ಬೆಂಗಳೂರು: ಮನೆಗೆ ನುಗ್ಗಿ ಸುಲಿಗೆ ಮಾಡಿದ್ದ ರೌಡಿಗಳ ಬಂಧನ
ಈ ಘಟನೆ ಸಂಬಂಧ ಬೊಮ್ಮನಹಳ್ಳಿ ಠಾಣೆಗೆ ಸಂತ್ರಸ್ತ ಸತೀಶ್ ದೂರು ನೀಡಿದ್ದ. ಅದರನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು(ಅ.13): ತನ್ನ ಗೆಳತಿ ಮನೆಯಲ್ಲಿದ್ದಾಗ ಆಟೋ ಚಾಲಕ ಹಾಗೂ ಆತನ ಸ್ನೇಹಿತನಿಗೆ ಜೀವ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ್ದ ಐವರು ರೌಡಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರೌಡಿಗಳಾದ ಅಭಿ, ಮಹೇಶ್, ಚಂದ್ರು, ಸಿದ್ದು ಹಾಗೂ ಕಿರಣ್ ಬಂಧಿತರಾಗಿದ್ದು, ಆರೋಪಿಗಳಿಂದ ಚಿನ್ನ ಸರ ಹಾಗೂ ಹಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಗಾರ್ವೆಬಾವಿಪಾಳ್ಯದ ಆಟೋ ಚಾಲಕ ಜಿ.ಬಿ.ಸತೀಶ್ ಹಾಗೂ ಆಕೆಯ ಸ್ನೇಹಿತ ರವಿಗೆ ಬೆದರಿಕೆ ಹಾಕಿ ಆರೋಪಿಗಳು ಹಣ ಸುಲಿಗೆ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು ಬೆದರಿಕೆ:
ಗಾರ್ವೆಬಾವಿಪಾಳ್ಯದ ತನ್ನ ಗೆಳತಿ ಮನೆಗೆ ಸೋಮವಾರ ಸ್ನೇಹಿತ ರವಿ ಜತೆ ಆಟೋ ಚಾಲಕ ಸತೀಶ್ ತೆರಳಿದ್ದ. ಆ ವೇಳೆ ಮಧ್ಯಾಹ್ನ 3.30ರ ಸುಮಾರಿಗೆ ಆ ಮನೆಗೆ ಸಿದ್ದು ಹಾಗೂ ಆತನ ಸಹಚರರು ದಿಢೀರನೇ ನುಗ್ಗಿದ್ದಾರೆ. ಮನೆ ಬಾಗಿಲು ಬಡಿದಾಗ ಆಟೋ ಚಾಲಕನ ಸ್ನೇಹಿತೆ ತೆರೆದಿದ್ದಳು. ಮನೆಯೊಳಗೆ ಪ್ರವೇಶಿಸಿದ ಕೂಡಲೇ ಮಾರಕಾಸ್ತ್ರಗಳನ್ನು ತೋರಿಸಿ ಕಿರುಚಿಕೊಳ್ಳದಂತೆ ಅಲ್ಲಿದ್ದ ಮೂವರಿಗೆ ಸುಲಿಗೆಕೋರರು ಬೆದರಿಸಿದ್ದಾರೆ.
ಬಳ್ಳಾರಿ: ಅಂಧ ಯುವತಿಗೆ ಮೋಸ ಮಾಡಿದ ದುರುಳರು, ನಾಟಿ ಔಷಧಿ ಹೆಸರಲ್ಲಿ ವಂಚನೆ..!
ಬಳಿಕ ಸತೀಶ್ ಹಾಗೂ ಆತನ ಗೆಳೆಯ ರವಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ಮನೆಯಲ್ಲಿದ್ದ ಆಟೋ ಚಾಲಕನ ಗೆಳತಿಯಿಂದ ಎರಡು ಮೊಬೈಲ್‌ಗಳನ್ನು ಕಸಿದುಕೊಂಡಿದ್ದಾರೆ. ನಂತರ ಸತೀಶ್ ಜೇಬಿನಲ್ಲಿದ್ದ ₹15 ಸಾವಿರ ಕಿತ್ತುಕೊಂಡ ಸುಲಿಗೆಕೋರರು, ನಂತರ ಆತ ಹಾಕಿಕೊಂಡಿದ್ದ ಚಿನ್ನದ ಸರ ಮತ್ತು ಉಂಗುರುವನ್ನು ಬಿಚ್ಚಿಸಿಕೊಂಡಿದ್ದಾರೆ. ಈ ಹಂತದಲ್ಲಿ ಪ್ರತಿರೋಧ ತೋರಿದಾಗ ಸತೀಶ್‌ಗೆ ಟ್ಯೂಬ್‌ಲೇಟ್‌ನಿಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ನಂತರ ಮತ್ತೆ 5 ಲಕ್ಷ ರು ಹಣ ಕೊಡುವಂತೆ ಸತೀಶ್‌ಗೆ ಆರೋಪಿಗಳು ಆಗ್ರಹಿಸಿದ್ದರು. ತನ್ನ ಬಳಿ ಹಣವಿಲ್ಲವೆಂದಾಗ ಆತನನ್ನು ಬಲವಂತವಾಗಿ ಮನೆಯಿಂದ ಬೊಮ್ಮನಹಳ್ಳಿ ಸರ್ಕಲ್‌ಗೆ ಐವರ ಪೈಕಿ ಇಬ್ಬರು ಆರೋಪಿಗಳು ಕರೆತಂದಿದ್ದರು. ಇನ್ನುಳಿದ ಮೂವರು, ಸತೀಶನ ಗೆಳೆತಿ ಮನೆಯಲ್ಲೇ ಉಳಿದಿದ್ದರು.
ಮನೆಯಿಂದ ಹೊರಬಂದು ಹಣಕ್ಕಾಗಿ ಸತೀಶ್ ಮೂಲಕ ಆತನ ಗೆಳೆಯರಿಗೆ ಆರೋಪಿಗಳು ಕರೆ ಮಾಡಿಸಿದ್ದರು. ಆದರೆ ಯಾರಿಂದಲೂ ಹಣದ ವ್ಯವಸ್ಥೆಯಾಗಿರಲಿಲ್ಲ. ಕೊನೆಗೆ ಬೊಮ್ಮನಹಳ್ಳಿ ಸರ್ಕಲ್‌ನಿಂದ ಗಾರ್ವೆಬಾವಿಪಾಳ್ಯಕ್ಕೆ ಮರಳುವಾಗ ಮಾರ್ಗ ಮಧ್ಯೆ ತನ್ನ ಗೆಳೆಯನೊಬ್ಬನನ್ನು ಕಂಡು ರಕ್ಷಣೆಗೆ ಜೋರಾಗಿ ಸತೀಶ್ ಕೂಗಿಕೊಂಡಿದ್ದಾನೆ. ತಕ್ಷಣವೇ ಗೆಳೆಯನ ರಕ್ಷಣೆಗೆ ಸತೀಶ್‌ನ ಸ್ನೇಹಿತ ಬಂದಿದ್ದಾನೆ. ಇದರಿಂದ ಗಾಬರಿಗೊಂಡ ಆರೋಪಿಗಳು, ಆತನನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದರು.
ಕುಮಟಾ: ಬೀಚ್ ರೆಸಾರ್ಟ್‌ನಲ್ಲಿ ಅಕ್ರಮ ವೇಶ್ಯಾವಾಟಿಕೆ, ಇಬ್ಬರ ಬಂಧನ
ಬಳಿಕ ಸತೀಶ್‌ನ ಗೆಳತಿ ಮನೆಯಲ್ಲಿದ್ದ ತನ್ನ ಸಹಚರರಿಗೆ ಕರೆ ಮಾಡಿ ಸಿದ್ದು ಅಲ್ಲಿಂದ ಕೂಡಲೇ ತೆರಳುವಂತೆ ಹೇಳಿದ್ದ. ಅಂತೆಯೇ ಅಲ್ಲಿಂದ ಆ ಮೂವರು ತಪ್ಪಿಸಿಕೊಂಡಿದ್ದರು. ಈ ಘಟನೆ ಸಂಬಂಧ ಬೊಮ್ಮನಹಳ್ಳಿ ಠಾಣೆಗೆ ಸಂತ್ರಸ್ತ ಸತೀಶ್ ದೂರು ನೀಡಿದ್ದ. ಅದರನ್ವಯ ತನಿಖೆಗಿಳಿದ ಪೊಲೀಸರು, ಸಿಸಿಟಿವಿ ಕ್ಯಾಮರಾ ಸೇರಿದಂತೆ ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೊಂಚು ಹಾಕಿ ಸುಲಿಗೆ
ಗಾರ್ವೆಬಾವಿಪಾಳ್ಯದಲ್ಲಿರುವ ಸತೀಶ್ ಗೆಳತಿ ಮನೆಗೆ ಇನ್ನೂ ''ಕೆಲವರು'' ಭೇಟಿ ನೀಡುತ್ತಿದ್ದರು. ಈ ವಿಚಾರ ತಿಳಿದ ರೌಡಿಗಳು, ಆಕೆಯ ಮನೆಗೆ ಬರುವ ಅತಿಥಿಗಳಿಗೆ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡಲು ಹೊಂಚು ಹಾಕಿದ್ದರು. ಅಂತೆಯೇ ಆಕೆಯ ಮನೆಗೆ ಬಂದ ಸತೀಶ್ ಹಾಗೂ ಆತನ ಸ್ನೇಹಿತನನ್ನು ಆರೋಪಿಗಳು ಬೆದರಿಸಿ ಸುಲಿಗೆ ಮಾಡಿದ್ದರು ಎಂದು ತಿಳಿದು ಬಂದಿದೆ.