Asianet Suvarna News Asianet Suvarna News

ಎಸಿಪಿಗೆ ಸ್ಯಾಂಟ್ರೋ ರವಿ ಆವಾಜ್‌: ಆಡಿಯೋ ವೈರಲ್‌..!

ವಂಚನೆ ಕೇಸ್‌ನಲ್ಲಿ ಕಬ್ಬನ್‌ಪಾರ್ಕ್ ಉಪವಿಭಾಗದ ಎಸಿಪಿಗೆ ದೂರು, ವಿಚಾರಣೆಗೆ ಕರೆದಿದ್ದಕ್ಕೆ ಅಬ್ಬರಿಸಬೇಡಿ ಎಂದಿದ್ದ ಸ್ಯಾಂಟ್ರೋ ರವಿ 

Santro Ravi Misbehave with Police grg
Author
First Published Jan 14, 2023, 8:00 AM IST

ಬೆಂಗಳೂರು(ಜ.14): ಕುಖ್ಯಾತ ವಂಚಕ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯ ಪತ್ನಿ ಹಾಗೂ ನಾದಿನಿ ವಿರುದ್ಧ ದರೋಡೆ ಸಂಚು ಪ್ರಕರಣದಲ್ಲಿ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ನಿರ್ಲಕ್ಷ್ಯತನ ಬಯಲಾದ ಬೆನ್ನಲ್ಲೇ ಈಗ ವರ್ಗಾವಣೆ ದಂಧೆ ವಿಚಾರದಲ್ಲೂ ರವಿಗೆ ಆವಾಜ್‌ ಹಾಕಿ ಮತ್ತೊಬ್ಬರು ಎಸಿಪಿ ತಣ್ಣಾಗಿದ್ದ ಸಂಗತಿ ಬಯಲಾಗಿದೆ.

ವಂಚನೆ ಸಂಬಂಧ ರವಿಯನ್ನು ವಿಚಾರಣೆಗೆ ಕರೆದ ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿ ರಾಜೇಂದ್ರ ಅವರು, ಆನಂತರ ಆತನ ಮೇಲೆ ಯಾವುದೇ ರೀತಿ ಕಾನೂನು ಕ್ರಮ ಜರುಗಿಸದೆ ಮೌನವಹಿಸಿದ್ದರು. ಇದಕ್ಕೆ ರವಿ ವಿರುದ್ಧ ಯಾರೊಬ್ಬರು ಲಿಖಿತ ದೂರು ನೀಡದ ಕಾರಣ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಿಲ್ಲವೆಂದು ಕೇಂದ್ರ ವಿಭಾಗದ ಡಿಸಿಪಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ರವಿ ಮೊಬೈಲ್‌ಗೆ ಕರೆ ಮಾಡಿ ವಿಚಾರಣೆಗೆ ಬರುವಂತೆ ಎಸಿಪಿ ರಾಜೇಂದ್ರ ಆವಾಜ್‌ ಹಾಕಿದ್ದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಗುರುತೇ ಸಿಗದಂತೆ ವೇಷ ಬದಲಿಸಿದ ಸ್ಯಾಂಟ್ರೋ ರವಿ ಬಂಧನ, ರಾಜ್ಯ ರಾಜಕೀಯದಲ್ಲಿ ಸಂಚಲನ!

ಎರಡು ತಿಂಗಳ ಹಿಂದೆ ಕಾಟನ್‌ಪೇಟೆ ಠಾಣೆಯಲ್ಲಿ ಆಗಿನ ಇನ್‌ಸ್ಪೆಕ್ಟರ್‌ ಪ್ರವೀಣ್‌ರನ್ನು ಬಳಸಿ ತನ್ನ ಪತ್ನಿ ಹಾಗೂ ನಾದಿನಿ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಸ್ಯಾಂಟ್ರೋ ರವಿ ಜೈಲಿಗೆ ಕಳುಹಿಸಿದ್ದು ಸಂಗತಿ ಬಯಲಾಗಿ ವಿವಾದವಾಗಿತ್ತು. ಈ ಕೃತ್ಯದ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಠಿಣ ಕಾನೂನು ಕ್ರಮ ಜರುಗಿಸದೆ ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಕೆ.ಸಿ.ಗಿರಿ ನಿರ್ಲಕ್ಷ್ಯತನವಹಿಸಿದ್ದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಈಗ ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿ ನಡೆ ಬಗ್ಗೆ ಕೂಡ ಆಕ್ಷೇಪಗಳು ಕೇಳಿ ಬಂದಿವೆ.

ನನ್ನದು ವರ್ಗಾವಣೆ ಸಾಮಾಜಿಕ ಸೇವೆ ಎಂದಿದ್ದ ಸ್ಯಾಂಟ್ರೋ ರವಿ

ಕೆಲ ತಿಂಗಳ ಹಿಂದೆ ಪೊಲೀಸ್‌ ಸೇರಿದಂತೆ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮಾಡಿಸುವುದಾಗಿ ನಂಬಿಸಿ ಜನರಿಗೆ ಸ್ಯಾಂಟ್ರೋ ರವಿ ವಂಚಿಸುತ್ತಿದ್ದಾನೆ ಎಂದು ಕಬ್ಬನ್‌ ಪಾರ್ಕ್ ಉಪ ವಿಭಾಗದ ಎಸಿಪಿ ರಾಜೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ಸಿಕ್ಕಿತು. ಆಗ ರಾಜೇಂದ್ರ ಅವರು, ಸ್ಯಾಂಟ್ರೋ ರವಿಗೆ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

ಎಸಿಪಿ ಅವರ ಕರೆ ಸ್ವೀಕರಿಸಿದ ರವಿ, ತನ್ನ ಪತ್ನಿ ಹೈಕೋರ್ಚ್‌ ವಕೀಲರಾಗಿದ್ದಾರೆ. ಸಮಾಜದಲ್ಲಿ ಗೌರವಯುತ ಸ್ಥಾನಮಾನವಿದೆ. ನನಗೆ ವಿಚಾರಣೆಗೆ ಬರಲು ನೋಟಿಸ್‌ ಕೊಟ್ಟಿದ್ದೀರಾ ಎಂದಿದ್ದ. ಆಗ ತಾವು ಏನೂ ಕೆಲಸ ಮಾಡುತ್ತೀರಿ ಎಂದು ಎಸಿಪಿ ಪ್ರಶ್ನೆಗೆ ತಾನು ಸಮಾಜ ಸೇವೆಯಲ್ಲಿ ತೊಡಗಿದ್ದೇನೆ ಎಂದು ಆತ ಉತ್ತರಿಸಿದ್ದ. ಅದಕ್ಕೆ ಯಾವ ರೀತಿ ಸಮಾಜ ಸೇವೆ ನಿಮ್ಮದು ಎಂದು ಎಸಿಪಿ ಕೇಳಿದ್ದರು. ಆಗ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹೀಗೆ ಬೇರೆ ಬೇರೆ ಕೆಲಸ ಮಾಡುತ್ತೇನೆ ಎಂದಿದ್ದ. ವರ್ಗಾವಣೆ ಮಾಡಿಸೋದು ಸಮಾಜ ಸೇವೆ ನಾ ಎಂದು ಏರಿದ ದನಿಯಲ್ಲಿ ಎಸಿಪಿ ಪ್ರಶ್ನಿಸಿದ್ದರು. ಅದಕ್ಕೆ ನೀವು ರೇಗಾಡ ಬೇಡಿ ಸಾಹೇಬ್ರೇ. ಯಾರ ಹತ್ತಿರ ಜೋರು ಮಾಡೋದು. ನಾನು ಯಾರೂ ಗೊತ್ತಿಲ್ಲ ನಿಮಗೆ ಎಂದು ರವಿ ಅಬ್ಬರಿಸಿದ್ದ. ಈ ಮಾತಿಗೆ ಕೆರಳಿದ ಎಸಿಪಿ, ಬಾರೋ ಲೇ ಲೋ. ನನ್ನ ಮಗನೇ. ಮುಚ್ಚೋ ಬಾಯಿ. ಒಳ್ಳೆಯ ಮಾತಿನಿಂದ ಕರೆದರೆ ಏನೇನೋ ಮಾತನಾಡುತ್ತಿಯಾ. ನಾಳೆ ವಿಚಾರಣೆಗೆ ಬರಬೇಕು ಎಂದು ಗುಡುಗಿದ್ದರು. ಹೀಗೆ ಸಿಡಿಲಬ್ಬರಿಸಿದ ಎಸಿಪಿ ಆನಂತರ ರವಿ ಮೇಲೆ ಯಾವುದೇ ಕ್ರಮ ಜರುಗಿಸದೆ ಮೆತ್ತಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ.

ದಿನಕ್ಕೊಂದು ರಾಜ್ಯ, ಗಂಟೆಗೊಂದು ಸಿಮ್, ಸ್ಯಾಂಟ್ರಿ ರವಿ ಬಂಧನ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ!

‘ಎಸಿಪಿ ಮಂಜುನಾಥ್‌ ನನ್ನ ಸ್ನೇಹಿತ!’

ಈ ಹಿಂದೆ ಕಬ್ಬನ್‌ ಪಾರ್ಕ್ ಎಸಿಪಿ ಆಗಿದ್ದನ್ನಲ್ಲ ಮಂಜುನಾಥ ಈಗ ಮಂಡ್ಯ ಡಿವೈಎಸ್ಪಿ ಆಗಿದ್ದಾನೆ. ಅವನು ನನ್ನ ಸ್ನೇಹಿತ. ಸಿಬಿಐನಲ್ಲಿ ಒಬ್ಬರು ನಿಮ್ಮ ಐಪಿಎಸ್‌ ಅಧಿಕಾರಿ ಇದ್ದರಲ್ಲ ಅವರು ನನ್ನ ಸ್ನೇಹಿತರು ಎಂದು ಎಸಿಪಿ ರಾಜೇಂದ್ರ ಅವರಿಗೆ ಸ್ಯಾಂಟ್ರೋ ರವಿ ಹೇಳಿದ್ದು ಆಡಿಯೋದಲ್ಲಿ ಉಲ್ಲೇಖವಾಗಿದೆ.

ಏಳು ತಿಂಗಳ ಹಿಂದೆ ರವಿ ವಿರುದ್ಧ ಮೌಖಿಕವಾಗಿ ಸಾರ್ವಜನಿಕರೊಬ್ಬರು ದೂರು ನೀಡಿದ್ದರು. ಅದರನ್ವಯ ಆತನನ್ನು ವಿಚಾರಣೆ ಕರೆದು ದೂರು ಇತ್ಯರ್ಥ ಮಾಡಲಾಯಿತು. ಲಿಖಿತ ದೂರು ನೀಡದೆ ಕಾರಣ ರವಿ ಮೇಲೆ ಕಾನೂನು ಕ್ರಮ ಜರುಗಿಸಲು ಸಾಧ್ಯವಾಗಲಿಲ್ಲ ಅಂತ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ತಿಳಿಸಿದ್ದಾರೆ. 

Follow Us:
Download App:
  • android
  • ios