ಬೆಂಗಳೂರು(ಏ.28):  ದಶಕದಿಂದ ಪಾತಕ ಕೃತ್ಯಗಳ ಮೂಲಕ ಕಂಟಕನಾಗಿ ಪರಿಣಮಿಸಿದ್ದ ಕುಖ್ಯಾತ ರೌಡಿಯೊಬ್ಬನ್ನು ಒಂದು ವರ್ಷದ ಅವಧಿಗೆ ಗಡಿಪಾರು ಮಾಡಿ ಪೂರ್ವ ವಿಭಾಗದ ಡಿಸಿಪಿ ಎಸ್‌.ಡಿ.ಶರಣಪ್ಪ ಆದೇಶಿಸಿದ್ದಾರೆ.

ನಗರದಲ್ಲಿ ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ಅಧಿಕಾರವನ್ನು ಬಳಸಿ ರೌಡಿಯನ್ನು ಡಿಸಿಪಿಯೊಬ್ಬರು ಗಡಿಪಾರು ಮಾಡಿದ ಮೊದಲ ಪ್ರಕರಣ ಇದಾಗಿದೆ. ಇದುವರೆಗೆ ಗಡಿಪಾರು ಆದೇಶವನ್ನು ನಗರ ಪೊಲೀಸ್‌ ಆಯುಕ್ತರು ಮಾಡುತ್ತಿದ್ದರು. ಗೌತಮಪುರದ ನಿವಾಸಿ ಕಾರ್ತಿಕ್‌ ಅಲಿಯಾಸ್‌ ರಾಹುಲ್‌ ಗಡಿಪಾರು ಶಿಕ್ಷೆಗೊಳಗಾಗಿದ್ದು, ಹಲಸೂರು ಠಾಣೆ ಇನ್‌ಸ್ಪೆಕ್ಟರ್‌ ನೀಡಿದ ವರದಿ ಆಧರಿಸಿ ಡಿಸಿಪಿ ಈ ಕ್ರಮ ಜರುಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುದ್ರಾ ಸಾಲ ಕೊಡಿಸುವ ನೆಪದಲ್ಲಿ 62 ಲಕ್ಷ ವಂಚನೆ

ಕಾರ್ತಿಕ್‌ ವಿರುದ್ಧ ಕೊಲೆ ಯತ್ನ, ವಂಚನೆ, ಜೀವ ಬೆದರಿಕೆ, ಅತ್ಯಾಚಾರ, ಸರ್ಕಾರಿ ನೌಕರರ ಮೇಲೆ ಹಲ್ಲೆ, ದರೋಡೆ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ. ಈ ಕ್ರಿಮಿನಲ್‌ ಇತಿಹಾಸದ ಹಿನ್ನೆಲೆಯಲ್ಲಿ ಆತನ ಮೇಲೆ ಹಲಸೂರು ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಗೂಂಡಾ ವರ್ತನೆ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿದ್ದ ಸಾರ್ವಜನಕಿ ಆಸ್ತಿ ಹಾಸ್ತಿ ನಾಶ ಮಾಡಿದ್ದ. ಈತನ ವರ್ತನೆಯಿಂದ ಸಾರ್ವಜನಿಕರು ಆತಂಕಗೊಂಡಿದ್ದಾರೆ. ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಡಿಸಿಪಿ ಅವರಿಗೆ ಇನ್‌ಸ್ಪೆಕ್ಟರ್‌ ವರದಿ ಸಲ್ಲಿಸಿದ್ದರು. ಅಂತೆಯೇ ಡಿಸಿಪಿ ಗಡಿಪಾರು ಆದೇಶ ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.