ಆರೋಪಿಗಳಿಂದ 40 ಸಾವಿರ ನಗದು, ಮೂರು ಮೊಬೈಲ್ ಫೋನ್‌ಗಳು, ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರಭು ಎಂಬಾತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು.
ಬೆಂಗಳೂರು(ಮಾ.14): ಇತ್ತೀಚೆಗೆ ಬೆಂಗಳೂರು ಜಲಮಂಡಳಿ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಗುತ್ತಿಗೆದಾರ ಹಾಗೂ ಕಾರ್ಮಿಕರನ್ನು ಬೆದರಿಸಿ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ಸೇರಿ ಆತನ ಐದು ಮಂದಿ ಸಚಹರರನ್ನು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಳೆ ಬೈಯಪ್ಪನಹಳ್ಳಿ ಭೈರಪ್ಪ ಗಾರ್ಡನ್ ನಿವಾಸಿ ರಾಜು ಅಲಿಯಾಸ್ ರಾಜದೊರೈ (30), ಸುಧಾಮ ನಗರದ ಅರುಣ್ ಕುಮಾರ್ (29), ಕಾಕ್ಸ್‌ಟೌನ್‌ನ ದಿನೇಶ್ (21), ಹಳೆ ಬೈಯಪ್ಪನಹಳ್ಳಿಯ ಯಾಸೀನ್ (20), ಜೋಸೆಫ್ ಅಲಿಯಾಸ್ ಜಾನ್ಸನ್ (22), ಕಾರ್ತಿಕ್ (22) ಬಂಧಿತರು. ಆರೋಪಿಗಳಿಂದ 40 ಸಾವಿರ ನಗದು, ಮೂರು ಮೊಬೈಲ್ ಫೋನ್‌ಗಳು, ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪ್ರಭು ಎಂಬಾತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮತ್ತೊಬ್ಬ ನಕಲಿ ಎಸ್‌ಪಿ: ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ ಖದೀಮ..!
ಬೈಯಪ್ಪನಹಳ್ಳಿ ರೈಲ್ವೆ ಗೇಟ್ ಸಮೀಪದ ಕತ್ತಾಳಿಪಾಳ್ಯ ರಸ್ತೆಯಲ್ಲಿ ಫೆ.24ರಂದು ರಾತ್ರಿ 12.30ರ ಸುಮಾರಿಗೆ ಗುತ್ತಿಗೆದಾರ ವಿ.ಸುಂದರ್ ರಾಮನ್ ಹಾಗೂ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಆರೋಪಿಗಳು ಕಾಮಗಾರಿ ಸ್ಥಳಕ್ಕೆ ಬಂದು ಕಾರ್ಮಿಕರ ಹಲ್ಲೆ ನಡೆಸಿ ಬೆದರಿಸಿ .9 ಸಾವಿರ ನಗದು ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ, ವಿ.ಸುಂದರ್ ರಾಮನ್ ಅವರ ಮೊಬೈಲ್ ಕಿತ್ತುಕೊಂಡು ಗೂಗಲ್ ಪೇ ಮೂಲಕ .40 ಸಾವಿರವನ್ನು ವರ್ಗಾಯಿಸಿಕೊಂಡಿದ್ದರು. ಸ್ಥಳದಲ್ಲಿದ್ದ ಎರಡು ಡೀಸೆಲ್ ತುಂಬಿದ ಕ್ಯಾನ್‌ಗಳು, ಒಂದು ಪೆಟ್ರೋಲ್ ತುಂಬಿದ ಕ್ಯಾನ್ ಎತ್ತಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ದರೋಡೆಗೆ ರೌಡಿ ಕುಮ್ಮಕ್ಕು
ಬೈಯಪ್ಪನಹಳ್ಳಿ ಠಾಣೆ ರೌಡಿ ಶೀಟರ್ ರಾಜು ಕುಮ್ಮಕ್ಕಿನಿಂದ ಆರೋಪಿಗಳು ದರೋಡೆ ಮಾಡಿದ್ದರು. ರೌಡಿ ರಾಜುನನ್ನು 2021ನೇ ಸಾಲಿನಲ್ಲಿ ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿತ್ತು. ಈತನ ವಿರುದ್ಧ ಈ ಹಿಂದೆ ಬೈಯಪ್ಪನಹಳ್ಳಿ, ಕೆ.ಆರ್.ಪುರ, ಹೆಣ್ಣೂರು, ಪುಲಿಕೇಶಿನಗರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಹಲ್ಲೆ ಸೇರಿದಂತೆ 17 ಪ್ರಕರಣಗಳು ದಾಖಲಾಗಿವೆ. ಅಪರಾಧ ಹಿನ್ನೆಲೆಯ ಯುವಕ ಗುಂಪು ಕಟ್ಟಿಕೊಂಡು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದಾನೆ. ಈ ಪ್ರಕರಣದಲ್ಲಿಯೂ ಈತನ ಕುಮ್ಮಕ್ಕಿನ ಮೇರೆಗೆ ಆರೋಪಿಗಳು ಕಾರ್ಮಿಕರನ್ನು ಹೆದರಿಸಿ ಸುಲಿಗೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
