ಮುಂಬೈ(ಸೆ.02): ಕನ್ನಡ ಹಾಗೂ ಹಿಂದಿ ಚಿತ್ರರಂಗದಲ್ಲಿ ಮಾದಕ ವಸ್ತು ಸೇವನೆ ಕುರಿತು ಬಿರುಗಾಳಿ ಎದ್ದಿರುವಾಗಲೇ, ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಅಧಿಕಾರಿಗಳು ಬೆಂಗಳೂರು, ಮುಂಬೈ ಹಾಗೂ ಗೋವಾದ ಹೈಎಂಡ್‌ ‘ಪೇಜ್‌ 3 ಸೆಲೆಬ್ರಿಟಿಗಳಿಗೆ’ ಸಾಗಣೆಯಾಗುತ್ತಿದ್ದ ಡ್ರಗ್ಸ್‌ ಜಾಲವೊಂದನ್ನು ಭೇದಿಸಿದ್ದಾರೆ.

ಸುಶಾಂತ್ ಸಿಂಗ್ ಕೊಲೆ ಅನ್ನೋಕೆ ನೋ ಪ್ರೂಫ್: ಆತ್ಮಹತ್ಯೆ ಆ್ಯಂಗಲ್‌ನಲ್ಲಿ ಸಿಬಿಐ ತನಿಖೆ

ಅಮೆರಿಕ ಹಾಗೂ ಕೆನಡಾದಿಂದ ಬಂದಿದ್ದ 3.5 ಕೇಜಿ ಗಾಂಜಾವನ್ನು ದೆಹಲಿ ಮತ್ತು ಮುಂಬೈನ ವಿದೇಶಿ ಅಂಚೆ ಕಚೇರಿಗಳಿಂದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದ ಆರೋಪಿಯಾಗಿರುವ ನಟಿ ರಿಯಾ ಚಕ್ರವರ್ತಿಗೆ ಸಂಬಂಧಿಸಿದಂತೆ ಆತ ಮಹತ್ವದ ಮಾಹಿತಿ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ರಿಯಾ ಚಕ್ರವರ್ತಿಗೆ ಹೊಸ ಸಂಕಷ್ಟಎದುರಾಗಿದೆ.

ಮತ್ತೊಂದೆಡೆ ಅಧಿಕಾರಿಗಳ ತನಿಖೆ ವೇಳೆ, ಗೋವಾದ ಪ್ರಮುಖ ರೆಸಾರ್ಟ್‌ವೊಂದರಲ್ಲಿ ಚಾಲಕನಾಗಿದ್ದ ಎಫ್‌. ಅಹಮದ್‌ ಎಂಬಾತ ಸಿಕ್ಕಿದ್ದು, ಆತ ಬೆಂಗಳೂರಿನಲ್ಲಿ ಪೇಜ್‌ 3 ಸೆಲೆಬ್ರಿಟಿಗಳ ಜತೆ ನಂಟು ಹೊಂದಿರುವ ವ್ಯಕ್ತಿಗಳಿಗೆ ಮಾದಕ ವಸ್ತು ಸಾಗಿಸುತ್ತಿದ್ದ ಎಂಬ ಮಾಹಿತಿ ಪತ್ತೆಯಾಗಿದೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಿಯಾ & ಸುಶಾಂತ್ ಮಧ್ಯೆ ಮಹೇಶ್ ಭಟ್‌ಗೇನು ಕೆಲಸ..? ನಟಿ ಸುಚಿತ್ರಾ ಪ್ರಶ್ನೆ

ಬೆಂಗಳೂರು ಸ್ಮಗ್ಲರ್‌ ಪತ್ತೆ:

ರಿಯಾ ಚಕ್ರವರ್ತಿ ಮೊಬೈಲ್‌ ಚಾಟ್‌ ಹಾಗೂ ಸಂದೇಶಗಳ ಕುರಿತು ತನಿಖೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾದಕ ವಸ್ತು ಖರೀದಿ, ಬಳಕೆಯ ಸುಳಿವು ಸಿಕ್ಕಿದೆ. ಅದನ್ನು ಎನ್‌ಸಿಬಿ ಹಾಗೂ ಸಿಬಿಐ ಅಧಿಕಾರಿಗಳಿಗೆ ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಎನ್‌ಸಿಬಿ ತನಿಖೆಗೆ ಇಳಿದಿದೆ. ಕಳೆದ ವಾರ ಇಬ್ಬರು ವ್ಯಕ್ತಿಗಳನ್ನು ಮುಂಬೈನಲ್ಲಿ ಎನ್‌ಸಿಬಿ ಬಂಧಿಸಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಹೊಸ ಜಾಲ ಬೆಳಕಿಗೆ ಬಂದಿದೆ.

ಅದರಂತೆ ಮುಂಬೈ ಹಾಗೂ ದೆಹಲಿಯಲ್ಲಿರುವ ವಿದೇಶಿ ಅಂಚೆ ಕಚೇರಿಯಲ್ಲಿ ದಾಳಿ ನಡೆಸಿ 3.5 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದು ಪ್ರತಿ ಗ್ರಾಂಗೆ 5000 ರು.ಗೆ ಮಾರಾಟವಾಗುತ್ತಿತ್ತು ಎನ್ನಲಾಗಿದೆ. ಈ ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ. ದೆಹಲಿ ಅಂಚೆ ಕಚೇರಿಗೆ ಅಮೆರಿಕದಿಂದ, ಮುಂಬೈಗೆ ಕೆನಡಾದಿಂದ ಮಾದಕ ವಸ್ತು ಬಂದಿತ್ತು. ದೆಹಲಿಗೆ ಬಂದಿದ್ದ ಮಾಲನ್ನು ಮುಂಬೈಗೆ ಹಾಗೂ ಮುಂಬೈನ ಮಾಲನ್ನು ಗೋವಾಕ್ಕೆ ಸಾಗಿಸಲಾಗುತ್ತಿತ್ತು. ಇದರ ಬೆನ್ನತ್ತಿದಾಗ ಗೋವಾದ ಅಹಮದ್‌ ಪತ್ತೆಯಾಗಿದ್ದಾನೆ. ಆತ ಬೆಂಗಳೂರಿಗೆ ಸಾಗಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮಾದಕ ವಸ್ತುವಿಗೆ ಭಾರಿ ಬೇಡಿಕೆ ಇರುವ ಕಾರಣ ಬೆಲೆ ಗಗನಕ್ಕೇರಿದೆ. ಖರೀದಿದಾರರು ಹಾಗೂ ಬಳಕೆದಾರರ ಮಾಹಿತಿ ಸಿಗದಂತೆ ಮಾಡುವ ಡಾರ್ಕ್ನೆಟ್‌ ಹಾಗೂ ಕ್ರಿಪ್ಟೋಕರೆನ್ಸಿ ಬಳಸಿ ಈ ದಂಧೆ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.