವತಿಸುವಾಗ ಕಾಂಚನಾ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದ. ಆದರೆ, ಪಾಲಿಕೆ ದಾಖಲೆಗಳಲ್ಲಿ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿದೆ ಎಂದು ನಮೂದಿಸುತ್ತಿದ್ದ. 2021ರ ನವೆಂಬರ್‌ನಿಂದ .14.07 ಲಕ್ಷ ದುರ್ಬಳಕೆ ಮಾಡಿಕೊಂಡಿದ್ದ.
ಲೆಕ್ಕ ಪರಿಶೋಧನೆ ವೇಳೆ ಸಿಕ್ಕಿಬಿದ್ದ!
ಕಳೆದ ಜುಲೈನಲ್ಲಿ ಪಾಲಿಕೆ ಲೆಕ್ಕಪರಿಶೋಧನೆ ಆರಂಭವಾದ ಬಳಿಕ ಪ್ರಕಾಶ್ ಮೇಲಧಿಕಾರಿಗಳ ಅನುಮತಿ ಪಡೆಯದೆ ದಿಢೀರ್ ರಜೆ ಹಾಕಿಕೊಂಡಿದ್ದ. ಲೆಕ್ಕ ಪರಿಶೋಧನೆ ವೇಳೆ ಕೆಲ ಲೆಕ್ಕಪತ್ರಗಳು ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ತೆಗೆದು ನೋಡಿದಾಗ ಅಪರಿಚಿತ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಸಂಬಂಧ ವಿಚಾರಿಸಲು ಕರೆ ಮಾಡಿದರೂ ಪ್ರಕಾಶ್ ಕರೆ ಸ್ವೀಕರಿಸಿಲ್ಲ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಣ ದುರ್ಬಳಕೆ ಮಾಡಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಪ್ರಕಾಶ್ ಪ್ರೇಯಿಸಿ ಕಾಂಚನಾ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದ ಹಣದಲ್ಲಿ ಆಕೆ ಚಿನ್ನಾಭರಣ ಖರೀದಿಸಿದ್ದಳು. ಅಷ್ಟೇ ಅಲ್ಲದೆ, ಇಬ್ಬರೂ ಮೋಜು-ಮಸ್ತಿಗಾಗಿ ಹಣವನ್ನು ಬಳಸಿಕೊಂಡಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.